ಬೆಂಗಳೂರು: ಸಾರ್ವಜನಿಕರ ಮೇಲೆ ದೌರ್ಜನ್ಯ, ಡ್ರಗ್ಸ್ ಮಾರಾಟ, ವ್ಯಸನಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಎಚ್ಚರಿಕೆ ನೀಡಿದರು.
ಮಾಸಿಕ ಜನಸಂಪರ್ಕ ದಿವಸ್ ಹಿನ್ನೆಲೆಯಲ್ಲಿ ಶನಿವಾರ ವೈಯಾಲಿಕಾವಲ್ ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿ ಮಾತನಾಡಿದರು.
ಸಭೆಯಲ್ಲಿದ್ದ ಸಾರ್ವಜನಿಕರು ವೈಯಾಲಿಕಾವಲ್, ಗುಟ್ಟಹಳ್ಳಿ ಸುತ್ತಮುತ್ತಲ ನಿರ್ಜನ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಡ್ರಗ್ಸ್ ಸೇವಿಸಿ ಸಾರ್ವಜನಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಜತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಮುಖ್ಯವಾಗಿ ಗುಟ್ಟಹಳ್ಳಿ ಬಸ್ ನಿಲ್ದಾಣದಲ್ಲಿ ಕಾಲೇಜು ಯುವಕ-ಯುವತಿಯರು ಕಾಲೇಜು ಅಥವಾ ಮನೆಗೆ ತೆರಳದೆ ಬಹು ಸಮಯ ಬಸ್ ನಿಲ್ದಾಣದಲ್ಲೇ ಹರಟೆ ಹೊಡೆಯುತ್ತಾ ನಿಲ್ಲುವುದರ ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಾರೆ. ಅದರಿಂದ ಈ ಮಾರ್ಗವಾಗಿ ಓಡಾಡುವ ಮಹಿಳೆಯರು ಮತ್ತು ಮಕ್ಕಳಿಗೆ ಇರಿಸು ಮುರಿಸಾಗುತ್ತಿದೆ ಎಂದು ಸ್ಥಳೀಯರೊಬ್ಬರು ದೂರಿದರು.
ಅದಕ್ಕೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಆಯುಕ್ತರು, ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕರ ಶಾಂತಿಗೆ ಭಂಗ ತರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಕಾಲೇಜಿಗೆ ತೆರಳುವ ಸಮಯದಲ್ಲಿ ಹಾಗೂ ಬಿಡುವ ಸಮಯದಲ್ಲಿ ಹೆಚ್ಚಿನ ಪೊಲೀಸ್ ಗಸ್ತು ಓಡಾಡುವಂತೆ ಸೂಚಿಸಲಾಗುವುದು. ಅಲ್ಲದೆ, ಪೋಷಕರು ಕೂಡ ತಮ್ಮ ಮಕ್ಕಳಿಗೆ ಅಸಭ್ಯ ವರ್ತನೆ ಮಾಡದಂತೆ ತಿಳಿಹೇಳಿ ಸರಿ ದಾರಿಗೆ ತರಬೇಕು ಎಂದು ಇದೇ ವೇಳೆ ಸಲಹೆ ಕೂಡ ನೀಡಿದರು.
ಇದನ್ನೂ ಓದಿ:ಭಾರತ -ಬಾಂಗ್ಲಾದೇಶ ನಡುವಿನ ಬಾಂಧವ್ಯ ಭಾವನಾತ್ಮಕ: ಹರ್ಷವರ್ಧನ್
ವೈಯಾಲಿ ಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾರ್‌ಗಳಲ್ಲಿ ಮದ್ಯಪ್ರಿಯರು, ಬಾರ್‌ನಿಂದ ಹೊರಗೆ ಬಂದು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸುತ್ತಾರೆ. ಮದ್ಯದ ಅಮಲಿನಲ್ಲಿ ಸಾರ್ವಜನಿಕರ ಜತೆ ಕಾದಾಟಕ್ಕಿಳಿಯುತ್ತಾರೆ ಎಂದು ಮತ್ತೂಬ್ಬ ಸಾರ್ವಜನಿಕರು ದೂರು ನೀಡಿದರು. ಅದಕ್ಕೆ ಪ್ರತಿಕ್ರಿಯೆಸಿದ ಆಯುಕ್ತರು, ಬಾರ್ ಮಾಲೀಕರ ಜತೆ ಮಾತುಕತೆ ನಡೆಸಿ ಪರಿಹಾರ ಕಲ್ಪಿಸುವುದಾಗಿ ಭರವಸೆ ನಿಡಿದರು.
ಪಾರ್ಕಿಂಗ್ ಸ್ಥಳ ಕಲ್ಪಿಸಿ
ವೈಯಾಲಿಕಾವಲ್ ರಸ್ತೆ ಕಿರಿದಾಗಿದ್ದು, ಎರಡು ಕಡೆಗಳಿಂದಲೂ ವಾಹನ ಸಂಚಾರವಿದೆ. ಆದರೆ, ಕೆಲವರು ಮನಬಂದಂತೆ ತಮ್ಮ ವಾಹನಗಳನ್ನು ನಿಲ್ಲಿಸುತ್ತಾರೆ. ವಸತಿ ಪ್ರದೇಶಗಳಲ್ಲಿ ವಾಹನಗಳ ಮಾಲೀಕರು ತಮ್ಮ ವಾಹನಗಳನ್ನು ಮನೆ ಮುಂದೆ ಮತ್ತು ಗೇಟ್ ಮುಂದೆ ನಿಲ್ಲಿಸುತ್ತಾರೆ. ನಿಲ್ಲಿಸಿದ ಬಳಿಕ ಬಹಳ ಸಮಯ ತಮ್ಮ ವಾಹನಗಳನ್ನು ತೆಗೆಯುವುದಿಲ್ಲ. ಅದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು. ಅದ್ಕಕೆ ಪ್ರತಿಕ್ರಿಯಿಸಿದ ಆಯುಕ್ತರು, ಈ ಸಂಬಂಧ ಸಂಚಾರ ವಿಭಾಗ ಪೊಲೀಸರಿಗೆ ಸೂಚಿಸುತ್ತೇವೆ ಎಂದರು.