Advertisement

ಕಾಂಗ್ರೆಸ್‌ ರಾಜ್ಯಕ್ಕಿರುವ ಶಾಪ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

06:18 PM Apr 26, 2023 | Team Udayavani |

ಹುಬ್ಬಳ್ಳಿ: ಕಾಂಗ್ರೆಸ್‌ ಪಕ್ಷವೇ ರಾಜ್ಯಕ್ಕೆ ಇರುವ ಶಾಪ. ರಾಜ್ಯದಲ್ಲಿ ಐದು ವರ್ಷ ಆಡಳಿತ ನಡೆಸಿ ಇನ್ನಿಲ್ಲದ ಭಾಗ್ಯಗಳನ್ನು ತಂದರು. ಆದರೆ ಅವ್ಯಾವುವು ಜನರಿಗೆ ತಲುಪಲಿಲ್ಲ. ಅವರದೆಲ್ಲವೂ ದೌರ್ಭಾಗ್ಯಗಳೇ. ರಾಜ್ಯಕ್ಕೆ ಮತ್ತೂಮ್ಮೆ ಇಂತಹ ದೌರ್ಭಾಗ್ಯದ ಪಕ್ಷವು ಬರಬಾರದೆಂದರೆ ಬಿಜೆಪಿಗೆ ಮತ ನೀಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಅಮರಗೋಳದಲ್ಲಿ ಮಂಗಳವಾರ ಹು-ಧಾ ಪಶ್ಚಿಮ ಕ್ಷೇತ್ರದ ಅಭ್ಯರ್ಥಿ, ಶಾಸಕ ಅರವಿಂದ ಬೆಲ್ಲದ ಪರ ಜನವಾಹಿನಿ ರೋಡ್‌ ಶೋ ಮೂಲಕ ಪ್ರಚಾರ ನಡೆಸಿದ ಅವರು ಗ್ರಾಮದ ಚವಡಿ ಓಣಿ ವೃತ್ತದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್‌ ಮತ ಬ್ಯಾಂಕ್‌ ಛಿದ್ರಗೊಂಡಿದೆ. ಹೀಗಾಗಿ ಲಿಂಗಾಯತ ಧರ್ಮ ಇನ್ನಿತರೆ ಬಗ್ಗೆ ಮಾತನಾಡುತ್ತಿದ್ದಾರೆ. ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಪ್ರೇಕ್ಷಕರಿಲ್ಲದ ನಾಟಕ ಕಂಪನಿಯಾಗಿದ್ದು, ಕೆಲವೇ ದಿನಗಳಲ್ಲಿ ದಿವಾಳಿಯಾಗಿ ಮುಚ್ಚಿಕೊಂಡು ಹೋಗಲಿದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ನವರಿಗೆ ಈಗ ಬಸವಣ್ಣನ ಮೇಲೆ ಬಹಳ ಪ್ರೀತಿ ಬಂದಿದೆ. ರಾಹುಲ್‌ ಗಾಂಧಿ ಕೂಡಲಸಂಗಮಕ್ಕೆ ಬಂದು ವಿಭೂತಿ ಹಚ್ಚಿಕೊಂಡು ಹೋದರು. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು. ಆಗ ರಾಹುಲ್‌ ಸೇರಿದಂತೆ ಯಾರಾದರೂ ಬಂದು ಪರಿಹಾರ ಕೊಟ್ಟರೆ? ನಾವು ಅಧಿಕಾರದಲ್ಲಿ ಇಲ್ಲದಿದ್ದರೂ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ತೆರಳಿ
ಪರಿಹಾರ ಕೊಟ್ಟೆವು ಎಂದರು.

ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ ಕೆಲಸಗಾರರು ಯಾರು, ಅಭಿವೃದ್ಧಿ ಮಾಡುವವರು ಯಾರು ಹಾಗೂ ಚುನಾವಣೆ ಸಂದರ್ಭದಲ್ಲಿ ಬಂದು ಜಾತ್ರೆ ಮಾಡುವವರು ಯಾರು ಎಂಬುವರ ನಡುವೆ ಸ್ಪರ್ಧೆ ನಡೆಯುತ್ತಿದೆ.

