Advertisement

ಕೋವಿಡ್ 19 ಕಳವಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಸರಕಾರಿ ಸೇವೆಗಳು ಸ್ಥಗಿತ

10:02 AM Mar 21, 2020 | mahesh |

ಮಂಗಳೂರು: ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಸರಕಾರಿ ಸೇವೆಗಳನ್ನು ಮಾ. 31ರ ವರೆಗೆ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಆದೇಶಿಸಿದ್ದಾರೆ.

Advertisement

ಸಾರ್ವಜನಿಕರು ಸರಕಾರದ ವಿವಿಧ ಸೇವೆಗಳನ್ನು ಪಡೆಯುವ ಉದ್ದೇಶದಿಂದ ಹೆಚ್ಚಿನ ಸಂಖ್ಯೆ ಯಲ್ಲಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದ ಕಚೇರಿಗಳಿಗೆ ಭೇಟಿ ನೀಡುವುದರಿಂದ ಜನದಟ್ಟಣೆ ಉಂಟಾಗುತ್ತಿದ್ದು, ಇದು ವೈರಾಣು ಹರಡಲು ಅನುಕೂಲ ವಾತಾವರಣ ಮಾಡಿಕೊಟ್ಟಂತಾಗು ತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗುರುವಾರ ಹೊರಡಿಸಿರುವ ಆದೇಶ ದಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಯಾವ ಸೇವೆಗಳು ಸ್ಥಗಿತ
ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುತ್ತಿರುವ ಅಟಲ್‌ ಜೀ ಜನಸ್ನೇಹಿ ಕೇಂದ್ರ, ಸ್ಪಂದನ ಕೇಂದ್ರ ಮತ್ತು ಆಧಾರ್‌ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳು, ಆಧಾರ್‌ ಸೇವೆ ಒದಗಿಸುತ್ತಿರುವ ಕೇಂದ್ರಗಳಲ್ಲಿನ ಸೇವೆಗಳು.

ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೀಡಲಾಗುತ್ತಿರುವ ಹೊಸ ವಾಹನ ಚಾಲನಾ ರಹದಾರಿ, ಕಲಿಯುವವರ ಪರವಾನಿಗೆ ನೋಂದಣಿ (ವಾಹನ ಚಾಲನಾ ಪರವಾನಿಗೆಯ ನವೀಕರಣವನ್ನು ಮಾಡಿಸಿಕೊಳ್ಳಲು ನಿಬಂಧ ಅನ್ವಯಿಸುವುದಿಲ್ಲ), ಉಪ ನೋಂದಣಾಧಿಕಾರಿಗಳ ಕಚೇರಿಯ ಸ್ಥಿರಾಸ್ತಿ ನೋಂದಣಿ ಸೇವೆಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್‌ ವ್ಯಾಪ್ತಿಗಳಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳು (ಖಾತೆ, ಸಾರ್ವಜನಿಕ ಹರಾಜುಗಳು, ಗ್ರಾಮ ಸಭೆ, ಇತರೆ ಲೈಸನ್ಸ್‌ ನೀಡುವಿಕೆ, ಜನನ- ಮರಣ ಪ್ರಮಾಣಪತ್ರಗಳನ್ನು ವಿತರಿಸುವ ಸೇವೆಗಳು), ಸಹಕಾರಿ ಸಂಘಗಳ ಉಪ ನಿಬಂಧಕರು ಹಾಗೂ ಸಹಕಾರ ಸಂಘಗಳ ಸಹಾಯಕ ಉಪ ನಿಬಂಧಕರು ಸಹಕಾರ ಇಲಾಖೆಗೆ ಸಂಬಂಧಿಸಿದಂತೆ ನೀಡಲಾಗುವ ಸೇವೆಗಳು (ಬ್ಯಾಂಕಿಂಗ್‌ ಹೊರತುಪಡಿಸಿ). ಕೃಷಿ/ ತೋಟಗಾರಿಕೆ/ ಮೀನುಗಾರಿಕೆ ಇಲಾಖೆಯಲ್ಲಿನ ವಿವಿಧ ಸೇವೆಗಳು (ತುರ್ತು ವಿಷಯಗಳನ್ನು ಹೊರತುಪಡಿಸಿದೆ.), ಸಮಾಜ ಕಲ್ಯಾಣ ಇಲಾಖೆ/ ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆ/ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಅಧೀನದಲ್ಲಿ ಬರುವ ನಿಗಮ ಮಂಡಳಿಗಳ ಸೇವೆಗಳು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸೇವೆಗಳು ಮಾ. 31ರ ವರೆಗೆ ಸ್ಥಗಿತಗೊಳ್ಳಲಿವೆ.

