Advertisement

Cyber S​​ecurity Course: ಕಾಲೇಜುಗಳಲ್ಲಿ ಸೈಬರ್‌ ಭದ್ರತೆ ಕೋರ್ಸ್‌

03:43 PM Aug 02, 2024 | Team Udayavani |

ಬೆಂಗಳೂರು: ಐಟಿ ಸಿಟಿ ಎನಿಸಿರುವ ನಗರದಲ್ಲಿ ಸೈಬರ್‌ ಭದ್ರತಾ ವೃತ್ತಿಪರರ ತೀವ್ರ ಕೊರತೆಯಿದೆ ಎಂದು ಖುದ್ದು ರಾಜ್ಯ ಸರ್ಕಾರವೇ ಒಪ್ಪಿಕೊಂಡಿದೆ. ಸೈಬರ್‌ ಲೋಕಕ್ಕೆ ಇರುವ ಅಪಾಯದ ಹಿನ್ನೆಲೆಯಲ್ಲಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿಶೇಷ ಸೈಬರ್‌ ಕೋರ್ಸ್‌ಗಳನ್ನು ಆರಂಭಿಸಿ, ತರಬೇತಿ ನೀಡಿ ಈ ಕೊರತೆ ತುಂಬುವ ಚಿಂತನೆ ಸರ್ಕಾರ ಹೊಂದಿದೆ.

Advertisement

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕರ್ನಾಟಕ ಸೈಬರ್‌ ಸೆಕ್ಯುರಿಟಿ ಪಾಲಿಸಿ -2024 (ಕರ್ನಾಟಕ ಸೈಬರ್‌ ಭದ್ರತಾ ನೀತಿ)ರಲ್ಲಿ ಸೈಬರ್‌ ಬಳಕೆದಾರರಿಗೆ ಇರುವ ಅಪಾಯಗಳು, ಸರ್ಕಾರಿ ವ್ಯವಸ್ಥೆಯ ಆನ್‌ ಲೈನ್‌ಗೆ ಇರುವ ತೊಂದರೆಗಳು, ಜನಸಾಮಾನ್ಯರಲ್ಲಿ ಸೈಬರ್‌ ಅಪಾಯದ ಬಗ್ಗೆ ಜಾಗೃತಿ ಮತ್ತು ಅಧಿಕಾರಿಗಳಲ್ಲಿ ಸುರಕ್ಷಿತವಾಗಿ ಸೈಬರ್‌ ಬಳಕೆ ಮಾಡುವ ಕ್ರಮಗಳ ಉತ್ತೇಜನದ ಬಗ್ಗೆ ಚರ್ಚೆ ನಡೆಸಲಾಗಿದೆ. ಆದರೆ, ಇದರೊಂದಿಗೆ ಸೈಬರ್‌ ತಜ್ಞರ ಕೊರತೆ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ. ಕರ್ನಾಟಕವು ನವೋದ್ಯಮದ ರಾಜಧಾನಿ ಮತ್ತು ಜಾಗತಿಕ ಅನ್ವೇಷಣಾ ಕೇಂದ್ರ. ಇಲ್ಲಿ 400ಕ್ಕೂ ಹೆಚ್ಚು ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿದ್ದು, ವಿಶ್ವದ ನಾಲ್ಕನೇ ಅತಿ ದೊಡ್ಡ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕ್ಲಸ್ಟರ್‌ ಆಗಿದೆ. ಇದರ ಜೊತೆಗೆ ಹಲವು ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿವೆ.