Advertisement

500-1000ರೂ.ದಲ್ಲಿ ಹೊಲಿಗೆ ಯಂತ್ರ ತಂದು ಕೊಟ್ಟು ಮತದಾರರಿಗೆ ಆಮಿಷವೊಡ್ಡಿ ಮತ ಪಡೆಯುವವರು ಬೇಕಿಲ್ಲ. ನಮ್ಮ ಊರು, ಕೇರಿ, ಸಮಾಜ, ಯುವಕರ ಭವಿಷ್ಯ, ಮಹಿಳೆಯರಿಗೆ ಅವಕಾಶ ನೀಡುವಂತಹ ಸರ್ಕಾರ, ಜನಪ್ರತಿನಿಧಿಗಳು ಬೇಕು. ಅರವಿಂದ ಬೆಲ್ಲದ ಸಜ್ಜನ, ಯಶಸ್ವಿ ಉದ್ಯಮಿ. ಅವರನ್ನು ಎಲ್ಲ ವರ್ಗ, ಸಮಾಜ ಒಗ್ಗಟ್ಟಾಗಿ ಕಳೆದ ಬಾರಿಗಿಂತ ಹೆಚ್ಚಿನ ಮತಗಳಿಂದ ಚುನಾಯಿಸಬೇಕು. ಬೆಲ್ಲದ 50 ಸಾವಿರ ಮತಗಳಿಂದ ಗೆಲ್ಲುವುದು ಖಚಿತ ಎಂದು ಭವಿಷ್ಯ ನುಡಿದರು.

ಅಮರಗೋಳ ನನ್ನ ಗ್ರಾಮ. ಇಲ್ಲಿಯೇ ನನ್ನ ಹೊಲವಿದೆ. ನಮ್ಮ ತಂದೆ-ತಾಯಿ ಕೂಡ ಇದೇ ಭೂಮಿಯಲ್ಲಿದ್ದು, ಈ ಗ್ರಾಮವನ್ನು ಎಂದೂ ಮರೆಯಲ್ಲ. ತಂದೆಯವರು ಸಹಿತ ಗ್ರಾಮದವರೊಂದಿಗೆ ತುಂಬಾ ಹಳೆಯ ಒಡನಾಟ ಹೊಂದಿದ್ದರು ಎಂದರು.

ಚವಡಿ ಓಣಿಯ ವೃತ್ತದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಿಎಂ ಬೊಮ್ಮಾಯಿ ಅವರಿಗೆ ಸೇಬು ಹಣ್ಣುಗಳು, ಹೂವಿನ ಗುತ್ಛಗಳಿಂದ ನಿರ್ಮಿಸಿದ್ದ ಬೃಹತ್‌ ಹಾರವನ್ನು ಕ್ರೇನ್‌ ಮೂಲಕ ಹಾಕಿ ಬರಮಾಡಿಕೊಂಡರು. ಇದಕ್ಕೂ ಮೊದಲು ಅಮರಗೋಳದ ಶ್ರೀ ಬೀರೇಶ್ವರ ಗುಡಿಯಿಂದ ತೆರೆದ ವಾಹನದಲ್ಲಿ ಗ್ರಾಮದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ
ಮತಯಾಚಿಸಿದರು. ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಸದಸ್ಯರಾದ ಚಂದ್ರಶೇಖರ ಮನಗುಂಡಿ, ಸುನಿತಾ ಮಾಳವಕರ, ಮಾಜಿ ಸದಸ್ಯರಾದ ಅಜ್ಜಪ್ಪ ಹೊರಕೇರಿ, ಮಲ್ಲಿಕಾರ್ಜುನ ಹೊರಕೇರಿ, ಶಾಂತಪ್ಪ ದೇವಕ್ಕಿ ಮೊದಲಾದವರಿದ್ದರು.

ಕಾಂಗ್ರೆಸ್‌ ಇಂದು ಹತಾಶಗೊಂಡಿದೆ. ಅವರು ದೀನ ದಲಿತರು, ಹಿಂದುಳಿದವರು ನಮ್ಮ ಮತ ಬ್ಯಾಂಕ್‌ ಎಂದುಕೊಂಡಿದ್ದರು. ಈಗ ಅವರು ಸೇರಿದಂತೆ ರೈತರು, ಮಹಿಳೆಯರು, ಯುವಕರು ಬಿಜೆಪಿ ಬೆಂಬಲಿಸುತ್ತಿದ್ದಾರೆ. ಅವರೆಲ್ಲ ಕಾಂಗ್ರೆಸ್‌ ಅನ್ನು ಬಾವಿಗೆ
ಹಾಕಲು ತೀರ್ಮಾನಿಸಿದ್ದಾರೆ.
*ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next