ಕಾರ್ಯಾಚರಿಸುವ ಸೇವೆಗಳು
ಈ ಆದೇಶ ತುರ್ತು ಹಾಗೂ ದಿನನಿತ್ಯದ ಸೇವೆಗಳಿಗೆ ಅನ್ವಯವಾಗುವುದಿಲ್ಲ. ಬ್ಯಾಂಕ್‌, ಅಂಚೆ ಕಚೇರಿ, ಪೊಲೀಸ್‌ ಸೇವೆಗಳು, ಅಗ್ನಿಶಾಮಕ ಸೇವೆಗಳು, ದೂರವಾಣಿ, ಇಂಟರ್‌ನೆಟ್‌, ಕೆಎಸ್‌ಆರ್‌ಟಿಸಿ, ಸಾರಿಗೆ ಸೇವೆಗಳ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸೇವೆಗಳು, ಸ್ವಚ್ಛತೆ ಕಾರ್ಯಕ್ರಮಗಳು ಕುಡಿಯುವ ನೀರು, ವಿದ್ಯುತ್‌ ಶಕ್ತಿ ಪೂರೈಕೆ, ಒಳಚರಂಡಿ ವ್ಯವಸ್ಥೆಗಳು, ದಿನಸಿ/ ಹಣ್ಣು/ ತರಕಾರಿ/ ಮಾರು ಕಟ್ಟೆಗಳು, ಆಸ್ಪತ್ರೆ ಸೇವೆ, ಪಶು ಆಸ್ಪತ್ರೆಗಳು, ಔಷಧ ಅಂಗಡಿಗಳು, ಶವ ಸಂಸ್ಕಾರ ಇತ್ಯಾದಿ ಸೇವೆಗಳು ಹಾಗೂ ತುರ್ತು ಸೇವೆಗಳು ಎಂದಿನಂತೆ ಇರುತ್ತವೆ.

Advertisement

ಸೇವೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದರೂ ಕಚೇರಿಗಳಿಗೆ ರಜೆ ಘೋಷಣೆ ಮಾಡಿರುವುದಿಲ್ಲ. ಅಧಿಕಾರಿ/ ಸಿಬಂದಿ ವರ್ಗದವರು ಎಂದಿನಂತೆ ಕಚೇರಿಯಲ್ಲಿ ಲಭ್ಯವಿದ್ದು ಕರ್ತವ್ಯ ನಿರ್ವಹಿಸಬೇಕು. ಅನಧಿಕೃತ ಗೈರು ಹಾಜರಿ ಅಥವಾ ಅನಧಿಕೃತವಾಗಿ ಕಚೇರಿಯಲ್ಲಿ ತೆರೆಯದಿದ್ದಲ್ಲಿ ಅಂತಹ ಅಧಿಕಾರಿ/ ಸಿಬಂದಿ ಮೇಲೆ ಕ್ರಮ ಜರಗಿಸಲಾಗುವುದು ಎಂದಿದ್ದಾರೆ.

ಸೇವೆ ಸ್ಥಗಿತ ಅವಧಿಯಲ್ಲಿ ಆದೇಶದಲ್ಲಿ ನಮೂದಿಸಿರುವ ಕಚೇರಿ/ ಕೇಂದ್ರಗಳಲ್ಲಿ ಸೇವೆಗಳನ್ನು ಒದಗಿಸದ ಕಾರಣ ಯಾವುದೇ ಸರಕಾರಿ/ ಖಾಸಗಿ/ ನಿಗಮ ಮಂಡಳಿಗಳು ಯಾವುದೇ ವ್ಯಕ್ತಿಯು ದಾಖಲಾತಿಗಳನ್ನು ಹಾಜರುಪಡಿಸದ ಕಾರಣದಿಂದ ಅಂತಹ ವ್ಯಕ್ತಿಗೆ ವ್ಯತಿರಿಕ್ತವಾಗುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು ಹಾಗೂ ಅಂತಹ ದಾಖಲಾತಿಯನ್ನು ಹಾಜರುಪಡಿಸಲು ಸಾಕಷ್ಟು ಕಾಲಾವಕಾಶ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next