Advertisement

ಕ್ಷೀರ ಕ್ರಾಂತಿಗೆ ಲಾಕ್‌ಡೌನ್‌ ಮುನ್ನುಡಿ : ನಗರದಿಂದ ಮರಳಿ ಹೈನುಗಾರಿಕೆಯತ್ತ ಚಿತ್ತ

03:19 PM Sep 03, 2020 | sudhir |

ಹಾವೇರಿ: ಕೋವಿಡ್ ಲಾಕ್‌ಡೌನ್‌ ಕಾರಣದಿಂದ ನಗರ ಪ್ರದೇಶದಲ್ಲಿದ್ದ ಅನೇಕರು ಗ್ರಾಮೀಣ ಪ್ರದೇಶಕ್ಕೆ ಮರಳಿ ಸ್ವಯಂ ಉದ್ಯೋಗ ಕಂಡುಕೊಳ್ಳುವವರ ಸಂಖೆ ಹೆಚ್ಚುತ್ತಿದ್ದು, ಬಹುತೇಕ ಜನರು ಹಳ್ಳಿಗಳಲ್ಲಿ ಹೈನುಗಾರಿಕೆಗೆ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು ಇದಕ್ಕೆ ಅಂಕಿ-ಅಂಶಗಳೇ ಸಾಕ್ಷಿಯಾಗಿವೆ.

Advertisement

ಕಳೆದ ಮಾರ್ಚ್‌ ತಿಂಗಳು ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆಗೂ, ಆಗಸ್ಟ್‌ ತಿಂಗಳಲ್ಲಿ ಉತ್ಪಾದನೆಗೂ ಹೋಲಿಸಿದರೆ ಬರೋಬ್ಬರಿ ಪ್ರತಿದಿನ 20 ಸಾವಿರ ಲೀಟರ್‌ಗೂ ಅ ಧಿಕ ಹಾಲು ಉತ್ಪಾದನೆಯಾಗುತ್ತಿದೆ. ಮಾರ್ಚ್‌ ತಿಂಗಳಲ್ಲಿ ಪ್ರತಿದಿನ 89,468 ಲೀಟರ್‌ ಹಾಲು ಉತ್ಪಾದನೆಯಾಗುತ್ತಿದ್ದರೆ, ಈಗ ಪ್ರತಿದಿನ 1,09,574 ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಅಲ್ಲದೇ ಹಾಲಿನ ಗುಣಮಟ್ಟದಲ್ಲಿಯೂ ಹೆಚ್ಚಳವಾಗಿದ್ದು ಗಮನಾರ್ಹ ಸಂಗತಿಯಾಗಿದೆ.

ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ವಿಧಿ ಸಿದ್ದ ಲಾಕ್‌ಡೌನ್‌ ಹಾಗೂ ಸೋಂಕು ಹರಡುವಿಕೆಯ ಭಯದ ಕಾರಣದಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಅನೇಕರು ಗ್ರಾಮೀಣ ಪ್ರದೇಶದಲ್ಲಿಯೇ ಉಳಿದುಕೊಂಡು ಸ್ವಯಂ ಉದ್ಯೋಗದ ದಾರಿ ಕಂಡುಕೊಂಡಿದ್ದಾರೆ. ಅದರಲ್ಲಿ ಹೆಚ್ಚಾಗಿ ಅನೇಕರು ಹೈನುಗಾರಿಕೆಯತ್ತ ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ. ಜೊತೆಗೆ ಪಶುಪಾಲನೆಯಲ್ಲಿಯೂ ಹೆಚ್ಚೆಚ್ಚು ಯುವಕರು ತೊಡಗಿಸಿಕೊಂಡಿರುವುದು ಹಾಲು ಉತ್ಪಾದನೆ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ.

ನಿತ್ಯ ಸರಾಸರಿ 20 ಸಾವಿರ ಲೀಟರ್‌ ಹಾಲು ಹೆಚ್ಚಳ ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್‌ ವಿಧಿ ಸಿದ್ದರಿಂದ ಮಾರ್ಚ್‌ ತಿಂಗಳು ಜಿಲ್ಲೆಯಲ್ಲಿ ಪ್ರತಿದಿನ 89,468 ಲೀಟರ್‌ ಹಾಲು ಉತ್ಪಾದನೆಯಾಗಿತ್ತು. ಆಗಸ್ಟ್‌ ತಿಂಗಳು ಜಿಲ್ಲೆಯಲ್ಲಿ ನಿತ್ಯ 1,09,574 ಲೀಟರ್‌ ಹಾಲು ಉತ್ಪಾದನೆಯಾಗಿದ್ದು, ಸರಾಸರಿ ಪ್ರತಿದಿನ 20 ಸಾವಿರ ಲೀಟರ್‌ ಹಾಲು ಉತ್ಪಾದನೆ ಹೆಚ್ಚಳವಾಗಿದೆ.

