Advertisement

ವಿತರಣೆಯಾಗದೆ ತುಕ್ಕು ಹಿಡಿಯುತ್ತಿವೆ ಸೈಕಲ್‌ಗ‌ಳು

04:42 AM Jan 13, 2019 | Team Udayavani |

ಸುಳ್ಯ : ಶಾಲಾ ಪ್ರಾರಂಭದಲ್ಲೇ ಸರಕಾರದಿಂದ ಮಕ್ಕಳಿಗೆ ವಿತರಣೆ ಯಾಗ ಬೇಕಿದ್ದ ಸೈಕಲ್‌ಗ‌ಳು ಆರೇಳು ತಿಂಗಳು ಕಳೆದರೂ ಶಾಲೆಯಲ್ಲೇ ಬಾಕಿಯಾಗಿದ್ದು, ತುಕ್ಕು ಹಿಡಿಯುವ ಹಂತಕ್ಕೆ ಬಂದಿವೆ.

Advertisement

ನಮಗೇಕೆ ಸೈಕಲ್‌ ಕೊಟ್ಟಿಲ್ಲವೆಂದು 8ನೇ ತರಗತಿಯ ಮಕ್ಕಳು ಪ್ರಶ್ನೆ ಮಾಡತೊಡಗಿದ್ದಾರೆ. ಸುಳ್ಯ ತಾಲೂಕಿನ ಹಲವು ಪ್ರೌಢಶಾಲೆಗಳಿಗೆ ಬಂದಿರುವ ಸೈಕಲ್‌ಗ‌ಳು ಶಾಲೆಯ ಮೂಲೆ, ಮೈದಾನಗಳಲ್ಲಿ ರಾಶಿಯಾಗಿ ಬಿದ್ದಂತೆ ಕಂಡುಬರುತ್ತಲಿವೆ.

ಮಕ್ಕಳನ್ನು ಸರಕಾರಿ ಶಾಲೆಗಳತ್ತ ಆಕರ್ಷಿಸಲು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಸರಕಾರ ಮಕ್ಕಳಿಗೆ ಸೈಕಲ್‌ ಯೋಜನೆಯನ್ನು ಜಾರಿಗೆ ತಂದಿತ್ತು. ಕಳೆದ ಸಾಲಿನವರೆಗೆ ಜೂನ್‌, ಜುಲೈನಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್‌ಗ‌ಳನ್ನು ನೀಡುತ್ತಾ ಬರಲಾಗಿತ್ತು. ಈ ಬಾರಿ ವಿತರಿಸಬೇಕಾಗಿರುವ ಸೈಕಲ್‌ಗ‌ಳನ್ನು ಸೋಣಂಗೇರಿ ಉನ್ನತೀಕರಿಸಿದ ಹಿ.ಪ್ರಾ. ಶಾಲೆಯ ಮೈದಾನದಲ್ಲಿ ಸಂಗ್ರಹಿಸಿಡಲಾಗಿದೆ. ತಾಲೂಕಿನ ವಿವಿಧ ಸರಕಾರಿ ಶಾಲೆಗಳ ಮಕ್ಕಳಿಗೆ ಪೂರೈಕೆ ಮಾಡಲು ತಂದಿರಿಸಿರುವ 882 ಸೈಕಲ್‌ಗ‌ಳು ಅನಾಥ ಸ್ಥಿತಿಯಲ್ಲಿವೆ.

ಸರಕಾರ ಸೈಕಲ್‌ ಪೂರೈಕೆ ಯೋಜ ನೆಯ ಗುತ್ತಿಗೆಯನ್ನು ಖಾಸಗಿ ಕಂಪೆನಿಗೆ ನೀಡಿದೆ. ಸೋಣಂಗೇರಿ ಹಿ.ಪ್ರಾ. ಶಾಲೆಯ ಮೈದಾನದಲ್ಲಿ ಸೈಕಲ್‌ಗ‌ಳ ಬಿಡಿಭಾಗಗಳನ್ನು ತಂದು ಹಾಕಿ ಜೋಡಿಸಲಾಗಿತ್ತು. ಜೋಡಣೆ ಮುಗಿದು ಒಂದೂವರೆ ತಿಂಗಳು ಕಳೆದಿದರೂ ವಿದ್ಯಾರ್ಥಿಗಳಿಗೆ ವಿತರಣೆ ಯಾಗಿಲ್ಲ. ಉಪಯೋಗವಾಗದ ಕಾರಣ ಬಿಡಿಭಾಗಗಳು ತುಕ್ಕು ಹಿಡಿಯಲಾರಂಭಿಸಿವೆ.

