Advertisement

ಅಂದು ಫೋಟೋಗ್ರಫಿಗೆ ಜನ ಕಂಗಾಲು, ಪತ್ನಿ, ಮಗುವನ್ನು ಕಳೆದುಕೊಂಡ ಫಾಲ್ಕೆ ಜೀವನಗಾಥೆ ಹೇಗಿತ್ತು

09:01 AM Dec 01, 2019 | Nagendra Trasi |

ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಆದರೆ ಈ ಅತ್ಯುನ್ನತ ಗೌರವದ ಪ್ರಶಸ್ತಿಯನ್ನು ದಾದಾಸಾಹೇಬ್ ಹೆಸರಿನಲ್ಲಿ ಯಾಕೆ ಕೊಡಲಾಗುತ್ತಿದೆ. ಭಾರತೀಯ ಚಿತ್ರರಂಗದ ಪಿತಾಮಹಾ ಎಂದೇ ಖ್ಯಾತರಾದ ದುಂಡಿರಾಜ್ ಗೋವಿಂದ ಫಾಲ್ಕೆ 1870ರ ದಶಕದಲ್ಲಿ ಭಾರತೀಯ ಸಿನಿಮಾ ರಂಗದ ಮೊತ್ತಮೊದಲ ಸಿನಿಮಾ ನಿರ್ಮಿಸಲು ಪಟ್ಟ ಶ್ರಮ, ನೋವು ಅಪಾರವಾದದ್ದು. ದುಂಡಿರಾಜ್ ದಾದಾ ಸಾಹೇಬ್ ಆಗಿ ಬೆಳೆದ ಹಿಂದೆ ಅಗಾಧವಾದ ಪರಿಶ್ರಮವಿದೆ!

Advertisement

ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರರಾಗಿದ್ದ ದುಂಡಿರಾಜ್ ಫಾಲ್ಕೆ 1870ರ ಏಪ್ರಿಲ್ 30ರಂದು ಅಂದಿನ ಬಾಂಬೆ ಪ್ರೆಸಿಡೆನ್ಸಿಯ ತ್ರಯಂಬಕ್ ನಲ್ಲಿ ಜನಿಸಿದ್ದರು. ತಂದೆ ಗೋವಿಂದ ಸದಾಶಿವ್ ಅವರು ಸಂಸ್ಕೃತ ಪಂಡಿತರಾಗಿದ್ದರು. ಅಲ್ಲದೇ ಧಾರ್ಮಿಕ ಕಾರ್ಯಕ್ರಮದ ಪುರೋಹಿತರಾಗಿಯೂ ಕೆಲಸ ಮಾಡುತ್ತಿದ್ದರು. ತಾಯಿ ದ್ವಾರಕಾಬಾಯಿ ಗೃಹಿಣಿಯಾಗಿದ್ದರು. ಫಾಲ್ಕೆ ತ್ರಯಂಬಕೇಶ್ವರ್ ನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಬಾಂಬೆಯಲ್ಲಿ ಮೆಟ್ರಿಕ್ಯುಲೇಶನ್ ಪಡೆದಿದ್ದರು. ಸರ್ ಜೆಜೆ ಸ್ಕೂಲ್ ಆಫ್ ಆರ್ಟ್ ಗೆ ಸೇರಿದ್ದ ಫಾಲ್ಕೆ 1885ರಲ್ಲಿ ಒಂದು ವರ್ಷ ಚಿತ್ರಕಲಾ ಶಿಕ್ಷಣ ಪೂರೈಸಿದ್ದರು. 1890ರಲ್ಲಿ ಫಾಲ್ಕೆ ಫಿಲ್ಮ್ ಕೆಮರಾವೊಂದನ್ನು ಖರೀದಿಸಿ ಫೋಟೋಗ್ರಫಿ, ಪ್ರೋಸೆಸಿಂಗ್ ಮತ್ತು ಪ್ರಿಂಟಿಂಗ್ ಕುರಿತು ಪ್ರಯೋಗ ಮಾಡತೊಡಗಿದ್ದರು. 1891ರಲ್ಲಿ ಫಾಲ್ಕೆ ಫೋಟೋ ಲಿಥಿಯೋ, ತ್ರಿ ಕಲರ್ ಸೆರಾಮಿಕ್ ಫೋಟೋಗ್ರಫಿ ಕುರಿತು ಆರು ತಿಂಗಳ ತಾಂತ್ರಿಕ ತರಬೇತಿಯನ್ನು ಪಡೆದಿದ್ದರು. 1892ರಲ್ಲಿ ಮಾಡೆಲ್ ಚಿತ್ರಕ್ಕಾಗಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. ಇವರ ಕೆಲಸವನ್ನು ಮೆಚ್ಚಿ ಅಭಿಮಾನಿಗಳು ದುಬಾರಿ ಬೆಲೆಯ ಕ್ಯಾಮರವನ್ನು ನೀಡಿದ್ದರು.