Advertisement

ಮಹಾಮಾರಿ ಕೋವಿಡ್ ಸೃಷ್ಟಿಸಿದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಗರಪ್ರದೇಶದಲ್ಲಿದ್ದ ಅನೇಕರು ಉದ್ಯೋಗ ಕಳೆದುಕೊಂಡು ಹೈನುಗಾರಿಕೆಯತ್ತ ಆಸಕ್ತಿ ವಹಿಸಿದ್ದಾರೆ. ಹೀಗಾಗಿ ಹೈನೋದ್ಯಮದ ಬೆಳವಣಿಗೆ ತೀವ್ರತೆ ಪಡೆದುಕೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಕ್ಷೀರಕ್ರಾಂತಿ ಕಂಡು ಬರುತ್ತಿದೆ. ಅಲ್ಲದೇ ಅನೇಕ ಬಡವರು ಪ್ರಸಕ್ತ ಸಾಲಿನ ಪಶುಭಾಗ್ಯ ಯೋಜನೆ ಅನುಷ್ಠಾನಗೊಳ್ಳುವುದನ್ನೇ ಎದುರು ನೋಡುತ್ತಿದ್ದು, ಪಶುಭಾಗ್ಯ ಯೋಜನೆ ಜಾರಿಯಾದರೆ ಹೈನೋದ್ಯಮದಲ್ಲಿ ಇನ್ನಷ್ಟು ಹೆಚ್ಚಿನ ಬೆಳವಣಿಗೆ ಕಾಣಬಹುದಾಗಿದೆ.

ಹಿರೇಕೆರೂರು ಪ್ರಥಮ ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತಿರುವ ಹಾಲಿನ ಪ್ರಮಾಣದಲ್ಲಿ ಹಿರೇಕೆರೂರು ತಾಲೂಕು ಮೊದಲ ಸ್ಥಾನದಲ್ಲಿದೆ. ನಂತರ ಸ್ಥಾನದಲ್ಲಿ ರಟ್ಟಿಹಳ್ಳಿ, ಹಾನಗಲ್ಲ, ಹಾವೇರಿ, ಬ್ಯಾಡಗಿ, ರಾಣಿಬೆನ್ನೂರು, ಶಿಗ್ಗಾವಿ ಹಾಗೂ ಸವಣೂರು ತಾಲೂಕು ಕೊನೆಯ ಸ್ಥಾನದಲ್ಲಿದೆ.

ಸರ್ಕಾರದ ಪ್ರೋತ್ಸಾಹ ಧನ, ಪಶು ಆಹಾರದ ಸಬ್ಸಿಡಿ, ಹಸಿರು ಮೇವಿನ ಬೀಜಗಳ ಪೂರೈಕೆ, ಹಾಲಿನ ಗುಣಮಟ್ಟಕ್ಕೆ ತಕ್ಕಂತೆ ದರ, ನಿಯಮಿತ ಲಸಿಕೆ ಕಾರ್ಯಕ್ರಮಗಳ ಆಯೋಜನೆಯಿಂದ ಹೈನೋದ್ಯಮದಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೇ ಕೋವಿಡ್ ಹಿನ್ನೆಲೆಯಲ್ಲಿ ನಗರಪ್ರದೇಶದ ಜನರು ಹಳ್ಳಿಗಳಿಗೆ ಮರಳಿ ಹಲವರು ಹೈನೋದ್ಯಮದತ್ತ ಆಸಕ್ತಿ ತೋರುತ್ತಿದ್ದಾರೆ. ಈ ಕಾರಣದಿಂದ ಜಿಲ್ಲೆಯಲ್ಲಿ ಹಾಲು ಉತ್ಪಾದನೆಯ ಪ್ರಮಾಣ ಹೆಚ್ಚಳವಾಗಿದೆ.
– ಬಸವರಾಜ ಅರಬಗೊಂಡ, ಅಧ್ಯಕ್ಷರು, ಧಾರವಾಡ ಹಾಲು ಒಕ್ಕೂಟ

– ವೀರೇಶ ಮಡ್ಲುರಾ

Advertisement

Udayavani is now on Telegram. Click here to join our channel and stay updated with the latest news.

Next