ವರದಿಗೆ ಸರಕಾರ ಸೂಚನೆ
ಪ್ರಸಕ್ತ ವರ್ಷದಲ್ಲಿ ರಾಜ್ಯದ ಕೆಲವೆಡೆ ವಿತರಿಸಿದ ಸೈಕಲ್‌ಗ‌ಳು ದೋಷ ಪೂರಿತ ಹಾಗೂ ಕಳಪೆ ಗುಣಮಟ್ಟದವಾಗಿದ್ದ ಬಗ್ಗೆ ಇಲಾಖೆಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಗುಣಮಟ್ಟ ಪರಿಶೀಲಿಸಿದ ಬಳಿಕವೇ ಸೈಕಲ್‌ಗ‌ಳನ್ನು ವಿತರಿಸಬೇಕು ಎಂದು ಸರಕಾರ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಆದೇಶ ನೀಡಿತ್ತು. ಇದರಿಂದಾಗಿ ತಾಲೂಕಿನಲ್ಲಿ ಸೈಕಲ್‌ ವಿತರಣೆಯನ್ನು ತಡೆಹಿಡಿಯಲಾಗಿದೆ. ಸರಕಾರದ ಆದೇಶದಂತೆ ಇಲಾಖೆಯ ತಂಡವು ಜಿಲ್ಲೆಯ ಕೆಲವು ಶಾಲೆಗೆ ತೆರಳಿ ಸೈಕಲ್‌ಗ‌ಳ ಗುಣಮಟ್ಟ ಪರಿಶೀಲಿಸಿ ಮೇಲಧಿಕಾರಿಗಳಿಗೆ ವರದಿ ನೀಡಿದೆ. ಸರಕಾರದ ಆದೇಶ ಬಂದ ಕೂಡಲೇ ಸೈಕಲ್‌ಗ‌ಳ ವಿತರಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಕನಸು ಕಾಣುತ್ತಿದ್ದಾರೆ ಮಕ್ಕಳು
ಸರಕಾರ ಖಾಸಗಿ ಕಂಪೆನಿಗೆ ಗುತ್ತಿಗೆ ನೀಡಿ ಸೈಕಲ್‌ಗ‌ಳು ಸಿದ್ಧಗೊಂಡಿದ್ದರೂ ಕಳಪೆ ಗುಣಮಟ್ಟವಿದೆ ಎನ್ನುವ ಕಾರಣಕ್ಕೆ ಪರಿಶೀಲನೆಗೆ ಒಳಪಡಿಸಿ ಮಕ್ಕಳಿಗೆ ನೀಡಬೇಕು ಎಂದು ಸರಕಾರ ಸೂಚಿಸಿದ್ದು ಉತ್ತಮವೇ. ಆದರೆ ಈ ಕೆಲಸಕ್ಕೆ ತಿಂಗಳುಗಟ್ಟಲೆ ಕಾಲ ತೆಗೆದುಕೊಂಡಿರುವುದೇ ಸಮಸ್ಯೆಗೆ ಮೂಲ ಕಾರಣ. ತತ್‌ಕ್ಷಣ ವರದಿ ಪಡೆದು ಕಳಪೆಯಾಗಿದ್ದಲ್ಲಿ ಖಾಸಗಿ ಕಂಪೆನಿ ವಿರುದ್ಧ ಕ್ರಮ ಜರಗಿಸಿ ಬೇರೆ ಕಂಪೆನಿಯ ಮೂಲಕ ಮಕ್ಕಳಿಗೆ ಸೈಕಲ್‌ ವಿತರಿಸಬೇಕಿತ್ತು. ಗುಣಮಟ್ಟ ಪರಿಶೀಲನೆಯ ಒಂದೇ ಕಾರಣಕ್ಕೆ ಮಕ್ಕಳು ಕಣ್ಣ ಮುಂದೆಯೇ ಇರುವ ಸೈಕಲ್‌ಗ‌ಳನ್ನು ಓಡಿಸುವಂತಿಲ್ಲ. ಸವಾರಿಯ ಕನಸು ಸಾಕಾರವಾಗುತ್ತಿಲ್ಲ. ಈ ಕುರಿತು ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕಿದೆ. ಸ್ಥಳೀಯ ಶಾಸಕರೂ ಸರಕಾರಕ್ಕೆ ಒತ್ತಡ ಹೇರಬೇಕಿದೆ.

ಆದೇಶ ಬಂದ ಕೂಡಲೇ ವಿತರಣೆ
ಸೈಕಲ್‌ಗ‌ಳ ಜೋಡಣೆಯ ಎಲ್ಲ ಕೆಲಸಗಳು ಮುಗಿದಿವೆ. ಗುಣಮಟ್ಟದ ಕುರಿತು ದೂರುಗಳಿರುವ ಕಾರಣ ಜಿಲ್ಲೆಯಲ್ಲಿ ಸೈಕಲ್‌ಗ‌ಳನ್ನು ಮಕ್ಕಳಿಗೆ ವಿತರಿಸಿಲ್ಲ. ಮೇಲಧಿಕಾರಿಗಳ ಆದೇಶ ಇರುವುದರಿಂದ ಸದ್ಯ ತಡೆಹಿಡಿಯಲಾಗಿದ್ದು, ವಿತರಣೆಗೆ ಆದೇಶ ಬಂದ ಕೂಡಲೇ ಸೈಕಲ್‌ಗ‌ಳನ್ನು ಮಕ್ಕಳಿಗೆ ವಿತರಿಸಲಾಗುವುದು. ಕೆಲವು ಜಿಲ್ಲೆಗಳ ಶಾಲೆಗಳಲ್ಲಿ ಸೈಕಲ್‌ ವಿತರಿಸಲಾಗಿದೆ.
 – ಲಕ್ಷ್ಮೀಶ ರೈ,
 ದೈಹಿಕ ಶಿಕ್ಷಣ ಪರಿವೀಕ್ಷಕರು, ಸುಳ್ಯ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next