ಕಲಾಭವನದ ಪ್ರಾಂಶುಪಾಲರಾದ ಗುಜ್ಜರ್ ಅವರು ಫಾಲ್ಕೆ ಅವರ ಪ್ರತಿಭೆಯನ್ನು ಗಮನಿಸಿ ತ್ರಿ ಕಲರ್ ಬ್ಲಾಕ್ ಮೇಕಿಂಗ್, ಡಾರ್ಕ್ ರೂಂ ಪ್ರಿಂಟಿಂಗ್ ಕೌಶಲ್ಯ, ಫೋಟೋಲಿಥಿಯೋ ವರ್ಗಾವಣೆ ಕಲಿಕೆಗಾಗಿ ರಟ್ಲಾಂಗೆ ಕಳುಹಿಸಿಕೊಟ್ಟಿದ್ದರು.

ಪ್ಲೇಗ್ ಮಾರಿಗೆ ಪತ್ನಿ, ಮಗನ ಸಾವು;

1893ರಲ್ಲಿ ಪ್ರಾಂಶುಪಾಲ ಗುಜ್ಜರ್ ಅವರು ಕಲಾಭವನದಲ್ಲಿಯೇ ಫಾಲ್ಕೆಗೆ ಪೋಟೋ ಸ್ಟುಡಿಯೋ ಮತ್ತು ಲ್ಯಾಬೋರೇಟರಿ ಉಪಯೋಗಿಸಲು ಅವಕಾಶ ಮಾಡಿಕೊಟ್ಟಿದ್ದರು. ಆಗ ಫಾಲ್ಕೆ ಶ್ರೀ ಫಾಲ್ಕೇಸ್ ರೇಖಾಚಿತ್ರ ಮತ್ತು ಫೋಟೋ ಪ್ರಿಂಟಿಂಗ್ ಆರಂಭಿಸಿದ್ದರು. ಆದರೆ ಏತನ್ಮಧ್ಯೆ ಸ್ಥಿರ ಸಾಂಸಾರಿಕ ಜೀವನ ನಡೆಸುವುದು ತುಂಬಾ ಕಷ್ಟಕರವಾಗಿಬಿಟ್ಟಿತ್ತು. ಇದರಿಂದಾಗಿ ತಾನು ವೃತ್ತಿಪರ ಫೋಟೋಗ್ರಾಫರ್ ಆಗಬೇಕೆಂದು ನಿರ್ಧರಿಸಿ ಗೋಧ್ರಾಕ್ಕೆ ಬರುತ್ತಾರೆ. ಆದರೆ ಗೋಧ್ರಾದಲ್ಲಿಯೂ ವ್ಯವಹಾರ ನಷ್ಟದ ಹಾದಿ ಹಿಡಿದಿತ್ತು. ಅಷ್ಟೇ ಅಲ್ಲ 1900ರಲ್ಲಿ ಪ್ಲೇಗ್ ನಿಂದ ಪ್ರೀತಿಯ ಪತ್ನಿ ಮತ್ತು ಮಗ ಸಾವನ್ನಪ್ಪಿದ್ದರು.

Advertisement

ಫೋಟೋ ತೆಗೆದ್ರೆ ಜೀವ ಹೋಗುತ್ತೆ ಅಂತ ಸುಳ್ಳು ಸುದ್ದಿ ಹಬ್ಬಿ ಫಾಲ್ಕೆ ಕನಸು ನುಚ್ಚು ನೂರಾಗಿತ್ತು!

