Advertisement

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ದಲಿತ ಸಿಎಂ ಕುರಿತು ಚರ್ಚೆ :ಎಂ.ಬಿ.ಪಾಟೀಲ್

11:30 AM Nov 12, 2021 | Team Udayavani |

ವಿಜಯಪುರ : ರಾಜ್ಯದಲ್ಲಿ ಸದ್ಯ ಅಧಿಕಾರದಲ್ಲಿರುವ ಬಿಜೆಪಿ ದಲಿತ ಸಿಎಂ ಮಾಡಿ ತೋರಿಸಲಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಅಗತ್ಯದ 115 ಸ್ಥಾನ ಗೆದ್ದ ಬಳಿಕ ಈ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಶುಕ್ರವಾರ ಹೇಳಿಕೆ ನೀಡಿದ್ದಾರೆ.

Advertisement

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದಲಿತ ಸಿಎಂ ಕುರಿತು ‌ಪಕ್ಷ ನಿರ್ಧಾರ ಮಾಡುತ್ತದೆ.ಮೊದಲು ನಮ್ಮ ಸರ್ಕಾರ ಅಧಿಕಾರಕ್ಕೆ ಬರಬೇಕು. ಈಗ ನಾವು ಅಧಿಕಾರದಲ್ಲಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಿ.ಎಂ. ವಿಷಯ ಚರ್ಚೆ ಅಪ್ರಸ್ತುತ ಎಂದರು.

ರಾಜ್ಯದಲ್ಲಿ ಸದ್ಯ ಬಿಜೆಪಿ ಅಧಿಕಾರದಲ್ಲಿದ್ದು, ಅವರು ದಲಿತ ಸಮುದಾಯದ ವ್ಯಕ್ತಿಯನ್ನು ಸಿ.ಎಂ. ಮಾಡಿ ತೋರಿಸಲಿ.
ನಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಾಗ ನಾವು ಈ ಬಗ್ಗೆ ಮಾತನಾಡುತ್ತೇವೆ ಎಂದರು.

ಇನ್ನು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ದಲಿತರ ವಿರುದ್ಧ ಎಲ್ಲೂ ಮಾತನಾಡಿಲ್ಲ. ಆದರೂ ದಲಿತ ವಿರೋಧಿ ಎಂಬಂತೆ ಬಿಜೆಪಿ ಹೋರಾಟ ನಡೆಸುತ್ತಿರುವುದು ರಾಜಕೀಯ ಸಣ್ಣತನ ಎಂದು ದೂರಿದರು.

ದಲಿತರ ಬಗ್ಗೆ ಕಾಳಜಿ, ಬದ್ಧತೆ ಇರುವ ಸಿದ್ದರಾಮಯ್ಯ ದಲಿತರ ವಿರುದ್ಧ ಮಾತನಾಡಲು ಸಾಧ್ಯವಿಲ್ಲ. ದಲಿತರ ಬಗ್ಗೆ ಅವರಿಗೆ ಇರುವಷ್ಡು ಕಾಳಜಿ ಬೇರೆ ಯಾರಿಗೂ ಇಲ್ಲ.ವಿಶೇಷ ಘಟಕ ಯೋಜನೆಯಲ್ಲಿ ದೇಶದಲ್ಲೇ ಮೊದಲು ಶೇ. 24 ಇದ್ದ ಬಜೆಟ್ ನಲ್ಲಿ 4 ಸಾವಿರ ಕೋಟಿ ರೂ. ಇದ್ದುದನ್ನು 25 ಸಾವಿರ ಕೋಟಿ ರೂ.ವರೆಗೆ ಅನುದಾನ‌ ಮೀಸಲು ಇರಿಸಿದ್ದೇ ಸಿದ್ದರಾಮಯ್ಯ. ಅಲ್ಲದೇ ಈ ಅನುದಾನ ಬಳಕೆ ವಿಷಯದಲ್ಲಿ ಕಾನೂನು ಬದ್ಧತೆ ಕಲ್ಪಿಸಿರುವ ಸಿದ್ದರಾಮಯ್ಯ ಅವರ ದಲಿತ ಪರ ಕಾಳಜಿಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

Advertisement

ದಲಿತರನ್ನು ಬಳಸಿಕೊಂಡು ಬಿಜೆಪಿ ರಾಜಕಾರಣ ಮಾಡಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಂಡು ಪ್ರತಿಭಟನೆ ಮಾಡುತ್ತಿದೆ ಎಂದು ಎಂ ಬಿ ಪಾಟೀಲ್ ಕಿಡಿ ಕಾರಿದರು.

