Advertisement
ಕ್ರಿಸ್ಮಸ್, ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಸಜ್ಜಾಗಿದ್ದ ಅಮೆರಿಕನ್ನರಿಗೆ “ತಲೆಮಾರಿನಲ್ಲಿ ಒಂದು ಬಾರಿಯಷ್ಟೇ’ ಕಂಡುಬರುವಂಥ “ಬಾಂಬ್ ಸೈಕ್ಲೋನ್’ ಆಘಾತ ಉಂಟುಮಾಡಿದೆ. ವಿಪರೀತ ಚಳಿಯ ಜತೆಗೆ ಶೀತ ಗಾಳಿ ಹಾಗೂ ಮುಂದೆ ಏನಿದೆ ಎಂಬುದು ಗೋಚರಿಸದಂತೆ ದಟ್ಟ ಮಂಜು ಕವಿದಿದ್ದು, ಸಾವಿರಾರು ವಿಮಾನಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಪ್ರಮುಖ ಹೆದ್ದಾರಿಗಳನ್ನೂ ಬಂದ್ ಮಾಡಲಾಗಿದೆ. ಈ ಮಂಜಿನ ಚಂಡಮಾರುತದಿಂದಾಗಿ ರಜೆಯ ಮಜಾ ಅನುಭವಿಸಬೇಕಿದ್ದ ಅಮೆರಿಕನ್ನರು ಈಗ ಮನೆಯೊಳಗೇ ಬಂಧಿಯಾಗಿದ್ದಾರೆ. ಕೆಂಟುಕಿ, ಮಿಸೌರಿ, ಓಕ್ಲಹೋಮಾ, ಜಾರ್ಜಿಯಾ ಮತ್ತು ನಾರ್ತ್ ಕರೋಲಿನಾದಲ್ಲಿ ತುರ್ತು ಪರಿಸ್ಥಿತಿಯ ಸ್ಥಿತಿಯಿದೆ.
ವಾಯುಭಾರ ಒತ್ತಡವು ಇಳಿಕೆಯಾಗಿ, ಶೀತ ಗಾಳಿಯ ದ್ರವ್ಯರಾಶಿಯು ಬಿಸಿಗಾಳಿಯ ದ್ರವ್ಯರಾಶಿಯೊಂದಿಗೆ ಘರ್ಷಣೆಯಾದಾಗ “ಬಾಂಬ್ ಸೈಕ್ಲೋನ್’ ಉಂಟಾಗುತ್ತದೆ. ಒತ್ತಡವು ಎಷ್ಟು ಕಡಿಮೆಯಾಗುತ್ತದೋ ಗಾಳಿಯು ಎಷ್ಟೇ ಬಲಿಷ್ಠವಾಗುತ್ತದೆ. ಕೆಲವೇ ಗಂಟೆಗಳ ಅವಧಿಯಲ್ಲಿ ತಾಪಮಾನ 11 ಡಿ.ಸೆ.ಗಿಂತಲೂ ಹೆಚ್ಚು ಇಳಿಯುತ್ತದೆ. ಫ್ರಾಸ್ಟ್‌ಬೈಟ್ ಆತಂಕ
ಲಕ್ಷಾಂತರ ಮಂದಿಗೆ ಈ ಚಳಿ ಚಂಡಮಾರುತದ ಎಚ್ಚರಿಕೆ ನೀಡಲಾಗಿದ್ದು, ಮನೆಗಳಿಂದ ಹೊರಗೆ ಕಾಲಿಡದಂತೆ ಸೂಚನೆ ನೀಡಲಾಗಿದೆ. ಕೆಲವು ಪ್ರದೇಶಗಳಲ್ಲಂತೂ ಪರಿಸ್ಥಿತಿ ಹೇಗಿದೆಯೆಂದರೆ ಮನೆಯಿಂದ ಹೊರಗೆ ಕಾಲಿಟ್ಟರೆ ಕ್ಷಣಮಾತ್ರದಲ್ಲಿ ಫ್ರಾಸ್ಟ್‌ಬೈಟ್(ಶೀತದಿಂದ ಉಂಟಾಗುವ ಉರಿಯೂತ) ಉಂಟಾಗುತ್ತದೆ ಎಂದೂ ಎಚ್ಚರಿಸಲಾಗಿದೆ. ಫ್ರಾಸ್ಟ್‌ಬೈಟ್ ಎಂದರೆ ಅತಿಯಾದ ಶೀತಕ್ಕೆ ಮೈ ಒಡ್ಡಿಕೊಂಡರೆ ದೇಹದ ಅಂಗಾಂಶಗಳಿಗೆ ಉಂಟಾಗುವ ಗಾಯ. ಮೂಗು, ಕೈಬೆರಳು, ಕಾಲೆºರಳುಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಗ್ಯಾಂಗ್ರೀನ್‌ಗೂ ಕಾರಣವಾಗಬಹುದು.
Related Articles
ದಟ್ಟ ಮಂಜಿನಿಂದಾಗಿ ದೃಷ್ಟಿ ಗೋಚರತೆ ಶೂನ್ಯಕ್ಕೆ ತಲುಪಿದೆ. ಕೇವಲ 12 ಗಂಟೆಗಳ ಅವಧಿಯಲ್ಲಿ 104 ಅಪಘಾತಗಳು ಸಂಭವಿಸಿವೆ. ಅಮೆರಿಕದ ವ್ಯೋಮಿಂಗ್ ಹೆದ್ದಾರಿ ಗಸ್ತು ಪಡೆಯೊಂದಕ್ಕೇ 787 ಕರೆಗಳು ಬಂದಿವೆ. ರ್ಯಾಪಿಡ್ ಸಿಟಿಯಲ್ಲಿ ಸಂಚರಿಸಲಾಗದೇ 100ಕ್ಕೂ ಹೆಚ್ಚು ಬೈಕ್ ಸವಾರರು ಅತಂತ್ರರಾಗಿದ್ದಾರೆ.
Advertisement
ಇದು ನೀವು ಸಾಮಾನ್ಯವಾಗಿ ನೋಡುವ ಮಂಜಿನ ಮಳೆಯಲ್ಲ. ದಯವಿಟ್ಟು ಯಾರೂ ಇದನ್ನು ಹಗುರವಾಗಿ ಪರಿಗಣಿಸಬೇಡಿ. ಇದೊಂದು ಗಂಭೀರ ವಿಚಾರ. ನಿಮ್ಮ ಪ್ರಯಾಣವನ್ನೆಲ್ಲ ಮುಂದೂಡಿ.-ಜೋ ಬೈಡೆನ್, ಅಮೆರಿಕ ಅಧ್ಯಕ್ಷ