ಚಿತ್ರಕಲೆ, ಫೋಟೋಗ್ರಫಿಯೇ ತನ್ನ ಜೀವಾಳ ಎಂದು ನಂಬಿಕೊಂಡಿದ್ದ ಫಾಲ್ಕೆಯವರಿಗೆ ಅದೊಂದು ಆಘಾತಕಾರಿ ವಿಷಯವಾಗಿ ಪರಿಣಮಿಸುತ್ತೆ ಎಂಬ ಸಣ್ಣ ಸುಳಿವು ಸಿಕ್ಕಿರಲಿಲ್ಲವಾಗಿತ್ತು. ಗೋಧ್ರಾದಲ್ಲಿ ವ್ಯವಹಾರ ಕೈಹಿಡಿಯಲಿಲ್ಲ ಎಂದು ಬರೋಡಾಕ್ಕೆ ಬಂದು ಫೋಟೋಗ್ರಫಿ ವ್ಯವಹಾರ ಆರಂಭಿಸಿದ್ದರು. ಆದರೆ ಇಡೀ ಊರಿನ ತುಂಬೆಲ್ಲಾ ಅಯ್ಯೋ ಫೋಟೋ ತೆಗೆಯಬೇಡಿ, ಒಂದು ವೇಳೆ ಫೋಟೋ ತೆಗೆಯಿಸಿಕೊಂಡರೆ ನಮ್ಮ ದೇಹದಲ್ಲಿನ ಶಕ್ತಿಯಲ್ಲಾ ಹೊರಟು ಹೋಗಿ ಮನುಷ್ಯನ ಅಯುಷ್ಯೇ ಮುಗಿದುಹೋಗುತ್ತೇ ಎಂಬ ಸುದ್ದಿ ಹಬ್ಬಿಬಿಟ್ಟಿತ್ತು! ಆಗ ಫ್ರಿನ್ಸ್ ಆಫ್ ಬರೋಡಾ ಕೂಡಾ ಫೋಟೋ ತೆಗೆಯಿಸಿಕೊಳ್ಳಲು ನಿರಾಕರಿಸಿಬಿಟ್ಟಿದ್ದರಂತೆ. ಯಾಕೆಂದರೆ ತನ್ನ ಆಯುಷ್ಯ ಕೂಡಾ ಕಡಿಮೆಯಾಗುತ್ತದೆ ಎಂದು! ಕೊನೆಗೆ ಯುವರಾಣಿಯ ಕೋರ್ಟ್ ನಲ್ಲಿ ಫೋಟೋಗ್ರಫಿಯ ಲಾಭ, ಅದರ ಬಗ್ಗೆ ವಿವರಣೆ ನೀಡಿದ್ದರಂತೆ. ಆದರೆ ಇದ್ಯಾವುದೂ ಫಾಲ್ಕೆಯವರ ವ್ಯವಹಾರಕ್ಕೆ ಸಾಥ್ ನೀಡಲೇ ಇಲ್ಲ. ನಂತರ ಫಾಲ್ಕೆ ನಾಟಕ ಕಂಪನಿಗಳ  ರಂಗಪರಿಕರ, ರಂಗಭೂಮಿ ಪರದೆ ಪೇಯಿಂಟ್ಸ್ ಗಳ ವ್ಯವಹಾರ ಆರಂಭಿಸಿದ್ದರು. ತದನಂತರ ನಾಟಕ ನಿರ್ಮಾಣದ ತರಬೇತಿ ಪಡೆದುಕೊಂಡರು. ಅಲ್ಲದೇ ಕೆಲವು ನಾಟಕಗಳಲ್ಲಿ ಅಭಿನಯಿಸಿ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡುಬಿಟ್ಟಿದ್ದರು.

“ಫಾಲ್ಕೆ” ಹೆಸರು ಬಂದಿದ್ದು ಹೇಗೆ…

ಜರ್ಮನಿಯ ಖ್ಯಾತ ಜಾದೂಗಾರರೊಬ್ಬರು ಬರೋಡಾ ಪ್ರವಾಸಕ್ಕೆ ಬಂದ ವೇಳೆ ಫಾಲ್ಕೆ ಅವರ ಬಳಿಕ ಮ್ಯಾಜಿಕ್ ಟ್ರಿಕ್ಸ್ ಅನ್ನು ಕಲಿತುಕೊಂಡಿದ್ದರಂತೆ. ಇದರಿಂದ ಫಿಲ್ಮ್ ಮೇಕಿಂಗ್ ಫೋಟೋಗ್ರಫಿಗೆ ತುಂಬಾ ಸಹಾಯವಾಗಿತ್ತಂತೆ. 1901ರ ಅಂತ್ಯದಲ್ಲಿ ಫಾಲ್ಕೆ ಸಾರ್ವಜನಿಕವಾಗಿ ಮ್ಯಾಜಿಕ್ ಶೋ ಕೊಡಲು ಆರಂಭಿಸಿದ್ದರು. ಅದು ಪ್ರೊಫೆಸರ್ ಕೇಲ್ಫಾ(Kelpha) ಅವರ ಹೆಸರನ್ನು ಬಳಸಿಕೊಂಡು ಮ್ಯಾಜಿಕ್ ಶೋ ಆರಂಭಿಸಿದ್ದರು. ಕೇಲ್ಫಾ ಹೆಸರನ್ನು ಉಲ್ಟಾ ಮಾಡಿ ಫಾಲ್ಕೆ(phalke) ಆಗಿದ್ದು ಕುತೂಹಲದ ವಿಚಾರವಾಗಿದೆ!

