ಮುದಗಲ್ಲ: ಭೂಮಿಯಲ್ಲಿ ಅರಣ್ಯ ಸಂಪತ್ತನ್ನು ನಾಶ ಮಾಡುತ್ತಾ ಹೊರಟ ಮಾನವನಿಗೆ ಕೋವಿಡ್ ಸರಿಯಾದ ಪಾಠ ಕಲಿಸಿದ್ದು, ಪರಿಸರವನ್ನು ಪ್ರತಿಯೊಬ್ಬ ನಾಗರಿಕರು ಉಳಿಸಿ ಸಂರಕ್ಷಿಸಬೇಕೆಂದು ಗದಗ ಜಿಲ್ಲೆಯ ರೋಣ ತಾಲೂಕಿನ ಕಡ್ಲಿ ಕಟ್ಟೆಯ ನಿವಾಸಿ ಸಿದ್ದಣ್ಣ ತಿರ್ಲಾಪೂರ ಕರೆ ನೀಡಿದರು.
ರೋಣ ತಾಲೂಕಿನಿಂದ ಸೈಕಲ್ ಸವಾರಿ ಹೊರಟ 57 ವರ್ಷದ ಸಿದ್ದಣ್ಣ ಕಳೆದ 6 ದಿನಗಳಿಂದ ಸೈಕಲ್ ಯಾತ್ರೆ ಆರಂಭಿಸಿದ್ದು, ಪಟ್ಟಣದಲ್ಲಿ ರವಿವಾರ ಹಾದು ಹೋಗುವಾಗ ಪುರಸಭೆ ಬಳಿ ಸ್ಥಳೀಯ ನಾಗರಿಕರು ಸ್ವಾಗತಿಸಿದರು.
ಪರಿಸರ ಜಾಗೃತಿ ಮೂಡಿಸುತ್ತಿರುವ ರೋಣದ ಸಿದ್ದಣ್ಣನಿಗೆ ಸನ್ಮಾನಿಸಲಾಯಿತು. ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಪರಿಸರ ಸಂರಕ್ಷಣೆಯಾಗಿದ್ದು, ದಯವಿಟ್ಟು ಸಸಿಗಳನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆಗೆ ಮಕ್ಕಳು ಹಾಗೂ ನಾಗರಿಕರು ಮುಂದಾಗುವಂತೆ ಮನವಿ ಮಾಡಿದರು.
ಹಸಿರು ಬಣ್ಣದ ಸೈಕಲ್ ಸವಾರನ ಹಿಂಬದಿಯಲ್ಲಿ ಹಸೀರು ಬಣ್ಣದ ಡಬ್ಬ ಅದರ ಮೇಲೆ ಪರಿಸರ ಕುರಿತು ಬರಹ, ಸೈಕಲಿನ ಮುಂದೆ ರಾಷ್ಟ್ರಧ್ವಜಾ ಹಾಗೂ ಹಸಿರು ಬಣ್ಣದ ಅಂಗಿ ಮತ್ತು ಪ್ಯಾಂಟ್ ಹಾಗೂ ಕರ ಪತ್ರಗಳನ್ನು ಹೊಂದಿದ್ದ ಸಿದ್ದಣ್ಣನ ಅಂಗಿ ಮೇಲೆಯೂ ಸಹ ಪರಿಸರ ಜಾಗೃತಿ ಬರಹಗಳು ನೋಡುಗರ ಗಮನ ಸೆಳೆದವು.
ಗದಗ ಜಿಲ್ಲೆಯಿಂದ ಒಟ್ಟು 8 ದಿನಗಳ ಕಾಲ 300 ಕಿ.ಮೀ. ದೂರದಲ್ಲಿನ ಯಾದಗಿರಿ ಜಿಲ್ಲೆಗೆ ಸೈಕಲ್ ಯಾತ್ರೆ ಮೂಲಕ ಪರಿಸರ ಸಂರಕ್ಷಣೆ, ಪ್ರಕೃತಿ ಬಗ್ಗೆ ಜಾಗೃತಿ ಮೂಡಿಸುತ್ತಾ ಪರಿಸಿರದ ಕಾಳಜಿಗೆ ಶ್ರಮಿಸುತ್ತಿದ್ದಾರೆ. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಪಾಟೀಲ್, ತಮ್ಮಣ್ಣ ಗುತ್ತೇದಾರ, ಕಸಾಪ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ, ಡಿ.ಕೆ. ಪೂಜಾರ್, ಸೂಫಿಸರ್, ನವನೀತ ಜೈನ್, ಸಂಜು ಬಾಕಲಿ, ವೀರೇಶ ಉಪ್ಪಾರ ಇದ್ದರು.