ಹೊಸದಿಲ್ಲಿ: ಟಾಟಾ ಸಮೂಹ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ 2016ರಲ್ಲಿ ಸೈರಸ್ ಮಿಸ್ತ್ರಿ ಅವರನ್ನು ವಜಾ ಮಾಡಿ, ಎನ್. ಚಂದ್ರಶೇಖರ್‌ರನ್ನು ನೇಮಿಸಿರುವುದು ಕಾನೂನುಬಾಹಿರ ಎಂದು ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣ (ಎನ್‌ಸಿಎಲ್‌ಟಿ) ಬುಧವಾರ ಹೇಳಿದೆ.
ಈ ಬೆಳವಣಿಗೆ ಟಾಟಾ ಸಮೂಹ ಸಂಸ್ಥೆಗೆ ಭಾರಿ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಬಾಂಬೆ ಷೇರು ಪೇಟೆಯಲ್ಲಿ ಟಾಟಾ ಷೇರುಗಳು ಕುಸಿತ ಕಂಡವು.
ಆದರೆ ಟಾಟಾ ಸಂಸ್ಥೆಗೆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು 4 ವಾರಗಳ ಅವಕಾಶ ನೀಡಲಾಗಿದೆ. ಅಲ್ಲಿಯವರೆಗೆ ಆದೇಶ ಜಾರಿಯಾಗುವುದಿಲ್ಲ ಎಂದು ನ್ಯಾಯಾಧಿಕರಣ ತಿಳಿಸಿದೆ. ಮತ್ತೂಂದು ಮಹತ್ವದ ನಿರ್ಣಯದಲ್ಲಿ ‘ಸಾರ್ವಜನಿಕ ಸಂಸ್ಥೆ’ ಎಂಬ ಶಿರೋನಾಮೆಯಿಂದ ‘ಖಾಸಗಿ ಕಂಪೆನಿ’ ಎಂದು ಬದಲು ಮಾಡಿಕೊಂಡಿದ್ದಕ್ಕೂ ತಡೆಯಾಜ್ಞೆ ನೀಡಿದೆ.
2012ರಲ್ಲಿ ಟಾಟಾದ 6ನೇ ಅಧ್ಯಕ್ಷರಾಗಿ ಸೈರಸ್ ಮಿಸ್ತ್ರಿ ನೇಮಕವಾಗಿದ್ದರು. ರತನ್ ಟಾಟಾ ಮತ್ತು ಸೈರಸ್ ನಡುವೆ ಹಲವು ಕ್ಷೇತ್ರಗಳಲ್ಲಿ ನಡೆಸಿದ್ದ ಹೂಡಿಕೆ ನಿರ್ಧಾರಗಳ ಬಗ್ಗೆ ಭಿನ್ನಾಭಿಪ್ರಾಯ ಶುರುವಾಗಿತ್ತು. ವಿಶೇಷವಾಗಿ ಸದ್ಯ ಉತ್ಪಾದನೆ ಸ್ಥಗಿತಗೊಳಿಸಿರುವ ಅಗ್ಗದ ನ್ಯಾನೋ ಕಾರು ಉತ್ಪಾದನೆ ವಿಚಾರದಲ್ಲೂ ಸಹಮತ ಮೂಡಿ ಬಂದಿರಲಿಲ್ಲ.
ಟಾಟಾ ಸಂಸ್ಥೆಯಲ್ಲಿ ಸೈರಸ್ ಕುಟುಂಬ ಶೇ.18.4 ಪಾಲು ಬಂಡವಾಳ ಹೊಂದಿದೆ. 2016ರ ನಿರ್ಧಾರ ಪ್ರಶ್ನೆ ಮಾಡಿ ಸೈರಸ್ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧಿಕರಣಕ್ಕೆ (ಎನ್‌ಸಿಎಲ್‌ಟಿ) ಅರ್ಜಿ ಸಲ್ಲಿಸಿದ್ದರು. ಟಾಟಾ ಸನ್ಸ್ ಸೇರಿ ಒಟ್ಟು 20 ಮಂದಿಯ ವಿರುದ್ಧ ಕೇಸು ಹೂಡಲಾಗಿತ್ತು. 2017ರಲ್ಲಿ ಈ ನ್ಯಾಯಾಧಿಕರಣ ಅರ್ಜಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಮಿಸ್ತ್ರಿ ಅವರು ಮೇಲ್ಮನವಿ ನ್ಯಾಯಾಧಿಕರಣದ ಮೆಟ್ಟಿಲೇರಿದ್ದರು.
ಇದು ನನ್ನ ವೈಯಕ್ತಿಕ ಗೆಲುವಲ್ಲ. ಉತ್ತಮ ಆಡಳಿತದ ಸಿದ್ಧಾಂತ ಮತ್ತು ಅಲ್ಪಪ್ರಮಾಣದ ಷೇರುದಾರರ ಹಕ್ಕುಗಳಿಗೆ ಸಂದ ಜಯ.
– ಸೈರಸ್ ಮಿಸ್ತ್ರಿ