ಮುಂಬೈ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಕಳೆದ ವಿಶ್ವಕಪ್ ಫೈನಲಿಸ್ಟ್ ಗಳಾದ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ಮುಖಾಮುಖಿಯಾಗಲಿದೆ. ಕಪ್ ಗೆಲ್ಲುವ ಫೇವರೆಟ್ ತಂಡಗಳಲ್ಲಿ ಒಂದಾದ ಭಾರತವೂ ತನ್ನ ಅಭ್ಯಾಸ ಆರಂಭಿಸಿದೆ.
ಭಾರತದ ಮಾಜಿ ಆಟಗಾರ ವೀರೆಂದ್ರ ಸೆಹವಾಗ್ ಅವರು ಟೀಂ ಇಂಡಿಯಾದ ಮಿಡಲ್ ಆರ್ಡರ್ ಬ್ಯಾಟಿಂಗ್ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಶತಕ ಬಾರಿಸಿದ ನಂತರ ಶ್ರೇಯಸ್ ಅಯ್ಯರ್ ಅವರು ವಿಶ್ವಕಪ್ ಆಡುವ ಬಳಗದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ ಎಂದು ಸೆಹವಾಗ್ ಹೇಳಿದ್ದಾರೆ.
ಭಾರತದ ಮಧ್ಯಮ ಕ್ರಮಾಂಕವನ್ನು ಹೆಸರಸಿದ ಸೆಹವಾಗ್, ನಂ. 4 ರಲ್ಲಿ ಬ್ಯಾಟಿಂಗ್ ಗೆ ಶ್ರೇಯಸ್ ಅಯ್ಯರ್, ನಂ. 5 ರಲ್ಲಿ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ವಿಶ್ವಕಪ್ ನಲ್ಲಿ ನಂ. 6 ರಲ್ಲಿ ಬ್ಯಾಟಿಂಗ್ ಮಾಡಬೇಕು ಎಂದರು. ಪರಿಣಾಮವಾಗಿ, ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಇಬ್ಬರೂ ಆಡುವ ಬಳಗದಲ್ಲಿ ಅವಕಾಶ ಪಡೆಯುವುದು ಕಷ್ಟ ಎಂದು ಅವರು ಹೇಳಿದರು.
ರಾಹುಲ್ ಮತ್ತು ಹಾರ್ದಿಕ್ ಇರುವ ಕಾರಣ 7ನೇ ಕ್ರಮಾಂಕದಲ್ಲಿ ಬ್ಯಾಟರ್ ನ ಅಗತ್ಯವಿಲ್ಲ. ನಾವು ಇಶಾನ್ ಕಿಶನ್ ಆಡಬಹುದು ಎಂದು ಯೋಚಿಸಿದ್ದೆವು. ಆದರೆ ಶ್ರೇಯಸ್ ಅಯ್ಯರ್ ಅವರ ಶತಕದ ಬಳಿಕ ಅವರೇ ಫಿಕ್ಸ್ ಆಗಿದ್ದಾರೆ ಎಂದು ಸೆಹವಾಗ್ ಹೇಳಿದ್ದಾರೆ.
ಇದನ್ನೂ ಓದಿ:350 Years ಬಳಿಕ ಛತ್ರಪತಿ ಶಿವಾಜಿಯ ‘ಹುಲಿ ಉಗುರುಗಳ ಆಯುಧ’ ಭಾರತಕ್ಕೆ ಮರಳಲಿದೆ
“ಈಗ ಭಾರತವು ಈ ಸಂಯೋಜನೆಯನ್ನು ಹೇಗೆ ನೋಡುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ, ಹಾರ್ದಿಕ್ ಖಂಡಿತವಾಗಿಯೂ 10 ಓವರ್‌ಗಳನ್ನು ಬೌಲ್ ಮಾಡುತ್ತಾರೆ ಎಂದು ಅವರು ಭಾವಿಸುತ್ತಾರೆಯೇ, ಏಕೆಂದರೆ ಅದು ಭಾರತಕ್ಕೆ ಹೆಚ್ಚುವರಿ ಬೌಲರ್ ನೀಡುತ್ತದೆ. ಹಾಗಾಗಿ ಸೂರ್ಯಕುಮಾರ್ ಅಲ್ಲಿಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ ಮತ್ತು ಒಂದು ವೇಳೆ ಸ್ಲಾಟ್ ಇದ್ದರೂ, ಇಶಾನ್ ಎಡಗೈ ಆಟಗಾರನಾಗಿರುವುದರಿಂದ ಅವರಿಗೆ ಅವಕಾಶ ಹೆಚ್ಚು”ಎಂದು ಅವರು ಹೇಳಿದರು.