ಆದರೂ, ಸೈಬರ್‌ ಭದ್ರತಾ ತಜ್ಞರ ತೀವ್ರ ಕೊರತೆ ಎದುರಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಈ ಹಿನ್ನೆಲೆಯಲ್ಲಿ ಸೈಬರ್‌ ಭದ್ರತೆಯನ್ನು ವೃತ್ತಿ ಆಯ್ಕೆಯನ್ನಾಗಿ ಪರಿಗಣಿಸುವಂತೆ ಸ್ಥಳೀಯ ಸೈಬರ್‌ ಭದ್ರತಾ ಸಂಸ್ಥೆಗಳೊಂದಿಗೆ ಸೇರಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾರ್ಯಾಗಾರಗಳನ್ನು ಏರ್ಪಡಿಸಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ. ಇದರ ಜೊತೆಗೆ ಸೈಬರ್‌ ಭದ್ರತೆಯಲ್ಲಿ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಹೊಸ ಶಿಕ್ಷಣ ನೀತಿ-2020ರ ಚೌಕಟ್ಟಿನಡಿ ವಿಶೇಷ ಕೋರ್ಸ್‌ವೊಂದನ್ನು ಸರ್ಕಾರ ಪರಿಚಯಿಸಬೇಕು. ಉನ್ನತ ಶಿಕ್ಷಣದ ಉಪನ್ಯಾಸಕರಲ್ಲಿ ಕೌಶಲ್ಯ ಉನ್ನತೀಕರಿಸಲು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸಬೇಕು ಎಂದು ಶಿಫಾರಸು ಮಾಡಿದೆ.

ಸೈಬರ್‌ ಭದ್ರತೆ ಬಗೆಗಿನ ಮುಕ್ತ ಆನ್‌ಲೈನ್‌ ಕೋರ್ಸ್‌ಅನ್ನು ಆರಂಭಿಸಬೇಕು. ಕೋರ್ಸ್‌ ಪೂರ್ಣಗೊಳಿಸುವ ನಾಗರಿಕರಿಗೆ ಪ್ರಮಾಣಪತ್ರ ನೀಡಬೇಕು, ಅತ್ಯಾಧುನಿಕ ವರ್ಚುವಲ್‌ ಸೈಬಲ್‌ ರೇಂಜ್‌ ಒಂದನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಸಬೇಕು, ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಾದೇಶಿಕ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಿ ಕೌಶಲ್ಯ ವೃದ್ಧಿ ಚಟುವಟಿಕೆಗಳನ್ನು ನಡೆಸಬೇಕು ಎಂದು ಸಲಹೆ ನೀಡಲಾಗಿದೆ.

ಸರ್ಕಾರಿ ಅಧಿಕಾರಿಗಳು ಅಧಿಕೃತ ಇಮೇಲ್‌ ಮಾತ್ರ ಬಳಸಲು ಸೂಚನೆ

Advertisement

ಸರ್ಕಾರಿ ಅಧಿಕಾರಿಗಳಿಗೆ ನಿಯಮಿತವಾಗಿ ಸೈಬರ್‌ ಭದ್ರತೆಯ ಅತ್ಯುತ್ತಮ ಕ್ರಮಗಳು, ಸೈಬರ್‌ ನೈರ್ಮಲ್ಯ ಮತ್ತು ಸೈಬರ್‌ ಅಪಾಯ ನಿರ್ವಹಣೆಯ ಬಗ್ಗೆ ತರಬೇತಿ ನೀಡಬೇಕು. ಇಮೇಲ್‌ ಮತ್ತು ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಆನ್‌ಲೈನ್‌ ಸಂವಾದ ಮತ್ತು ಆನ್‌ಲೈನ್‌ ಸಂಪನ್ಮೂಲದ ಬಳಕೆಯ ಸಂದರ್ಭದಲ್ಲಿ ವ್ಯವಹರಿಸುವ ವಿಧಾನದ ಬಗ್ಗೆ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಗಮನದಲ್ಲಿರಿಸಿಕೊಂಡು ಶಿಷ್ಟಾಚಾರವನ್ನು ರೂಪಿಸಬೇಕು. ಸರ್ಕಾರಿ ಅಧಿಕಾರಿಗಳು ತಮ್ಮ ಅಧಿಕೃತ (ಸರ್ಕಾರದ) ಇಮೇಲ್‌ ಐಡಿಯ ಮೂಲಕವೇ ವ್ಯವಹರಿಸಬೇಕು ಮತ್ತು ವೈಯಕ್ತಿಯ ಇಮೇಲ್‌ ಐಡಿಯ ಬಳಕೆಯನ್ನು ನಿಷೇಧಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next