ಬೆಂಗಳೂರು: ಇಡೀ ದೇಶದ ಗಮನ ತನ್ನತ್ತ ಸೆಳೆದಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿಶ್ವಾಸಮತ ಯಾಚನೆ ಪ್ರಹಸನ ಅತ್ತ ಶನಿವಾರ ವಿಧಾನಸಭೆಯಲ್ಲಿ ನಡೆಯುತ್ತಿದ್ದರೆ, ಇತ್ತ ವಿಧಾನಸೌಧದ ಸಚಿವಾಲಯ ಕಚೇರಿಗಳಲ್ಲಿ ವಿಶ್ವಾಸಮತದ್ದೇ ಮಾತು, ಮೈತ್ರಿಯದ್ದೇ ಲೆಕ್ಕಚಾರದಲ್ಲಿ ಸಿಬ್ಬಂದಿ ತೊಡಗಿದ್ದರು.
ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಹಾಗೂ ವಿಶ್ವಾಸಮತ ಯಾಚನೆಗೆ ವಿಧಾನಸಭೆಯ ತುರ್ತು ಅಧಿವೇಶನ ಕರೆಯಲಾಗಿತ್ತು. ಸ್ಪೀಕರ್ ಸಚಿವಾಲಯ ಮತ್ತು ಮುಖ್ಯಮಂತ್ರಿ ಸಚಿವಾಲಯದಲ್ಲಿ ಮಾತ್ರ ದೈನಂದಿನ ಕೆಲಸ ಕಾರ್ಯಗಳು ಬಿರುಸಿನಿಂದ ನಡೆದಿದ್ದವು.
ವಿಧಾನಸೌಧ ಮೂರು ಮಹಡಿಗಳಲ್ಲಿರುವ ವಿವಿಧ ಇಲಾಖೆಗಳ ಕಚೇರಿಗಳಲ್ಲಿ ಇಂಟರ್‌ನೆಟ್ ಮೂಲಕ ಕಂಪ್ಯೂಟರ್‌ಗಳಲ್ಲಿ ಮತ್ತು ಕೆಲವು ಕಚೇರಿಗಳಲ್ಲಿ ಟಿವಿಗಳಲ್ಲಿ ಸಿಬ್ಬಂದಿ ಕಲಾಪ ವೀಕ್ಷಣೆಯಲ್ಲಿ ತೊಡಗಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಶನಿವಾರ ಆಗಿದ್ದರಿಂದ ಕಚೇರಿಗಳಲ್ಲಿ ಸಿಬ್ಬಂದಿ ಸಂಖ್ಯೆ ವಿರಳವಾಗಿತ್ತು. ಬಹುತೇಕ ಕಚೇರಿಗಳಲ್ಲಿ ಹಿರಿಯ ಅಧಿಕಾರಿಗಳು ಇರಲಿಲ್ಲ. ಇದ್ದ ಸಿಬ್ಬಂದಿ ವಿಶ್ವಾಸಮತ ಯಾಚನೆ ಏನಾಗುತ್ತೆ, ಯಾರು ಸೋಲುತ್ತಾರೆ, ಯಾರು ಗೆಲ್ಲುತ್ತಾರೆ,
ಮುಂದೆ ಯಾವ ಸರ್ಕಾರ ಬರುತ್ತೆ ಅನ್ನುವುದರ ಬಗ್ಗೆ ತಮ್ಮದೇ ವಿಶ್ಲೇಷಣೆ, ಸಮರ್ಥನೆಗಳಲ್ಲಿ ತೊಡಗಿದ್ದು ಕಂಡು ಬಂತು. ಸಿಬ್ಬಂದಿ ಸಂಖ್ಯೆ ಕಡಿಮೆ ಇದ್ದರೂ, ವಿಧಾನಸೌಧದ ನೆಲಮಹಡಿಯಲ್ಲಿರುವ ಕ್ಯಾಂಟೀನ್‌ನಲ್ಲಿ ಊಟ ಬಹಳ ಬೇಗ ಮುಗಿದು ಹೋಗಿತ್ತು. ಊಟಕ್ಕಾಗಿ ಬಂದ ಕೆಲವರು ಪರದಾಡಿದರು.