ಆನೇಕಲ್: 75ರ ಸ್ವಾತಂತ್ರ್ಯದಲ್ಲಿ ನಾವಿದ್ದೇವೆ. ಆದರೆ, ಇದರ ಖಷಿಯ ಹಿಂದೆ ಅದೆಷ್ಟೋ ಜನರ ಬಲಿದಾನ ಇದೆ ಎನ್ನುವ ಅರಿವು ಕೂಡ ನಮ್ಮೆಲ್ಲರಿಗೂ ಇರಬೇಕು ಎಂದು ತಹಶೀಲ್ದಾರ್ ದಿನೇಶ್ ಹೇಳಿದರು.
ಪಟ್ಟಣದ ಫುಟ್ಬಾಲ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ಮಹೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಹಿರಿಯರ ಹೋರಾಟ, ತ್ಯಾಗ, ಬಲಿ ದಾನದಿಂದ ನಾವು ನೆಮ್ಮದಿಯಿಂದ ಬದುಕುತ್ತಿದ್ದೇವೆ.
ಧರ್ಮ, ಜಾತಿ, ಯಾವುದೇ ಇರಲಿ. ನಾವೆಲ್ಲರೂ ಸಹೋದರ ರಂತೆ ಬಾಳಿ ಬದುಕುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಶಾಸಕ ಬಿ. ಶಿವಣ್ಣ ಮಾತನಾಡಿ, ಪ್ರತಿದಿನ ಗಡಿಯಲ್ಲಿ ದೇಶ ವನ್ನು ಕಾಯುವ ಸೈನಿಕರು ಹಾಗೂ ರೈತರನ್ನು ನಾವು ದಿನವೂ ನೆನೆಯಬೇಕು. ಆನೇಕಲ್ ಬೆಂಗಳೂರು ನಗರಕ್ಕೆ ಹೊಂದಿಕೊಂಡಿದ್ದು, ಇನ್ನು ಅನೇಕ ಕೆಲಸಗಳು ಆಗಬೇಕಿದೆ. ಮಳೆ, ಅನೇಕ ಆವಾಂತರ ಸೃಷ್ಟಿ ಮಾಡಿದ್ದು, ಅನೇಕ ಕಡೆ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಕೂಡ ಉತ್ತಮ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ಚೆನ್ನಾಗಿ ಓದಿ ಉತ್ತಮ ಸ್ಥಾನಮಾನ ಗಳಿಸಿ: ಸರ್ಜಾಪುರದ ಸರ್ದಾರ್ ವಲ್ಲಬಾಯ್ ಪಟೇಲ್ ಶಾಲೆಯ ವಿದ್ಯಾರ್ಥಿ ಆದಿತ್ಯ 625ಕ್ಕೆ 625 ಅಂಕ ಗಳಿಸಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾನೆ. ಅವನಂತೆ ಇತರ ವಿದ್ಯಾರ್ಥಿಗಳು ಕೂಡ ಚೆನ್ನಾಗಿ ಓದಿ ಉತ್ತಮ ಸ್ಥಾನಮಾನವನ್ನು ಗಳಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎನ್ನುವ ಮನೋಭಾವ ರೂಢಿಸಿಕೊಳ್ಳ ಬೇಕು ಎಂದು ಕಿವಿಮಾತು ಹೇಳಿದರು.
ಪುರಸಭಾ ಅಧ್ಯಕ್ಷ ಎನ್. ಎಸ್ ಪದ್ಮನಾಭ, ಉಪಾಧ್ಯಕ್ಷೆ ಮಾಲಾ ಭಾರ್ಗವ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀನಾರಾಯಣ್, ಆನೇಕಲ್ ಉಪಭಾಗದ ಡಿವೈಎಸ್ಪಿ ಲಕ್ಷ್ಮೀನಾರಾಯಣ, ಕ್ಷೇತ್ರ ಶಿಕ್ಷಣಾಧಿಕಾರಿ ಜಯಶ್ರೀ, ನೌಕರರ ಸಂಘದ ಅಧ್ಯಕ್ಷ ಕೆ. ಶಿವಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ ಚಂದ್ರಶೇಖರ್, ಪುರಸಭಾ ಸದಸ್ಯ ಶ್ರೀಕಾಂತ್, ಏರ್ಟೆಲ್ ಸುರೇಶ್, ಕೃಷ್ಣ, ಕಲಾವತಿ ಮುನಿರಾಜು, ಮುನಾವರ್, ರವಿ, ರಾಜೇಂದ್ರ ಪ್ರಸಾದ್, ಕಸಾಪ ತಾಲೂಕು ಅಧ್ಯಕ್ಷ ಆದೂರು ಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಧನಂಜಯ್ ಇದ್ದರು. ಗಾಯಕ ರಾದ ವಾಸು ,ಆನಂದ್, ರಾಮಾನುಜಂ, ಯಲ್ಲಪ್ಪ,ದ್ಯಾರಾಣಿ, ಸರ್ಕಾರಿ ಪ್ರೌಢಶಾಲೆ ಹುಸ್ಕೂರು ವಿದ್ಯಾರ್ಥಿಗಳಿಂದ ಗೀತಗಾಯನ ನೆರವೇರಿಸಿದರು.