1902ರಲ್ಲಿ ಫಾಲ್ಕೆ ಗಿರಿಜಾ ಕಾರಾಂಧಿಕರ್ ಅವರ ಜತೆ ವಿವಾಹವಾದರು. ಮದುವೆಯ ನಂತರ ಗಿರಿಜಾ ಹೆಸರನ್ನು ಸರಸ್ವತಿ ಎಂದು ಮರುನಾಮಕರಣ ಮಾಡಲಾಗಿತ್ತು. 1903ರಲ್ಲಿ ಫಾಲ್ಕೆಗೆ ಭಾರತೀಯ ಪುರಾತತ್ವ ಇಲಾಖೆಯಲ್ಲಿ ಪೋಟೋಗ್ರಾಫರ್ ಉದ್ಯೋಗ ದೊರಕಿತ್ತು. ಆದರೆ ಅದು ಸಮಾಧಾನ ತಂದಿಲ್ಲವಾಗಿತ್ತು. 1906ರಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟುಬಿಟ್ಟಿದ್ದರು. ನಂತರ ಫಾಲ್ಕೆ ಹೆಸರಿನಲ್ಲಿ ಲೋನಾವಾಳದಲ್ಲಿ ಪ್ರಿಂಟಿಂಗ್ ಪ್ರೆಸ್ ಆರಂಭಿಸಿದ್ದರು.

1912ರಲ್ಲಿ ಫಾಲ್ಕೆ ಫಿಲ್ಮ್ ಕಂಪನಿ ಸ್ಥಾಪನೆ:

1912ರಲ್ಲಿ ಫಾಲ್ಕೆ ಫಿಲ್ಮ್ ಕಂಪನಿ ಸ್ಥಾಪಿಸಿಬಿಟ್ಟಿದ್ದರು.ನಿಮಗೆ ಅಚ್ಚರಿಯಾಗಬಹುದು ದಾದಾ ಸಾಹೇಬ್ ಅವರು ಸುಮಾರು ಒಂದು ತಿಂಗಳ ಕಾಲ ಮಡಕೆಯಲ್ಲಿ ಬಟಾಣಿ ಗಿಡ ನೆಟ್ಟು ಅದರ ಮುಂಭಾಗ ಕ್ಯಾಮರವನ್ನು ಇಟ್ಟು ಸುಮಾರು ಒಂದು ತಿಂಗಳ ಕಾಲ ಚಿತ್ರೀಕರಣ ನಡೆಸಿ ಕೇವಲ ಒಂದು ನಿಮಿಷದ ಸಿನಿಮಾ ನಿರ್ಮಿಸಿದ್ದರು! ಈ ಕಿರು ಸಿನಿಮಾದ ಹೆಸರು “ಅಂಕುರಾಚಿ ವಾಧ್” ಅಂದರೆ ಬಟಾಣಿ ಮೊಳಕೆಯ ಚಿಗುರು ಅಂತ. ಈ ಚಿಕ್ಕ ಸಿನಿಮಾವನ್ನು ಕೆಲವು ಆಯ್ದ ಜನರ ಮುಂದೆ ಪ್ರದರ್ಶಿಸಿದ್ದರು. ನಂತರ ಕೆಲವರು ಫಾಲ್ಕೆ ಸಿನಿಮಾ ಮಾಡಲು ಸಾಲ ಕೊಡುವುದಾಗಿ ಆಫರ್ ನೀಡಿದ್ದರಂತೆ.

