Advertisement

ತಂಪು ವಾತಾವರಣಕ್ಕೆ ಕಬ್ಬನ್‌ ಪಾರ್ಕ್‌ ಮೊರೆ 

01:31 PM Apr 09, 2023 | Team Udayavani |

ಬೆಂಗಳೂರು: ದಿನದಿಂದ ದಿನಕ್ಕೆ ಬಿಸಿಲ ಧಗೆ ಹೆಚ್ಚಾಗು ತ್ತಿದ್ದು, ಕೆಲವರು ನೆರಳು, ತಣ್ಣನೆಯ ವಾತಾವರಣ ಹುಡುಕಿಕೊಂಡು ರೆಸಾರ್ಟ್‌ಗಳಿಗೆ ಹೋದರೆ, ಇನ್ನೂ ಕೆಲವರು ಹೆಚ್ಚಿನ ಮರಗಳಿರುವ ಉದ್ಯಾನದತ್ತ ಮುಖ ಮಾಡಿದ್ದಾರೆ.

Advertisement

ಹೌದು… ಉದ್ಯಾನ ನಗರಿ ಬೆಂಗಳೂರಿನ ಪ್ರಸಿದ್ಧ ಕಬ್ಬನ್‌ ಪಾರ್ಕ್‌ಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡಿದೆ. ಸಾಮಾನ್ಯ ದಿನಗಳಲ್ಲಿ 3-5 ಸಾವಿರ ಜನ ಭೇಟಿ ನೀಡುತ್ತಿದ್ದರೆ, ಬೇಸಿಗೆ ಅವಧಿ ಯಲ್ಲಿ ಸುಮಾರು 8-10 ಸಾವಿರ ಪ್ರವಾಸಿಗಳು ಆಗಮಿಸುತ್ತಿದ್ದಾರೆ. ವಾರಾಂತ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಬರುತ್ತಿದ್ದಾರೆ. ಇತ್ತೀಚೆಗೆ ಶಾಲಾ ಮಕ್ಕಳಿಗೂ ಬೇಸಿಗೆ ರಜೆ ಶುರುವಾಗಿದ್ದು, ಮಕ್ಕಳ ಜತೆಗೆ ಕುಟುಂಬ ಸಮೇತ ಆಗಮಿಸುತ್ತಿದ್ದಾರೆ. ಬ್ಯಾಟ್‌, ಚೆಂಡು, ಶಟಲ್‌ ಕಾಕ್‌, ಕಾಲ್ಚೆಂಡು, ರಿಂಗ್‌, ಸ್ಕೇಟಿಂಗ್‌ ಇನ್ನಿತರೆ ಆಟೋಪ ಕರಣಗಳನ್ನು ತೆಗೆದುಕೊಂಡು ಬಂದರೆ, ಇನ್ನೂ ಕೆಲವರು ಪಿಟೀಲು, ಕೊಳಲು ಪಿಯಾನೋ ದಂತಹ ಸಂಗೀತ ಉಪಕರಣಗಳೊಂದಿಗೆ ಆಗಮಿಸಿ, ಸಂತೋಷದ ಕ್ಷಣಗಳನ್ನು ಕಳೆಯುತ್ತಾರೆ. ಸುಮಾರು 197 ಎಕರೆಯ ವಿಸ್ತೀರ್ಣ ಹೊಂದಿ ರುವ ಕಬ್ಬನ್‌ ಪಾರ್ಕ್‌ನಲ್ಲಿ ಸರಿ ಸುಮಾರು 9,200 ಮರಗಳಿವೆ.