ಸಿಂದಗಿ ಮತಕ್ಷೇತ್ರದ ಚುನಾವಣಾ ಫಲಿತಾಂಶ ಮತದಾರ ನೀಡುದ ತೀರ್ಪಿಗೆ ಎಲ್ಲರೂ ತಲೆ ಬಾಗಬೇಕು.
ನಾವೂ ತಲೆ ಬಗ್ಗಿಸಿ ಸೋಲು ಒಪ್ಪಿಕೊಳ್ಳುತ್ತೇವೆ. ಆದರೆ ಅಲ್ಲಿ ಸರ್ಕಾರ ಸಚಿವರನ್ನು ಮುಂದಿಟ್ಟುಕೊಂಡು ಹಣದ ಹೊಳೆ ಹರಿಸಿ ಚುನಾವಣೆ ಗೆದ್ದಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಸಿಂದಗಿ ಕ್ಷೇತ್ರದಲ್ಲಿ ಹಿಂದಿನ 3-4 ಚುನಾವಣೆ ಅವಲೋಕಿಸಿದರೆ ಕಾಂಗ್ರೆಸ್‌ ಮತ ಗಳಿಕೆ ಮೂರು ಪಟ್ಟು ಹೆಚ್ಚಿದೆ. ಅಲ್ಲೀಗ 60 ಸಾವಿರ ಮತಗಳನ್ನು ಪಡೆದಿದ್ದೇವೆ. 2023 ರ ಚುನಾವಣೆಯಲ್ಲಿ 8 ವಿಧಾನ ಸಭಾ ಮತಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಘೋಷಣೆ ಹಿನ್ನಲೆ ನ.14 ರಂದು ಪಕ್ಷದ ವರಿಷ್ಠರು ವಿಭಾಗವಾರು ಸಭೆ ಕರೆದಿದ್ದಾರೆ. ಕೆಪಿಸಿಸಿ ಅದ್ಯಕ್ಷರು, ವಿರೋಧ ಪಕ್ಷದ ನಾಯಕರು, ಪಕ್ಷದ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರ ನೇತೃತ್ವದಲ್ಲಿ ಸಭೆಯಲ್ಲಿ ಅಭ್ಯರ್ಥಿ ಆಯ್ಕೆಯ ಕುರಿತು ಚರ್ಚೆ ಆಗಲಿದೆ.

ವಿಭಾಗವಾರು ಜನಪ್ರತಿ‌ನಿಧಿಗಳು ಚರ್ಚಿಸಿದ ಬಳಿಕವೇ ಅಭ್ಯರ್ಥಿಯ ಆಯ್ಕೆಯ ಕುರಿತು ಹೈ ಕಮಾಂಡ್ ಗೆ ಪಟ್ಟಿಯನ್ನು ರವಾನೆ ಮಾಡಲಾಗುತ್ತದೆ.

ಸದ್ಯ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ದ್ವಿಸದಸ್ಯತ್ವದ ಕ್ಷೇತ್ರಗಳು ಕಾಂಗ್ರೆಸ್ ವಶದಲ್ಲಿವೆ.
ಪಕ್ಷ ಹಾಗೂ ಜನಪ್ರತಿನಿಧಿಗಳ ನಿರ್ಣಯದ ಅನ್ವಯ ಹೈ ಕಮಾಂಡ್ ಅಭ್ಯರ್ಥಿ ಆಯ್ಕೆಯ ನಿರ್ಧಾರ ಆಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next