ಬೆಂಗಳೂರು: ಪಕ್ಷದ ಕಾರ್ಯಾಲಯಕ್ಕೆ ಕಾರ್ಯಕರ್ತರು ಬಂದರೆ ಸಂಸ್ಕಾರ ಬೆಳೆಯುತ್ತದೆ. ಜತೆಗೆ, ರಾಜಕೀಯ ವಿಚಾರಕ್ಕೆ ನಿರ್ದಿಷ್ಟ ದೃಷ್ಟಿಕೋನ ದೊರೆತು ಬೆಳೆಯಲು ನೆರವಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರತಿಪಾದಿಸಿದ್ದಾರೆ.
ಪಕ್ಷದ ಕಾರ್ಯಾಲಯವೆಂದರೆ ಅದು ಕೇವಲ ಕಚೇರಿಯಲ್ಲ, ಅದು ಸಂಸ್ಕಾರ ಕೇಂದ್ರದ ಜತೆಗೆ ಜನರನ್ನು ಒಗ್ಗೂಡಿಸುವ ಸಂಪರ್ಕ ಕೇಂದ್ರವೂ ಆಗಿರಲಿದೆ. ಕಾರ್ಯಾಲಯದ ಮೂಲಕವೇ ಕಾರ್ಯಕರ್ತರಿಗೆ ಪ್ರೇರಣೆಯಾಗಲಿದೆ ಎಂದರು.
ದೇಶದಲ್ಲಿ ಬಿಜೆಪಿಯ ಸ್ವಂತ ಕಾರ್ಯಾಲಯವಿಲ್ಲದ ಜಿಲ್ಲೆ ಇರಬಾರದು ಎಂಬ ಸಂಕಲ್ಪದ ಭಾಗವಾಗಿ ರಾಜ್ಯದಲ್ಲಿ ಶುಕ್ರವಾರ ಎಂಟು ಜಿಲ್ಲೆ ಹಾಗೂ ಒಂದು ಮಂಡ ಲದ ಕಾರ್ಯಾಲಯ ನಿರ್ಮಾಣ ಕಾಮಗಾರಿಗೆ ದಿಲ್ಲಿ ಯಿಂದಲೇ ವರ್ಚುಯಲ್ ಕಾರ್ಯಕ್ರಮದ ಮೂಲಕ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾತನಾಡಿದರು.
ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕಟೀಲು ನೇತೃತ್ವದಲ್ಲಿ ರಾಜ್ಯದಲ್ಲಿ ಪಕ್ಷ ಬಲವರ್ಧನೆಯಾಗಲಿದೆ ಎಂದು ಅವರು ಹೇಳಿದರು.
“ಕಾವೇರಿ’ ನಿವಾಸದಿಂದ ಮುಖ್ಯ ಮಂತ್ರಿ ಯಡಿಯೂರಪ್ಪ, ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ನಳಿನ್ ಕುಮಾರ್ ಕಟೀಲು, ಡಿಸಿಎಂ ಡಾ| ಸಿ.ಎನ್. ಅಶ್ವತ್ಥ ನಾರಾಯಣ, ಸಚಿವ ಅಶೋಕ್ ಮುಂತಾದವರು ಪಾಲ್ಗೊಂಡರು.