ಇದರಲ್ಲಿ 60 ರಿಂದ 70 ಜಾತಿಯ ಹೂವಿನ ಗಿಡ-ಮರಗಳಿದ್ದು, ಟಬುಬಿಯಾ(ಪಿಂಕ್‌ ಮತ್ತು ಹಳದಿ ಹೂವು ಬಿಡುವ ಮರದ ಜಾತಿ) ಮರಗಳೂ ಇಲ್ಲಿನ ವಿಶೇಷ. ಇದೀಗ ಸ್ಮಾರ್ಟ್‌ಸಿಟಿ ಯೋಜನೆಯಡಿ ಕಬ್ಬನ್‌ ಉದ್ಯಾನವು ಮತ್ತಷ್ಟು ಅಭಿವೃದ್ಧಿಗೊಂಡಿದ್ದು, ವಾಯು ವಿಹಾರ ಮಾಡಲು ಸುಸಜ್ಜಿತವಾದ ಪಾದಚಾರಿ ಮಾರ್ಗ, ಜಾಗಿಂಗ್‌ಗಾಗಿ ಪ್ರತ್ಯೇಕ ಪಥ, ಪ್ರವಾ ಸಿಗರು ಕುಳಿತುಕೊಳ್ಳಲು ಕಲ್ಲು ಹಾಗೂ ಮರದ ಕಟ್ಟಿಗೆಯಿಂದ ತಯಾರಿಸಿದ ಬೆಂಚ್‌ಗಳು, ಸುರಕ್ಷತೆಗಾಗಿ ಹೆಚ್ಚಿನ ಸಿಸಿ ಕ್ಯಾಮೆರಾಗಳ ಅಳವಡಿಕೆ, ಬೀದಿ ದೀಪ, ಕಸದ ಡಬ್ಬಿ, ಕುಡಿಯುವ ನೀರು ಹಾಗೂ ಶೌಚಾಲಯ, ದ್ವಿಚಕ್ರ ಮತ್ತು ಕಾರುಗಳ ನಿಲುಗಡೆಗೆ ಪಾರ್ಕಿಂಗ್‌ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿ ಕಲ್ಪಿಸಲಾಗಿದೆ.

ಪಾರ್ಕ್‌ನಲ್ಲಿ 100 ಸೂಚನಾ ಫ‌ಲಕ: ಕಬ್ಬನ್‌ ಪಾರ್ಕ್‌ಗೆ ನಿತ್ಯ ಸಹಸ್ರಾರು ಜನ ಆಗಮಿಸುತ್ತಾರೆ. ಅದರಲ್ಲೂ ಯುವ ಜನತೆ, ಪ್ರೇಮಿಗಳು, ನವಜೋಡಿ ಗಳು, ಸಾಕು ನಾಯಿಗಳೊಂದಿಗೆ ವಾಯು ವಿಹಾರಿಗಳು ಹೆಚ್ಚಾಗಿ ಆಗಮಿಸುತ್ತಾರೆ. ಆದ್ದರಿಂದ ಅವರಿಗೆಲ್ಲಾ ಮಾಹಿತಿ ನೀಡಲು ಉದ್ಯಾನದಾದ್ಯಂತ 100 ಸೂಚನಾ ಫ‌ಲಕಗಳನ್ನು ಅಳವಡಿಸಲಾಗಿದೆ. ಅದರಲ್ಲಿ ಉದ್ಯಾನದ ಮಾರ್ಗಸೂಚಿ ಸೇರಿದಂತೆ ಪಾರ್ಕ್‌ನಲ್ಲಿ ನಡೆದುಕೊಳ್ಳಬಾರದಂತಹ ಕೆಲವು ವಿಶೇಷ ಸೂಚನೆಗಳನ್ನು ತಿಳಿಸಲಾಗಿದೆ. ಮುಖ್ಯವಾಗಿ ಹೂ, ಎಲೆ, ಗಿಡ ಕೀಳಬಾರದು, ಎಲ್ಲೆಂದಲ್ಲೆ ಕಸ ಬಿಸಾಡಬಾರದು, ಪಾರ್ಕ್‌ ಒಳಗೆ ಊಟ ತರಬಾರದು, ನಾಯಿಗಳಿಗೆ ಕಡ್ಡಾಯವಾಗಿ ಬೆಲ್ಟ್ ಹಾಕಿರಬೇಕು ಒಳಗೊಂಡಂತೆ ಹಲವು ಸೂಚನೆಗಳನ್ನು ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬಿಸಿಲು ಹೆಚ್ಚಾಗುತ್ತಿದ್ದರಿಂದ ಪೊದೆ ಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಪ್ರೇಮಿಗಳನ್ನು ಒಳಗೊಂಡಂತೆ ಪ್ರವಾಸಿಗರಿಗೆ ಕಾವಲುಗಾರರು ಹ್ಯಾಂಡ್‌ ಸ್ಪೀಕರ್‌ಗಳಿಂದ ಎಚ್ಚರಿಕೆ ನೀಡಲಾಗುತ್ತದೆ. ನಾಲ್ಕು ಜನ ಮೇಲ್ವಿಚಾರಕರು ಸೇರಿದಂತೆ ಒಟ್ಟು 22 ಜನ ಸಿಬ್ಬಂದಿ ಇದ್ದಾರೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಬೇಸಿಗೆಯಲ್ಲಿ ಹೆಚ್ಚಿನ ಜನ ಆಗಮಿಸುತ್ತಿದ್ದು 2 ಕುಡಿಯುವ ನೀರಿನ ಘಟಕ, ಪಾರ್ಕಿಂಗ್‌ ಸೇರಿದಂತೆ ಅಚ್ಚುಕಟ್ಟಾದ ಸುರಕ್ಷತೆಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಬೇಸಿಗೆಯಲ್ಲಿ ಹೆಚ್ಚು ಎಲೆ ಉದುರುವುದರಿಂದ ಸ್ವತ್ಛತಾ ಸಿಬ್ಬಂದಿಯನ್ನೂ ಹೆಚ್ಚಿಸಲಾಗಿದೆ. ಜತೆಗೆ ಕುಟುಂಬ ಸಮೇತ ಹೆಚ್ಚು ಬರುವುದರಿಂದ, ಪ್ರವಾಸಿಗರು(ಯುವಜನತೆ) ತಮ್ಮ ನಡವಳಿಕೆಯಲ್ಲಿ ಎಚ್ಚರದಿಂದಿರಬೇಕು. -ರಾಜೇಂದ್ರ ಕುಮಾರ್‌ ಕಟಾರಿಯಾ, ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ

