Advertisement

ಡೈರಿ ಆರೋಪ: ಕಾಂಗ್ರೆಸ್‌ ನಾಯಕರ ವಿರುದ್ಧ ಕ್ರಮಕ್ಕೆ ಬಿಜೆಪಿ ಒತ್ತಾಯ

12:22 PM Mar 26, 2019 | Team Udayavani |

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ನಕಲಿ ಡೈರಿಯನ್ನು ಆಧಾರವಾಗಿಟ್ಟುಕೊಂಡು ಆರೋಪ ಮಾಡಲಾಗಿದ್ದು, ಕೂಡಲೇ ಕಾಂಗ್ರೆಸ್‌ ಮುಖಂಡ ರಣದೀಪ್‌ ಸುಜೇìವಾಲ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ರಾಜ್ಯ ಬಿಜೆಪಿ ನಿಯೋಗ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದೆ.

Advertisement

ಜತೆಗೆ ಮಂಡ್ಯದಲ್ಲಿ ನಿರ್ಭಯವಾಗಿ ಚುನಾವಣೆ ನಡೆಸಲು ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಮತ್ತು ಅವರ ಬೆಂಬಲಿಗರಿಗೆ ರಕ್ಷಣೆ ಒದಗಿಸಲು ಹೆಚ್ಚುವರಿ ಕೇಂದ್ರ ಮೀಸಲು ಪಡೆ ನಿಯೋಜಿಸುವಂತೆ ಬಿಜೆಪಿಯು ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದೆ.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ವಿಧಾನ ಪರಿಷತ್‌ ಸದಸ್ಯ ಲೆಹರ್‌ ಸಿಂಗ್‌, ಸಹ ವಕ್ತಾರರಾದ ಎ.ಎಚ್‌.ಆನಂದ್‌, ಎಸ್‌.ಪ್ರಕಾಶ್‌, ವಿನೋದ್‌, ದತ್ತಗುರು ಹೆಗಡೆ, ಬಾಲಾಜಿ ಅವರ ನಿಯೋಗವು ಸೋಮವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಅವರಿಗೆ ಮನವಿ ಪತ್ರ ಸಲ್ಲಿಸಿತು.

ಬಳಿಕ ಮಾತನಾಡಿದ ಅರವಿಂದ ಲಿಂಬಾವಳಿ, ಕಾಂಗ್ರೆಸ್‌ ನಾಯಕರು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ವೇಳೆ ನಕಲಿ ಡೈರಿಯನ್ನಿಟ್ಟುಕೊಂಡು ರಣದೀಪ್‌ ಸುಜೇìವಾಲ ಅವರು ಯಡಿಯೂರಪ್ಪ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಪ್ರಕರಣ ಲೋಕಪಾಲ ಸಂಸ್ಥೆಯ ಮೊದಲ ತನಿಖಾ ಪ್ರಕರಣವಾಗಬೇಕು ಎಂದು ಹೇಳಿದರು.

ಡೈರಿ ನಕಲಿ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದ್ದರೂ ಕಾಂಗ್ರೆಸ್‌ ನಾಯಕರು ನಿರಂತರವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಕೂಡಲೇ ರಣದೀಪ್‌ ಸುಜೇìವಾಲ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರಲಾಗಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ಸಿಕ್ಕಿದೆ ಎಂದು ತಿಳಿಸಿದರು.

Advertisement

ರಾಜ್ಯ ಸರ್ಕಾರ ನಾನಾ ರೀತಿಯಲ್ಲಿ ಆಡಳಿತ ದುರುಪಯೋಗಪಡಿಸಿಕೊಳ್ಳುತ್ತಿದೆ. ಸಮ್ಮಿಶ್ರ ಸರ್ಕಾರದ ನಾಯಕರು ಗುಂಡಾ ವರ್ತನೆ ತೋರುತ್ತಿದ್ದಾರೆ. ಸೋಮವಾರ ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗಾಗಿ ಎರಡು ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್‌ ಮಾಡಲಾಗಿತ್ತು.

ಇದರಿಂದ ಜನ ತೀವ್ರ ತೊಂದರೆ ಅನುಭವಿಸಿದರು. ಇತ್ತೀಚೆಗೆ ನಟ ದರ್ಶನ್‌ ಅವರ ನಿವಾಸದ ಮೇಲೆ ಕಲ್ಲು ತೂರಾಟ ನಡೆಯಿತು. ಮುಖ್ಯಮಂತ್ರಿಗಳು ಕಲ್ಲು ತೂರಾಟ ನಡೆಸಿದವರು ಜೆಡಿಎಸ್‌ ಕಾರ್ಯಕರ್ತರಲ್ಲ ಎಂದು ಹೇಳಿ ಸುಮ್ಮನಾದರು ಎಂದು ಕಿಡಿ ಕಾರಿದರು.

ಜೆಡಿಎಸ್‌ ಶಾಸಕರೊಬ್ಬರು ಇತ್ತೀಚೆಗೆ ಪ್ರಧಾನಮಂತ್ರಿಯವರಿಗೆ ಕಲ್ಲಿನಿಂದ ಹೊಡೆಯಿರಿ ಎಂಬುದಾಗಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್‌ನ ಮಾಜಿ ಶಾಸಕರೊಬ್ಬರು ಇದೇ ರೀತಿ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು. ಈ ಎಲ್ಲ ವಿಚಾರಗಳನ್ನು ಮುಖ್ಯ ಚುನಾವಣಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರಿಗೆ ತೊಂದರೆ ನೀಡುವ, ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುವ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಸಾಕಷ್ಟು ಘಟನೆಗಳು ಮಂಡ್ಯ ಕ್ಷೇತ್ರದಲ್ಲಿ ನಡೆಯುತ್ತಿವೆ. ನಿರ್ಭಯವಾಗಿ ಚುನಾವಣೆ ನಡೆಸಲು ಹಾಗೂ ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಗೂ ಬೆಂಬಲಿಗರ ರಕ್ಷಣೆಗಾಗಿ ಹೆಚ್ಚುವರಿ ಕೇಂದ್ರ ಮೀಸಲು ಪಡೆಯನ್ನು ಕ್ಷೇತ್ರಕ್ಕೆ ನಿಯೋಜಿಸುವಂತೆ ಕೋರಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರಿಗೆ ಪತ್ರ ಬರೆಯಲಾಗಿದೆ.
-ಅರವಿಂದ ಲಿಂಬಾವಳಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next