ಮಂಗಳೂರು: ಬೇಸಗೆ ಆರಂಭವಾಗಿದ್ದು, ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಹೀಗಾಗಿ ಕಾರ್ಮಿಕರ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಹೇಳಿದರು.
ದ.ಕ. ಜಿಲ್ಲೆಯ ಎಲ್ಲ ವರ್ಗದ ಕಾರ್ಮಿಕರಿಗೆ ಕೆಲಸದ ಸ್ಥಳಗಳಲ್ಲಿ ಕಾರ್ಮಿಕರ ಸುರಕ್ಷತೆ ಬಗ್ಗೆ ಅಗತ್ಯ ಸೌಲಭ್ಯ, ಆರೋಗ್ಯದ ಬಗ್ಗೆ ಕಾಳಜಿ, ಶುದ್ಧ ಕುಡಿಯುವ ನೀರು ಮತ್ತು ಆಹಾರದ ಲಭ್ಯತೆ ಮತ್ತು ಇತರ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಎಲ್ಲ ಉದ್ಯೋಗದಾತರ, ಗುತ್ತಿಗೆದಾರರ ಹಾಗೂ ನಿಯೋಜಕರ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.
ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿರುವ ಎಲ್ಲಾ ವಿವಿಧ ಕಾರ್ಮಿಕರು, ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು, ವಾಣಿಜ್ಯ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು, ಹೋಟೆಲ್ ಸಂಬಂಧಿತ ಸಂಸ್ಥೆಗಳಲ್ಲಿನ ಕಾರ್ಮಿ ಕರು ಸೇರಿದಂತೆ ಜಿಲ್ಲೆಯ ಎಲ್ಲಾ ಕಾರ್ಮಿಕರಿಗೆ ಕೆಲವೊಂದು ಅಗತ್ಯ ಸೌಲಭ್ಯಗಳನ್ನು ಒದಗಿಸಿ ಕೊಡುವಂತೆ ದ.ಕ. ಜಿಲ್ಲಾಧಿಕಾರಿಗಳು ಸೂಚಿಸಿ ದರು.
ಕೆಲಸದ ಸ್ಥಳಗಳಲ್ಲಿ ಕಾರ್ಮಿಕರ ಸುರಕ್ಷತೆಯ ಬಗ್ಗೆ ಅಗತ್ಯವಾದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಮತ್ತು ಕಾರ್ಮಿಕರಿಗೆ ಅಗತ್ಯವಿರುವ ಸುರಕ್ಷತಾ ಸಾಮಾಗ್ರಿಗಳನ್ನು ತಪ್ಪದೇ ಒದಗಿಸುವುದು (ಶೂಗಳು, ಹೆಲ್ಮೆಟ್, ಗ್ಲೌಸ್ ಇತ್ಯಾದಿ), ಕೆಲಸದ ಸ್ಥಳದಲ್ಲಿ ಕಾರ್ಮಿಕರಿಗೆ ಅಗತ್ಯ ಸಂದರ್ಭದಲ್ಲಿ ಆರೋಗ್ಯ ತಪಾಸಣ ವ್ಯವಸ್ಥೆಯನ್ನು ಕೈಗೊಳ್ಳಬೇಕು. ಕೆಲಸದ ಸ್ಥಳದಲ್ಲಿ ಪ್ರಥಮ ಚಿಕಿತ್ಸಾ ಸೌಲಭ್ಯಗಳನ್ನು ಕಡ್ಡಾಯವಾಗಿ ವ್ಯವಸ್ಥೆಗೊಳಿಸಬೇಕು ಎಂದು ತಿಳಿಸಿದ್ದಾರೆ.
ಕಾರ್ಮಿಕರಿಗೆ ಶುದ್ಧ ಕುಡಿಯುವ ನೀರು ಮತ್ತು ಆಹಾರ ಸೌಲಭ್ಯವನ್ನು ವ್ಯವಸ್ಥೆಗೊಳಿಸಬೇಕು. ಬಿಸಿಲಿನಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಅಗತ್ಯ ನೆರಳಿನ ಸೌಲಭ್ಯ ಕಲ್ಪಸಬೇಕು. ಹಿರಿಯ ಕಾರ್ಮಿಕರಿಗೆ ಮತ್ತು ಮಹಿಳಾ ಕಾರ್ಮಿಕರಿಗೆ ವಿಶೇಷವಾಗಿ ಗರ್ಭಿಣಿಯರಿಗೆ/ಬಾಣಂತಿಯರಿಗೆ ಅಗತ್ಯ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕು.
ಕಾರ್ಮಿಕರಿಗೆ ವಿವಿಧ ಕಾರ್ಮಿಕ ಕಾಯ್ದೆಗಳನ್ವಯ ದೊರೆಯಬೇಕಾದ ಕನಿಷ್ಠವೇತನ, ಸಕಾಲದಲ್ಲಿ ವೇತನ ಪಾವತಿ ಇತರ ಸೌಲಭ್ಯಗಳನ್ನು ತಪ್ಪದೇ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆಗಳನ್ವಯ ನೀಡಬೇಕು ಎಂದು ಹೇಳಿದ್ದಾರೆ.