ಬೆಂಗಳೂರು: ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಎಂಟನೇ ತರಗತಿ ಮಕ್ಕಳಿಗೆ ವಿತರಿಸುವ ಸೈಕಲ್‌ಗಳ ಗುಣಮಟ್ಟವನ್ನು ಕಡ್ಡಾಯವಾಗಿ ಪರಿಶೀಲಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಜಿಲ್ಲಾ ಉಪನಿರ್ದೇಶಕರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶಿಸಿದೆ.
2019-20ನೇ ಸಾಲಿನ ಎಂಟನೇ ತರಗತಿ ಮಕ್ಕಳಿಗೆ ಸೈಕಲ್ ವಿತರಿಸುವುದಕ್ಕಾಗಿ ಎ-ವನ್ ಮತ್ತು ಹೀರೋ ಸೈಕಲ್ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಸೈಕಲ್ ವಿತರಣೆ ನಂತರ ತಾಲೂಕು ಮಟ್ಟದಿಂದ ಆಯ್ಕೆ ಮಾಡಿರುವ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದಿಂದ 40 ಸೈಕಲ್‌ಗಳನ್ನು ಲೂದಿಯಾನಕ್ಕೆ ಕಳುಹಿಸಬೇಕು.
ಬೆಂಗಳೂರು, ಮೈಸೂರು, ಬೆಳಗಾವಿ ಕಲಬುರಗಿ ವಿಭಾಗದಿಂದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ತಲಾ 5 ಸೈಕಲ್‌ಗಳನ್ನು ಗುಣಮಟ್ಟ ಪರಿಶೀಲನೆಗೆ ಕಳುಹಿಸಿಕೊಡಲು ಇಲಾಖೆ ಸೂಚನೆ ನೀಡಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸೈಕಲ್ ಸರಬರಾಜು ಮಾಡಲು ಅನುಸರಿಸಬೇಕಾದ ಕ್ರಮ, ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8ನೇ ತರಗತಿ ವಿದ್ಯಾರ್ಥಿಗಳ ಮಾಹಿತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಂಗ್ರಹಿಸಬೇಕು. ಶಾಲಾ ಮುಖ್ಯಸ್ಥರು ತಮ್ಮ ಶಾಲೆಗೆ ಅವಶ್ಯವಿರುವ ಬೇಡಿಕೆ ಪಟ್ಟಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಸೈಕಲ್ ಪಡೆದ ಬಳಿಕ ಯಾವ ದಿನಾಂಕದಂದು ಸೈಕಲ್ ವಿತರಣೆ ಮಾಡಲಾಗಿದೆ ಎಂಬುದನ್ನೂ ದಾಖಲಿಸುವಂತೆ ತಿಳಿಸಲಾಗಿದೆ.
ಸಾಧ್ಯವಾದಷ್ಟು ಮಟ್ಟಿಗೆ ಮಧ್ಯಂತರ ರಜೆ ಆರಂಭವಾಗುವುದರೊಳಗೆ ವಿತರಿಸುವಂತೆ ಸೂಚಿಸಲಾಗಿದೆ. ಸೈಕಲ್ ಗುಣಮಟ್ಟ ತಿಳಿಯುವುದಕ್ಕಾಗಿ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿಗಳು, ತಜ್ಞರು, ಸರ್ಕಾರಿ ಐಟಿಐ ಕಾಲೇಜು ಉಪನ್ಯಾಸಕರನ್ನು ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಲು ಸೂಚನೆ ನೀಡಿದೆ.