ಮಂಗಳೂರು : ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ಸರಕಾರದಿಂದ ಸೌಲಭ್ಯ ಕಲ್ಪಿಸಿಕೊಡುವ ಸಂದರ್ಭದಲ್ಲಿ ಸ್ಥಳ ಪರಿಶೀಲನೆ ಮಾಡುವಾಗ ಸಂಬಂಧಪಟ್ಟ ಇಲಾಖೆಗಳ ವಾಹನಗಳನ್ನು ಮಾತ್ರ ಬಳಸಬೇಕು. ಫಲಾನುಭವಿಗಳೇ ವಾಹನ ಸೌಲಭ್ಯ ಕಲ್ಪಿಸಬೇಕೆಂದು ಬಯಸಬಾರದು. ಆ ರೀತಿ ಮಾಡಿದರೆ ಸಂಬಂಧಿಸಿದ ಅಧಿಕಾರಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಎಚ್ಚರಿಕೆ ನೀಡಿದ್ದಾರೆ.
ಗುರುವಾರ ತಮ್ಮ ಕಚೇರಿಯಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುವ ಸಂದರ್ಭ ಸಂಬಂಧಿಸಿದ ಇಲಾಖೆಯವರು ಸಾರಿಗೆ ಸೌಲಭ್ಯವನ್ನು ಫಲಾನುಭವಿಗಳಿಂದ ಅಪೇಕ್ಷಿಸುತ್ತಾರೆ ಎಂದು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರೊಬ್ಬರು ಸಭೆಯಲ್ಲಿ ತಿಳಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಈ ನಿರ್ದೇಶನ ನೀಡಿದರು.
ಪ್ರಮಾಣ ಪತ್ರ ದುರ್ಬಳಕೆ ಬೇಡ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ಪಡೆದು ದುರುಪಯೋಗ ಪಡಿಸಿದಲ್ಲಿ ತನಗೆ ದೂರು ಸಲ್ಲಿಸುವಂತೆ ತಿಳಿಸಿದ ಜಿಲ್ಲಾಧಿಕಾರಿ, ಆ ಪ್ರಮಾಣ ಪತ್ರವನ್ನು ವಜಾ ಮಾಡುವುದಲ್ಲದೇ ಸಂಬಂಧಿತರ ವಿರುದ್ಧ ಕ್ರಮ ಜರಗಿಸುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ನಮ್ಮ ಕ್ಲಿನಿಕ್‌ಗಳ ಸಿಬಂದಿ, ದಾದಿಯರು, ತಾಂತ್ರಿಕ ಸಿಬಂದಿ ನೇಮಕಾತಿ ಪ್ರಕ್ರಿಯೆ ನೇರವಾಗಿ ರಾಜ್ಯ ಸರಕಾರದಿಂದ ಆದ ಕಾರಣ ಜಿಲ್ಲಾ ಮಟ್ಟದಲ್ಲಿ ನೇಮಕಾತಿಗೆ ಅವಕಾಶವಿರಲಿಲ್ಲ. ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸಿಬಂದಿ ನೇಮಕ ಮಾಡುವ ಸಂದರ್ಭ ಪರಿಶಿಷ್ಟ ಜಾತಿ/ಪಂಗಡದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಕೆ.ಎಚ್., ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿದ್ಧಲಿಂಗೇಶ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನ ನಿರ್ದೇಶಕ ಅಭಿಷೇಕ್ ಸೇರಿದಂತೆ ಜಿಲ್ಲಾ ಅಧಿಕಾರಿಗಳು, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು ಸಭೆಯಲ್ಲಿದ್ದರು.