Advertisement

ಬೆಲ್ಜಿಯಂ ವಿ.ವಿ. ವಿದ್ಯಾರ್ಥಿಗಳಿಂದ ಸಂಸ್ಕೃತಿ ವಿನಿಮಯ

11:03 AM Apr 05, 2018 | Team Udayavani |

ಬೆಳ್ತಂಗಡಿ: ಬೆಲ್ಜಿಯಂ ವಿಶ್ವವಿದ್ಯಾನಿಲಯದ ಬಿ.ಎಡ್‌. ವಿದ್ಯಾರ್ಥಿಗಳಾದ ಲೀಸಾ, ಈನಾ ಹಾಗೂ ಇಕ್ರಂ ರಾಜ್ಯದ ವಿವಿಧೆಡೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡುತ್ತಿದ್ದು, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಿ.ಬಿ.ಎಸ್‌.ಇ. ಶಾಲೆ ವಿದ್ಯಾರ್ಥಿಗಳ ಬುದ್ಧಿಮತ್ತೆ ಹೆಚ್ಚಿಸುವ ಪ್ರಾಯೋಗಿಕ ತರಬೇತಿ ನೀಡಿದ್ದಾರೆ.

Advertisement

ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಇವರ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಚಲನಚಿತ್ರ, ರಸಪ್ರಶ್ನೆ, ಬೆಂಕಿಯಿಲ್ಲದೇ ಅಡುಗೆ, ನಾಟಕ, ಹಾಡು, ಆಟಗಳು ಹಾಗೂ ನೃತ್ಯ ಕಲಿಸಲಾಗುತ್ತಿದ್ದು, ಈಗಾಗಲೇ ಬೆಂಗಳೂರು, ಬಿಜಾಪುರ ಶಾಲೆಗಳಲ್ಲಿ ತರಬೇತಿ ನೀಡಿದ್ದಾರೆ. ಶಿಕ್ಷಣ ಮಕ್ಕಳಿಗೆ ಹೊರೆಯಾಗದೆ, ಮೋಜಿನ ವಿಷಯವಾಗಬೇಕು ಎನ್ನುವುದೇ ಉದ್ದೇಶ.

ಯೋಗ ಆಸಕ್ತಿ
ಉಜಿರೆಯ ಸಿ.ಬಿ.ಎಸ್‌.ಇ. ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಗಳಿಗೆ ಮಾ. 22ರಿಂದ 28ರ ವರೆಗೆ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮಾ. 31ರಿಂದ ಎ. 3ರ ವರೆಗೆ ತರಬೇತಿ ನೀಡಿರುವ ಇವರು ಭಾರತೀಯ ಸಂಸ್ಕೃತಿ ಹಾಗೂ ಯೋಗದ ಕುರಿತು ಆಸಕ್ತಿ ಹೊಂದಿದ್ದು, ವಿಜಯಪುರ, ಕೇರಳ, ಮುನ್ನಾರ್‌, ತಿರುವನಂತಪುರ, ಮಂಗಳೂರಿನ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ, ಮಾಹಿತಿ ಪಡೆದಿದ್ದಾರೆ. 

ಭರತನಾಟ್ಯ ಕಲಿಯುವಾಸೆ 
ಭಾರತೀಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರೆ ಬೆಲ್ಜಿಯಂ, ಯುರೋಪ್‌ ಹಾಗೂ ಭಾರತೀಯ ಸಂಸ್ಕೃತಿ ಮಿಶ್ರಣವಾಗುತ್ತದೆ. ಇದರಿಂದ ಸಂಸ್ಕೃತಿ ವಿನಿಮಯ ಸಾಧ್ಯ. ಭರತನಾಟ್ಯವನ್ನು ವಿದ್ಯಾರ್ಥಿಗಳಿಂದ ಕಲಿತು, ಅದನ್ನು ತಮ್ಮ ದೇಶದಲ್ಲೂ ಪಸರಿಸಬೇಕೆಂಬ ಬಯಕೆ ಹೊಂದಿದ್ದಾರೆ. ಭಾರತೀಯ ಶಾಲೆಗಳಲ್ಲಿ ನಡೆಸುವ ಪ್ರಾರ್ಥನೆ, ಸಾಮೂಹಿಕ ಗಾಯನ, ಯೋಗ ಹಾಗೂ ಬಿಸಿಯೂಟವನ್ನು ಬೆಲ್ಜಿಯಂನ ಶಾಲೆಯಲ್ಲೂ ಪ್ರಾರಂಭಿಸಬೇಕು ಎನ್ನುವ ಅಭಿಲಾಷೆ ಹೊಂದಿದ್ದಾರೆ ಬೆಲ್ಜಿಯಂ ವಿದ್ಯಾರ್ಥಿನಿಯರು.

Advertisement

Udayavani is now on Telegram. Click here to join our channel and stay updated with the latest news.

Next