Advertisement

Drought: ಬರ ಘೋಷಣೆಗೆ ಹಾಲಿ ನಿಯಮವೇ ಗತಿ

10:10 PM Aug 17, 2023 | Team Udayavani |

ಬೆಂಗಳೂರು: ಬರ ಘೋಷಣೆಗೆ ಈಗಿರುವ ಎನ್‌ಡಿಆರ್‌ಎಫ್ ಮಾನದಂಡಗಳು ರಾಜ್ಯ ಸರಕಾರದ ಕೈಗಳನ್ನು ಕಟ್ಟಿ ಹಾಕಿದ್ದು, ಬರ ನಿರ್ವಹಣೆ ಕೈಪಿಡಿಯ ಮಾರ್ಗಸೂಚಿಗಳನ್ನು ಬದಲಿಸಲು ಕೇಂದ್ರವನ್ನು ಕೋರಿದ್ದರೂ ತತ್‌ಕ್ಷಣಕ್ಕೆ ಅದು ಸಾಧ್ಯವಿಲ್ಲ.

Advertisement

ಇಡೀ ದೇಶಕ್ಕೆ ಅನ್ವಯ ಆಗುವ ರೀತಿಯಲ್ಲಿ ಜಾರಿಯಲ್ಲಿರುವ ಮಾರ್ಗಸೂಚಿಯನ್ನು ಕರ್ನಾಟಕಕ್ಕೆ ಸೀಮಿತವಾಗಿ ಬದಲಿಸಲು ನಿಯಮಗಳಲ್ಲಿ ಅವಕಾಶಗಳಿಲ್ಲ. ಹಾಗೊಂದು ವೇಳೆ ಪರಿಷ್ಕರಿಸಿದರೂ ಪ್ರಸಕ್ತ ಮುಂಗಾರು ಹಂಗಾಮಿನಿಂದಲೇ ಪರಿಷ್ಕೃತ ಮಾರ್ಗಸೂಚಿ ಜಾರಿಯಾಗುವುದೂ ಇಲ್ಲ. ಹೀಗಾಗಿ ಈಗಿರುವ ಮಾನದಂಡಗಳನ್ನು ಅನುಸರಿಸಿಯೇ ತೀರ್ಮಾನ ಕೈಗೊಳ್ಳುವ ಅನಿವಾರ್ಯ ಎದುರಾಗಿದೆ.

2009ರ ನವೆಂಬರ್‌ನಲ್ಲಿ ಬರ ನಿರ್ವಹಣ ಕೈಪಿಡಿ ಸಿದ್ಧವಾಗಿತ್ತು. 2016ರಲ್ಲಿ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಲಾಗಿತ್ತು. ಅದಾದ ಅನಂತರ ಮಾನದಂಡಗಳ ಪರಿಷ್ಕರಣೆ ಆಗಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣೆಯ ಕ್ರಿಯಾಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಬಹುದೇ ವಿನಾ ಬರ ನಿರ್ವಹಣ ಕೈಪಿಡಿಯ ಮಾರ್ಗಸೂಚಿಗಳನ್ನು ಪರಿಷ್ಕರಿಸಲು ಅದರದ್ದೇ ಆದ ಮಾನದಂಡಗಳಿವೆ.

ಎನ್‌ಡಿಆರ್‌ಎಫ್ ನೆರವು
ಪ್ರಸ್ತುತ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳದಲ್ಲೂ ಮಳೆ ಕೈಕೊಟ್ಟಿದೆ. ಮುಂಗಾರು ಅವಧಿ ಮುಗಿಯುವ ವೇಳೆಗೆ ಬರಪೀಡಿತ ರಾಜ್ಯಗಳ ಸಂಖ್ಯೆ ಇನ್ನಷ್ಟು ಏರಲಿದೆ. ಕೇಂದ್ರ ಸರಕಾರವು ತನ್ನ ಖಜಾನೆಯಲ್ಲಿರುವ ಸಂಪನ್ಮೂಲವನ್ನು ಒಂದೇ ರಾಜ್ಯಕ್ಕೆ ಹಂಚಿಕೆ ಮಾಡಲು ಸಾಧ್ಯವಿಲ್ಲ. ಎನ್‌ಡಿಆರ್‌ಎಫ್ ಮೂಲಕ ತನ್ನ ಪಾಲಿನ ಪರಿಹಾರ ಕೂಡ ನೀಡಬೇಕಾಗುತ್ತದೆ. ಇದನ್ನೆಲ್ಲ ಗಮನದಲ್ಲಿ ಇರಿಸಿಕೊಂಡು ಇಡೀ ದೇಶಕ್ಕೆ ಅನ್ವಯ ಆಗುವ ರೀತಿಯಲ್ಲಿ ಮಾನದಂಡಗಳನ್ನು ನಿಗದಿಪಡಿಸುತ್ತದೆ. ಹವಾಮಾನ ಆಧಾರಿತ ಕೃಷಿ ವಲಯ ಅಥವಾ ಒಂದೊಂದು ರಾಜ್ಯಕ್ಕೆ ಒಂದೊಂದು ರೀತಿಯ ಮಾನದಂಡ ಮಾಡಲು ಸಾಧ್ಯವಿಲ್ಲ. ಬರಪೀಡಿತ ಪ್ರದೇಶಗಳನ್ನಾಗಲೀ, ನೆರೆಪೀಡಿತ ಪ್ರದೇಶಗಳನ್ನಾಗಲೀ ರಾಜ್ಯ ಸರಕಾರ ಘೋಷಣೆ ಮಾಡುವುದಾದರೂ ಕೇಂದ್ರ ಸರಕಾರದ ಮಾರ್ಗಸೂಚಿ ಅನುಸರಿಸಿಯೇ ಮಾಡಬೇಕು. ಅದನ್ನು ಮೀರಿ ಘೋಷಿಸಲು ನಿಯಮಗಳು ಒಪ್ಪುವುದಿಲ್ಲ.

