Advertisement

D K Suresh ಮತ್ತೆ ಗ್ರಾಮಾಂತರದಿಂದ ಕಣಕ್ಕೆ; ಬಿಜೆಪಿಯಿಂದ ಮೂವರೊಳು ಯಾರು?

09:08 PM Mar 08, 2024 | Team Udayavani |

ಬೆಂಗಳೂರೂ: 2019 ರಲ್ಲಿ ರಾಜ್ಯದಿಂದ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಏಕೈಕ ಸಂಸದ ಡಿ.ಕೆ.ಸುರೇಶ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿಯಲಿದ್ದಾರೆ.

Advertisement

ಶುಕ್ರವಾರ ಬಿಡುಗಡೆಯಾದ ಮೊದಲ ಪಟ್ಟಿಯಲ್ಲೇ ಸುರೇಶ್ ಅವರ ಹೆಸರು ಘೋಷಿಸಲಾಗಿದೆ. ಬಿಜೆಪಿ ಈಗಾಗಲೇ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು ಕ್ಷೇತ್ರದಿಂದ ತನ್ನ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಎಲ್ಲ ಸಿದ್ದತೆ ನಡೆಸಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಮೂರು ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಶುಕ್ರವಾರ ಹೇಳಿಕೆ ನೀಡಿದ್ದಾರೆ. ನಮ್ಮಲ್ಲಿ ಪ್ರಬಲ ಅಭ್ಯರ್ಥಿ ಇದ್ದಾರೆ. ನಾವು ಮೂವರು ಅಭ್ಯರ್ಥಿಗಳನ್ನು ಶಿಫಾರಸು ಮಾಡಿದ್ದೇವೆ. ಅವರಲ್ಲಿ ಒಬ್ಬರು ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಲಿದ್ದಾರೆ. ನಮ್ಮ ಅಭ್ಯರ್ಥಿ ಅಚ್ಚರಿ ಮೂಡಿಸಲಿದ್ದಾರೆ ಎಂದು ಹೇಳಿದ್ದಾರೆ.

ಖ್ಯಾತ ಹೃದಯರೋಗ ತಜ್ಞ ಡಾ. ಸಿ. ಎನ್. ಮಂಜುನಾಥ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನುವ ಕುರಿತು ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದ್ದು, ಈ ನಡುವೆ ಮಾಜಿ ಸಚಿವ , ವಿಧಾನ ಪರಿಷತ್ ಸದಸ್ಯರೂ ಆಗಿರುವ ಸಿ.ಪಿ. ಯೋಗೇಶ್ವರ್ ಅವರ ಹೆಸರೂ ಕೇಳಿ ಬರುತ್ತಿದೆ.

ಡಿ.ಕೆ.ಸುರೇಶ್ ಅವರಿಗೆ ಸೋಲಿನ ರುಚಿ ತೋರಿಸುವ ಮೂಲಕ ಕಾಂಗ್ರೆಸ್ ಪ್ರಭಾವಿ ನಾಯಕ ಎನಿಸಿಕೊಂಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಭಾರೀ ಶಾಕ್ ನೀಡುವ ಸಿದ್ದತೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಎಲ್ಲ ವೈಮನಸ್ಸು ಮರೆತು ರಣತಂತ್ರ ಹಣೆಯುತ್ತಿದೆ.

Advertisement

2019 ರಲ್ಲಿ ಡಿ.ಕೆ.ಸುರೇಶ್ ಅವರು ಜೆಡಿಎಸ್ ಮೈತ್ರಿಯ ಬಲದೊಂದಿಗೆ ಬಿಜೆಪಿ ಅಭ್ಯರ್ಥಿ ಅಶ್ವತ್ಥ ನಾರಾಯಣಗೌಡ ವಿರುದ್ಧ 2,06,870 ಮತಗಳ ಅಂತರದ ಗೆಲುವು ಸಾಧಿಸಿದ್ದರು.

ಲೋಕಸಭಾ ಕ್ಷೇತ್ರದ ವ್ಯಾಪಿಯಲ್ಲಿ ಜೆಡಿಎಸ್ ಮತಗಳು ಮತ್ತು ಒಕ್ಕಲಿಗರ ಪ್ರಾಬಲ್ಯವಿದೆ. ತುಮಕೂರಿನ ಕುಣಿಗಲ್ ಕೂಡ ಲೋಕಸಭಾ ಕ್ಷೇತ್ರಕ್ಕೆ ಸೇರಿದ್ದು ಹಾಲಿ ಕಾಂಗ್ರೆಸ್ ನ ಹೆಚ್.ಡಿ.ರಂಗನಾಥ್ ಶಾಸಕರಾಗಿದ್ದಾರೆ.ಇಲ್ಲಿ ತುಮಕೂರಿನ ಅಭ್ಯರ್ಥಿಯಾಗಿರುವ ಮುದ್ದಹನುಮೇಗೌಡರ ಪ್ರಬಾವವೂ ಇದೆ.  ಚನ್ನಪಟ್ಟಣದಲ್ಲಿ ಎಚ್. ಡಿ ಕುಮಾರಸ್ವಾಮಿ ಶಾಸಕರಾಗಿದ್ದು ಹಿಡಿತ ಹೊಂದಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯ ರಾಜರಾಜೇಶ್ವರಿನಗರದಲ್ಲಿ ಮುನಿರತ್ನ ಮತ್ತು ಬೆಂಗಳೂರು ದಕ್ಷಿಣದಲ್ಲಿ ಎಂ. ಕೃಷ್ಣಪ್ಪ ಅವರು ಬಿಜೆಪಿ ಶಾಸಕರಾಗಿದ್ದಾರೆ. ಆನೇಕಲ್ ನಲ್ಲಿ ಬಿ. ಶಿವಣ್ಣ, ಮಾಗಡಿಯಲ್ಲಿ ಎಚ್.ಸಿ.ಬಾಲಕೃಷ್ಣ, ರಾಮನಗರ ಇಕ್ಬಾಲ್ ಹುಸೇನ್ ಮತ್ತು ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಶಾಸಕರಾಗಿದ್ದು ಕಾಂಗ್ರೆಸ್ ಮತ ಬ್ಯಾಂಕ್ ಗಟ್ಟಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next