Advertisement

ಪಕ್ಷಿಗಳಿಗೆ ನೀರಿನ ಬಟ್ಟಲು ವ್ಯವಸ್ಥೆ ಬೇಸಿಗೆ ಕಾಲ ಆಗಮಿಸುತ್ತಿದ್ದಂತೆ ಕೆರೆ, ಕೊಳ, ಬಾವಿ ಮುಂತಾದ ನೀರಿನ ಮೂಲಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ ಎಲ್ಲಾ ಜೀವಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗುವುದು ಸರ್ವೇ ಸಾಮಾನ್ಯ. ಅದರಂತೆ ಪ್ರಾಣಿ ಪಕ್ಷಿಗಳು ನೀರಿಗಾಗಿ ಪರದಾಡುತ್ತವೆ. ಈ ಸಮಸ್ಯೆ ಹೋಗಲಾಡಿಸಲು ಕಬ್ಬನ್‌ ಪಾರ್ಕ್‌ನಲ್ಲಿ ತಾವರೆ ಕೊಳ ಸೇರಿದಂತೆ ಅನೇಕ ನೀರಿನ ಕಾರಂಜಿ ಕೊಳಗಳಿದ್ದರೂ, ಸುಮಾರು 80 ರಿಂದ 100 ಕಡೆಗಳಲ್ಲಿ ಪಕ್ಷಿಗಳಿಗಾಗಿ ನೀರಿನ ಬಟ್ಟಲುಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಅದರಲ್ಲಿ ನಿತ್ಯ ನೀರು ಹಾಕಲಾಗುತ್ತದೆ. ಇದರಿಂದ ಬಹುತೇಕ ಪಕ್ಷಿಗಳು ನೀರಿನ ದಾಹವನ್ನು ನೀಗಿಸಿಕೊಳ್ಳುತ್ತವೆ ಎಂದು ತೋಟಗಾರಿಕೆ ಇಲಾಖೆ(ಕಬ್ಬನ್‌ಪಾರ್ಕ್‌) ಉಪನಿರ್ದೇಶಕ ಎಸ್‌.ಟಿ. ಬಾಲಕೃಷ್ಣ ತಿಳಿಸುತ್ತಾರೆ.

-ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next