ಉಳಿದ ರಾಜ್ಯಗಳೂ ಬರ ನಿರ್ವಹಣ ಕೈಪಿಡಿಯ ಮಾನದಂಡಗಳ ಪರಿಷ್ಕರಣೆಗೆ ಒತ್ತಡ ಹಾಕಬೇಕು. ರಾಷ್ಟ್ರೀಯ ವಿಪತ್ತು ನಿರ್ವಹಣ ಸಂಸ್ಥೆಯಿಂದ ಅಧ್ಯಯನ ನಡೆಸಿ ಶಿಫಾರಸುಗೊಳ್ಳಬೇಕು. ಅದನ್ನು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಸಹಕಾರ ಇಲಾಖೆಗಳು ಪರಿಶೀಲಿಸಿ ಸಂಪುಟ ಉಪಸಮಿತಿ ಮುಂದಿಟ್ಟು ಚರ್ಚಿಸಬೇಕು. ಬಳಿಕ ಸಚಿವ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಈ ಪ್ರಕ್ರಿಯೆಗಳಿಗೆ ಸಮಯಾವಕಾಶ ಬೇಕಾಗುತ್ತದೆ. ಹೀಗಾಗಿ ಮಾನದಂಡ ಬದಲಿಸಲು ತತ್‌ಕ್ಷಣಕ್ಕಂತೂ ಸಾಧ್ಯವಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.

Advertisement

ಅಕ್ಟೋಬರ್‌ ಆರಂಭದವರೆಗೂ ಮುಂಗಾರು ಅವಧಿ ಇರಲಿದೆ. ವಿಪತ್ತು ನಿರ್ವಹಣೆಗೆ ಸಂಬಂಧಿಸಿ ಕಾಲಕಾಲಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮಾಹಿತಿ ರವಾನಿಸಲಾಗುತ್ತಿದೆ. ಹವಾಮಾನ ವೀಕ್ಷಣ ಸಮಿತಿಗಳು ನಿಗಾ ಇಟ್ಟಿವೆ. ರಾಜ್ಯ ಕಾರ್ಯಕಾರಿ ಸಮಿತಿಯೂ ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ.
– ರಶ್ಮಿ ಮಹೇಶ್‌, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ

ರಾಜ್ಯದಲ್ಲಿ ಮಳೆ ಕೊರತೆ ಆಗಿದ್ದರೂ ಎನ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರವೇ ಬರಪೀಡಿತ ಪ್ರದೇಶಗಳನ್ನು ಘೋಷಿಸಬೇಕಾಗುತ್ತದೆ. ಮುಂಗಾರು ಅವಧಿಯ ವಾಡಿಕೆ ಮಳೆ, ಸರಾಸರಿ ಮಳೆ ಹಾಗೂ ಕೊರತೆ, ಅಂತರ್ಜಲ ಮಟ್ಟ, ಒಣಹವೆ, ತೇವಾಂಶ, ಬೆಳೆನಷ್ಟ ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲದರ ಪ್ರಕ್ರಿಯೆ ನಡೆಯುತ್ತಿದ್ದು, ತಿಂಗಳಾಂತ್ಯಕ್ಕೆ ರಾಜ್ಯ ಸರಕಾರವು ಬರಪೀಡಿತ ಪ್ರದೇಶಗಳ ಘೋಷಣೆ ಮಾಡಬಹುದು.
– ಶ್ರೀನಿವಾಸ ರೆಡ್ಡಿ, ಕೆಎಸ್‌ಎನ್‌ಡಿಎಂಸಿ ಹಿರಿಯ ಸಲಹೆಗಾರ

ಶೇಷಾದ್ರಿ ಸಾಮಗ

Advertisement

Udayavani is now on Telegram. Click here to join our channel and stay updated with the latest news.

Next