ಬೆಂಗಳೂರು: ಸಿಎಂ ಕನಸು ಕಾಣುವ ದಲಿತರು ಹುಚ್ಚರು ಎಂಬ ಕೇಂದ್ರ ಸಚಿವ ನಾರಯಣಸ್ವಾಮಿ ಹೇಳಿಕೆಯಿಂದ ಬಿಜೆಪಿಯವರು ದಲಿತರನ್ನು ಸಿಎಂ ಮಾಡುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಆದರೆ ನಮ್ಮ ಪಕ್ಷದ ಬಗ್ಗೆ ಅವರಿಗೇನು ಗೊತ್ತು. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗೂ ಅವಕಾಶವಿದೆ ಎಂದು ಮಾಜಿ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು. ಈ ಮೂಲಕ ಕಾಂಗ್ರೆಸ್‌ನಲ್ಲಿ ಮತ್ತೆ ದಲಿತ ಸಿಎಂ ಕೂಗು ಮುನ್ನೆಲೆಗೆ ಬಂದಿದೆ.
ಸಿದ್ದರಾಮಯ್ಯ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮತ್ತು ಸಿದ್ದರಾಮಯ್ಯನವರದ್ದು ಹಳೆ ಸಂಬಂಧವಾಗಿದೆ. ಎಂಟು ವರ್ಷ ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷದ ಕೆಲಸ, ಇತ್ತೀಚಿನ ಪರಿಷತ್ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.
ರಾಜ್ಯಸಭೆ ವಿಚಾರದ ತೀರ್ಮಾನವನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ಬಿಡುವುದು ನಮ್ಮ ಸಂಪ್ರದಾಯ. ದೇಶದ ಚಿತ್ರಣ ನೋಡಿಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಎಂದ ಅವರು, ಜೈರಾಮ್ ರಮೇಶ್ ಗೆ ರಾಜ್ಯಸಭಾ ಟಿಕೆಟ್ ನೀಡುವ ಬಗ್ಗೆ ಸುದರ್ಶನ್ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸುದರ್ಶನ್ ಹೇಳುವುದರಲ್ಲಿ ತಪ್ಪೇನಿಲ್ಲ. ರಾಷ್ಟ್ರ ಮಟ್ಟದ ನಾಯಕರನ್ನು ಪಕ್ಷದಲ್ಲಿ ಉಳಿಸಿಕೊಳ್ಳಬೇಕಾದ ತೀರ್ಮಾನ ಪಕ್ಷಕ್ಕೆ ಬಿಟ್ಟಿದ್ದು. ಆದ್ದರಿಂದ ಬೇರೆ ರಾಜ್ಯದಿಂದ ಹಿರಿಯ ನಾಯಕರನ್ನು ತರುತ್ತಾರೆ ಎಂದರು.
ಪಕ್ಷದ ಕಾರ್ಯಕ್ರಮದಿಂದ ಪರಮೇಶ್ವರ್ ದೂರ ಉಳಿದಿದ್ದಾರೆ ಎಂಬ ವಿಚಾರಕ್ಕೆ ಮಾತನಾಡಿ, ನಾನು ಯಾಕೆ ಸಿಟ್ಟು ಮಾಡಿಕೊಳ್ಳಲಿ. ವೈಯಕ್ತಿಕ ಕಾರಣದಿಂದ ಕೆಲ ಕಾರ್ಯಕ್ರಮಕ್ಕೆ ಹೋಗಿಲ್ಲ. ಸಕ್ರಿಯವಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಹಿಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಿಲ್ಲಾ ಪ್ರವಾಸ ಮಾಡಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ್ದೇವೆ. ತುಮಕೂರಿನ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೇನೆ ಎಂದರು.