Advertisement

ಕೋವಿಡ್ ಗೆದ್ದ ಮೂವರು ಡಿಸ್ಚಾರ್ಜ್‌

06:52 AM Jun 14, 2020 | Suhan S |

ಗದಗ: ಕೋವಿಡ್‌-19 ಸೋಂಕಿನಿಂದ ಬಳಲುತ್ತಿದ್ದವರ ಪೈಕಿ ಡಯಾಗ್ನಾಸ್ಟಿಕ್‌ ಸೆಂಟರ್‌ನ ಟೆಕ್ನಿಷಿಯನ್‌ ಸೇರಿದಂತೆ ಮೂವರು ಗುಣಮುಖರಾಗಿದ್ದಾರೆ.

Advertisement

ಅವರು ನಿಗದಿತ ಕೋವಿಡ್‌ ಆಸ್ಪತ್ರೆಯಿಂದ ಶನಿವಾರ ಬಿಡುಗಡೆಯಾಗಿದ್ದು, ಸಾರ್ವಜನಿಕರಲ್ಲಿ ಸಮಾಧಾನ ತಂದಿದೆ. ಪಿ-4079 ಇವರ ದ್ವಿತೀಯ ಸಂಪರ್ಕಿದಿಂದಾಗಿ ಕೊರೊನಾ ತಗುಲಿದ್ದ 28 ವರ್ಷದ ವ್ಯಕ್ತಿ(ಪಿ-5015), 32 ವರ್ಷದ ವ್ಯಕ್ತಿ(ಪಿ- 5016) ಹಾಗೂ ಲಕ್ಕುಂಡಿಯ 29 ವರ್ಷದ ವ್ಯಕ್ತಿ(ಪಿ- 5017) ಗುಣಮುಖರಾಗಿದ್ದಾರೆ. ಪಿ-5017 ಅವರಿಗೆ ಮೇ 22 ಮತ್ತು ಇನ್ನುಳಿದವರಿಗೆ ಜೂ. 5ರಂದು ಕೋವಿಡ್‌ ಸೋಂಕು ದೃಢಪಟ್ಟಿತ್ತು. ಅವರಲ್ಲಿ ಒಬ್ಬರು ಇಲ್ಲಿನ ಕಳಸಾಪುರ ರಸ್ತೆಯಲ್ಲಿರುವ ಡಯಾಗ್ನಾಸ್ಟಿಕ್‌ ಸೆಂಟರ್‌ ನ ಟೆಕ್ನೀಷಿಯನ್‌. ಅವರು ಕೂಡ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

ಇತ್ತೀಚೆಗೆ ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದರಿಂದ ಜೂ. 12ರಂದು ಮರು ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರಯೋಗಾಲಯದ ವರದಿಯಲ್ಲಿ ಫಲಿತಾಂಶ ನೆಗೆಟಿವ್‌ ಆಗಿದ್ದರಿಂದ ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಮುಂದಿನ 14 ದಿನಗಳ ಕಾಲ ಮನೆಯಲ್ಲೇ ಇರಲು ಹಾಗೂ ಆರೋಗ್ಯದಲ್ಲಿ ಏನಾದರೂ ತೊಂದರೆಯಾದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಬೇಕು. ಆರೋಗ್ಯ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ವಿನಾಕಾರಣ ಮನೆಯಿಂದ ಹೊರಗಡೆ ಬರಬಾರದು ಎಂದು ವೈದ್ಯರು ಸೂಚಿಸಿದರು.

ರೋಗಿಗಳು ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆ ಜಿಮ್ಸ್‌ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಶುಭ ಕೋರಿದರು. ಜೊತೆಗೆ ಸ್ನಾನಿಟೈಸರ್‌, ಮಾಸ್ಕ್ ಸೇರಿದಂತೆ ಆರೋಗ್ಯ ರಕ್ಷಣೆಗೆ ಅಗತ್ಯ ವಸ್ತುಗಳನ್ನು ನೀಡಿ, ಬೀಳ್ಕೊಟ್ಟರು. ಜಿಮ್ಸ್‌ ನಿರ್ದೇಶಕ ಡಾ| ಪಿ.ಎಸ್‌. ಭೂಸರೆಡ್ಡಿ ಸೇರಿದಂತೆ ಇನ್ನಿತರೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಇದ್ದರು.

8 ಪ್ರಕರಣ ಸಕ್ರಿಯ: ಜಿಲ್ಲೆಯಲ್ಲಿ ಒಂದು ತಿಂಗಳಿಂದ ದಿನಕಳೆದಂತೆ ಕೋವಿಡ್‌ ಪ್ರಕರಣಗಳು ಏರಿಕೆಯಾಗುವುದರೊಂದಿಗೆ ಗುಣ ಮುಖರಾಗುತ್ತಿರುವವರ ಸಂಖ್ಯೆಯೂ ಅಷ್ಟೇ ಪ್ರಮಾಣದಲ್ಲಿದೆ. ಜಿಲ್ಲೆಯಲ್ಲಿ ಕಂಡುಬಂದಿದ್ದ 49 ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಇದೀಗ 8ಕ್ಕೆ ಇಳಿದಿರುವುದು ಜಿಲ್ಲೆಯ ಜನತೆಯಲ್ಲಿ ಸಮಾಧಾನ ತಂದಿದೆ. ಶುಕ್ರವಾರ ಸಂಜೆವರೆಗೆ ಜಿಲ್ಲೆಯಲ್ಲಿ 11 ಪ್ರಕರಣಗಳು ಸಕ್ರಿಯವಾಗಿದ್ದವು. ಶನಿವಾರ ಮೂವರು ಗುಣಮುಖರಾಗಿದ್ದು, ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 8ಕ್ಕೆ ಇಳಿದಿದೆ. ಇದರಿಂದಾಗಿ ಸಾರ್ವಜನಿಕರಲ್ಲಿನ ಕೋವಿಡ್‌ ಆತಂಕ ದೂರವಾಗಿದೆ.

Advertisement

ಆಸ್ಪತ್ರೆಯಲ್ಲಿ 19 ಜನರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 7027 ಜನರು ನಿಗಾಕ್ಕೆ ಒಳಗಾಗಿದ್ದಾರೆ. ಒಟ್ಟು 7546 ಜನರಿಂದ ಕೋವಿಡ್‌ ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಿದ್ದು, 49 ಜನರಿಗೆ ಸೋಂಕು ದೃಢ ಪಟ್ಟಿತ್ತು. ಅದರಲ್ಲಿ 39 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನುಳಿದಂತೆ 8 ಜನರಿಗೆ ಇಲ್ಲಿನ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಮೂವರ ವರದಿ ಬಾಕಿ ಇವೆ.

Advertisement

Udayavani is now on Telegram. Click here to join our channel and stay updated with the latest news.

Next