Advertisement

Education: ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕೆ ಕತ್ತರಿ

12:22 AM Nov 06, 2023 | Team Udayavani |

ಕಲಬುರಗಿ: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ವಾರ್ಷಿಕ ಶೈಕ್ಷಣಿಕ ಸಹಾಯಧನಕ್ಕೆ ರಾಜ್ಯ ಸರಕಾರ ಭಾರೀ ಪ್ರಮಾಣದ ಕತ್ತರಿ ಹಾಕಿದ್ದು, “ಗ್ಯಾರಂಟಿ’ಗೆ ಹಣ ಹೊಂದಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

Advertisement

ಈ ಆದೇಶ 2022-23ಕ್ಕೂ ಅನ್ವಯ ಎನ್ನುವ ಮೂಲಕ ಈಗಾಗಲೇ ಸಹಾಯಧನ ಬರುತ್ತದೆಂದು ನಂಬಿಕೊಂಡು ಸಾಲ ಮಾಡಿ ಉನ್ನತ ಶಿಕ್ಷಣ ಪಡೆಯಲು ಪ್ರವೇಶ ಪಡೆದ ಮಕ್ಕಳಿಗೂ ಬರೆ ಎಳೆದಿದೆ.
ಈ ಆದೇಶವನ್ನು ಅ.30ರಂದು ಕಾರ್ಮಿಕ ಇಲಾಖೆ ಹೊರಡಿಸಿದೆ. ಶೇ.80ರಷ್ಟು ಸಹಾಯಧನ ಕಡಿತ ಮಾಡಿದೆ.

ಒಂದರಿಂದ 4ನೇ ತರಗತಿವರೆಗೆ ವಾರ್ಷಿಕ 5 ಸಾವಿರ ರೂ., 5ರಿಂದ 8ನೇ ತರಗತಿಗೆ 8 ಸಾವಿರ ಮತ್ತು 9ರಿಂದ ಮೆಟ್ರಿಕ್‌ವರೆಗೆ 12 ಸಾವಿರ ರೂ. ಇತ್ತು. ಅದನ್ನು ಕ್ರಮವಾಗಿ ಒಂದರಿಂದ 5ನೇ ತರಗತಿವರೆಗೆ ವಾರ್ಷಿಕ 1,100, 6 ಮತ್ತು 7ನೇ ತರಗತಿಗೆ 1,250, 8ನೇ ತರಗತಿಗೆ 1,350 ರೂ. ಮತ್ತು 9ರಿಂದ ಮೆಟ್ರಿಕ್‌ವರೆಗಿನ ವಾರ್ಷಿಕ ಸಹಾಯಧನವನ್ನು 3,000 ರೂ.ಗಳಿಗೆ ಇಳಿಕೆ ಮಾಡಲಾಗಿದೆ.
ಪದವಿ ಶಿಕ್ಷಣಕ್ಕೆ 6 ಸಾವಿರ ರೂ., ಪಿಎಚ್‌ಡಿಗೆ 11,000 ರೂ., ಎಂಡಿ ಕೋರ್ಸ್‌ಗೆ 12,000 ರೂ., ಎಲ್‌ಎಲ್‌ಬಿಗೆ 10,000 ರೂ., ಎಂಜಿನಿ ಯರಿಂಗ್‌, ಎಂಟೆಕ್‌, ನರ್ಸಿಂಗ್‌, ಪ್ಯಾರಾ ಮೆಡಿಕಲ್‌, ಸ್ನಾತಕೋತ್ತರ ಕೋರ್ಸ್‌ಗೆ ವಾರ್ಷಿಕ 10 ಸಾವಿರ ರೂ. ಸಹಾಯಧನ ನೀಡಲು ಕಾರ್ಮಿಕ ಇಲಾಖೆ ತೀರ್ಮಾನ ಕೈಗೊಂಡಿದೆ.

ಹಿಂದೆ ಎಷ್ಟಿತ್ತು?
ಈ ಹಿಂದೆ ಪದವಿಗೆ 25 ಸಾವಿರ ರೂ., ಎಲ್‌ಎಲ್‌ಬಿ, ಎಲ್‌ಎಲ್‌ಎಂ ಓದಲು 30 ಸಾವಿರ ರೂ., ಸ್ನಾತಕೋತ್ತರ ಪದವಿಗೆ 35 ಸಾವಿರ ರೂ., ಬಿಇ, ಬಿಟಕ್‌ಗೆ 50 ಸಾವಿರ ರೂ., ಎಂಟೆಕ್‌ಗೆ 60 ಸಾವಿರ ರೂ., ಎಂಬಿಬಿಎಸ್‌, ಎಂಡಿಗೆ 60ರಿಂದ 75 ಸಾವಿರ ರೂ.ಗಳನ್ನು ನೀಡಲಾಗುತ್ತಿತ್ತು.

ಸರಕಾರದ ಈ ಆದೇಶದಿಂದ ಈಗಾಗಲೇ ಕೆಲವು ಉನ್ನತ ಶಿಕ್ಷಣ, ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆದಿರುವ ಮಕ್ಕಳ ಗತಿ ಏನು? ಅಲ್ಲದೆ, ಈ ಆದೇಶ ಹಿಂದಿನ ಸಾಲಿಗೂ ಅನ್ವಯ ಎನ್ನುವುದು ಎಷ್ಟು ಸರಿ. ಇಂತಹ ನಿರ್ಧಾರದಿಂದ ಕೂಡಲೇ ಸರಕಾರ ಹಿಂದೆ ಸರಿಯಬೇಕು. ಕಾರ್ಮಿಕ ಸಚಿವರು ಕೂಡಲೇ ಇದನ್ನು ಪರಿಷ್ಕರಿಸಬೇಕು. – ಶಂಕರ ಕಟ್ಟಿಸಂಗಾವಿ, ಮಾಜಿ ನಿರ್ದೇಶಕ, ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿ

Advertisement

ಸರಕಾರದ ಆದೇಶಗಳಿಂದ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಬದುಕು ಹಾಳಾಗುತ್ತದೆ. ಪರಿಜ್ಞಾನವಿಲ್ಲದೆ ಶೇ.80 ಸಹಾಯಧನ ಕಡಿಮೆ ಮಾಡಲಾಗಿದೆ. ಅಲ್ಲದೆ, ಇದು ಮಂಡಳಿ ಹಣ. ಇದಕ್ಕೆ ಸರಕಾರವನ್ನು ಕಾಯುವ ಅಗತ್ಯವೇನೂ ಇಲ್ಲ. ಸರಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ.
– ಹಣಮಂತ ಪೂಜಾರಿ, ಕಾರ್ಯದರ್ಶಿ, ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ

 ಸೂರ್ಯಕಾಂತ್‌ ಎಂ.ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next