ಪೌರಾಣಿಕ ಹರಿಶ್ಚಂದ್ರ ಕಥೆಯನ್ನಾಧರಿಸಿ ಸಿನಿಮಾ ಮಾಡಲು ಫಾಲ್ಕೆ ನಿರ್ಧರಿಸಿದರು. ನಟಿಸಲು ನಟ, ನಟಿಯರು ಬೇಕಾಗಿದ್ದಾರೆ ಎಂದು ಇಂದುಪ್ರಕಾಶ್ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು. ಆದರೆ ಸ್ತ್ರೀ ಪಾತ್ರ ಮಾಡಲು ಒಬ್ಬರೇ ಒಬ್ಬರು ಸಿಗಲಿಲ್ಲವಂತೆ! ನಂತರ ಪುರುಷನೇ ಸ್ತ್ರೀ ಪಾತ್ರ ಮಾಡುವಂತಾಯಿತು. ದತ್ತಾತ್ರೇಯ ದಾಮೋದರ್ ದಾಬ್ಕೆ ರಾಜಾ ಹರಿಶ್ಚಂದ್ರ. ರಾಣಿ ತಾರಾಮತಿ ಪಾತ್ರ ನಿರ್ವಹಿಸಿದವರು ಅಣ್ಣಾ ಸೋಳಂಕಿ! ಫಾಲ್ಕೆ ಹಿರಿಯ ಪುತ್ರ ಬಾಲಚಂದ್ರ ಲೋಹಿತಾಶ್ವನ ಪಾತ್ರ. ಅಂತೂ ಆರು ತಿಂಗಳು 27 ದಿನಗಳಲ್ಲಿ ರಾಜಾ ಹರಿಶ್ಚಂದ್ರ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿತ್ತು. ಒಟ್ಟು ರೀಲ್ ನ ಉದ್ದ ಬರೋಬ್ಬರಿ 3,700 ಅಡಿ!

1913ರ ಏಪ್ರಿಲ್ 21ರಂದು ಬಾಂಬೆಯ ಒಲಂಪಿಯಾ ಟಾಕೀಸ್ ನಲ್ಲಿ ಸಿನಿಮಾದ ಪ್ರೀಮಿಯರ್ ಶೋ ಪ್ರದರ್ಶನವಾಗಿತ್ತು. 1913ರ ಮೇ 3ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಇದರೊಂದಿಗೆ ದೇಶದ ಮೊದಲ ಸಿನಿಮಾ ಇಂಡಸ್ಟ್ರಿಗೆ ನಾಂದಿ ಹಾಡಲಾಯಿತು. ರಾಜಾ ಹರಿಶ್ಚಂದ್ರ ಭಾರತೀಯ ಸಿನಿಮಾರಂಗದ ಮೊದಲ ಫೀಚರ್ ಫಿಲ್ಮ್ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.

ಇಂಗ್ಲೆಂಡ್ ನಲ್ಲಿ ಭಾರತೀಯ ಸಿನಿಮಾ ನಿರ್ಮಾಣ ಮಾಡುವಂತೆ ಫಾಲ್ಕೆಗೆ ಹೆಪ್ ವರ್ಥ್ ಆಫರ್ ಕೊಟ್ಟಿದ್ದರಂತೆ. ತಿಂಗಳಿಗೆ 300 ಪೌಂಡ್ಸ್ ಸಂಬಳ, ಜತೆಗೆ ಸಿನಿಮಾದ ಲಾಭದಲ್ಲಿ ಶೇ.20ರಷ್ಟು ಕೊಡುವುದಾಗಿ ಆಮಿಷವೊಡ್ಡಿದ್ದರಂತೆ. ಆದರೆ ಅದೆಲ್ಲವನ್ನೂ ತಿರಸ್ಕರಿಸಿ ಭಾರತದಲ್ಲಿಯೇ ಸಿನಿಮಾ ನಿರ್ಮಾಣ ಮುಂದುವರಿಸುವುದಾಗಿ ಹೇಳಿದ ಧೀಮಂತ ವ್ಯಕ್ತಿತ್ವ ಅವರದ್ದು. 1944ರ ಫೆಬ್ರುವರಿ 16ರಂದು ತಮ್ಮ 73ನೇ ವಯಸ್ಸಿನಲ್ಲಿ ನಾಸಿಕ್ ನಲ್ಲಿ ದಾದಾಸಾಹೇಬ್ ವಿಧಿವಶರಾಗಿದ್ದರು.

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next