Advertisement

ಲಕ್ನೋಗೆ ಒಲಿಯಿತು ಚೇಸಿಂಗ್‌ ಲಕ್‌

11:58 PM Mar 31, 2022 | Team Udayavani |

ಮುಂಬಯಿ: ನೂತನ ತಂಡವಾದ ಲಕ್ನೋ ಸೂಪರ್‌ ಜೈಂಟ್ಸ್‌ಗೆ ಮೊದಲ ಐಪಿಎಲ್‌ ಗೆಲುವು ಒಲಿದಿದೆ. ಗುರುವಾರದ ಬೃಹತ್‌ ಮೊತ್ತದ ಮೇಲಾಟದಲ್ಲಿ ಕೆ.ಎಲ್‌. ರಾಹುಲ್‌ ಪಡೆ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ಗೆ 6 ವಿಕೆಟ್‌ಗಳ ಸೋಲುಣಿಸಿ ಸಂಭ್ರಮಿಸಿದೆ.

Advertisement

ಬ್ರೆಬೋರ್ನ್ ಸ್ಟೇಡಿಯಂನ ಅಪ್ಪಟ ಬ್ಯಾಟಿಂಗ್‌ ಟ್ರಾÂಕ್‌ ಮೇಲೆ ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈ7 ವಿಕೆಟಿಗೆ 210 ರನ್‌ ರಾಶಿ ಹಾಕಿತು. ಆದರೂ ಜಡೇಜ ಪಡೆಗೆ ಇದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಲಕ್ನೋ 19.3 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ 211 ರನ್‌ ಬಾರಿಸಿ ಜಯಭೇರಿ ಮೊಳಗಿ ಸಿತು. ಚೆನ್ನೈ ಸತತ 2ನೇ ಸೋಲನುಭವಿ ಸಿತು. ಇದು ಐಪಿಎಲ್‌ ಇತಿಹಾಸದ 4ನೇ ಅತ್ಯಧಿಕ ಮೊತ್ತದ ಯಶಸ್ವಿ ಚೇಸಿಂಗ್‌ ಆಗಿದೆ.

ಲಕ್ನೋಗೆ ಕ್ವಿಂಟನ್‌ ಡಿ ಕಾಕ್‌ (61) ಮತ್ತು ನಾಯಕ ಕೆ.ಎಲ್‌. ರಾಹುಲ್‌ (40) ಮಿಂಚಿನ ಆರಂಭ ಒದಗಿಸಿದರು. 10.2 ಓವರ್‌ಗಳಲ್ಲಿ 99 ರನ್‌ ಪೇರಿಸಿದರು. ಆಗಲೇ ಈ ಪಂದ್ಯದಲ್ಲಿ ಲಕ್ನೋಗೆ ಗೆಲುವಿನ ಅದೃಷ್ಟ ಇರುವುದು ಖಾತ್ರಿಯಾಯಿತು.

ಮನೀಷ್‌ ಪಾಂಡೆ ಬೇಗನೇ ಔಟಾದರೂ ಎವಿನ್‌ ಲೆವಿಸ್‌ ಕೇವಲ 23 ಎಸೆತಗಳಿಂದ ಅಜೇಯ 55 ರನ್‌ (6 ಬೌಂಡರಿ, 3 ಸಿಕ್ಸರ್‌) ಬಾರಿಸಿ ಲಕ್ನೋವನ್ನು ದಡ ಮುಟ್ಟಿಸುವಲ್ಲಿ ಯಶಸ್ವಿಯಾದರು. ಇವರೊಂದಿಗೆ ಕಳೆದ ಪಂದ್ಯದ ಹೀರೋ ಆಯುಷ್‌ ಬದೋನಿ 9 ಎಸೆತಗಳಿಂದ 19 ರನ್‌ ಗಳಿಸಿ ಅಜೇಯರಾಗಿದ್ದರು.

ಉತ್ತಪ್ಪ ಸ್ಫೋಟಕ ಆರಂಭ : 

Advertisement

ಇದಕ್ಕೂ ಮುನ್ನ ರಾಬಿನ್‌ ಉತ್ತಪ್ಪ ಚೆನ್ನೈಗೆ ಸ್ಫೋಟಕ ಆರಂಭವಿತ್ತರು. ಆವೇಶ್‌ ಖಾನ್‌ ಅವರ ಪ್ರಥಮ ಓವರ್‌ನ ಮೊದಲೆರಡು ಎಸೆತಗಳನ್ನೇ ಬೌಂಡರಿಗೆ ಬೀಸಿದರು. ಅಂತಿಮ ಎಸೆತದಲ್ಲಿ ಬೈ ರೂಪದಲ್ಲಿ ಮತ್ತೂಂದು ಫೋರ್‌ ಲಭಿಸಿತು. ಆ ಓವರ್‌ನಲ್ಲಿ ಒಟ್ಟು 14 ರನ್‌ ಹರಿದು ಬಂತು. ದ್ವಿತೀಯ ಓವರ್‌ ಎಸೆಯಲು ಬಂದ ದುಷ್ಮಂತ ಚಮೀರ ಅವರಿಗೂ ಉತ್ತಪ್ಪ ರಿಯಾಯಿತಿ ತೋರಲಿಲ್ಲ. ಫೋರ್‌ ಜತೆಗೆ ಸಿಕ್ಸರ್‌ ಕೂಡ ಬಿತ್ತು. 2 ಓವರ್‌ಗಳಲ್ಲಿ 26 ರನ್‌ ಹರಿದು ಬಂತು.

3ನೇ ಓವರ್‌ ಎಸೆಯಲು ಆ್ಯಂಡ್ರೂé ಬಂದರು. ಒಂದೇ ರನ್‌ ಮಾಡಿದ್ದ ಋತುರಾಜ್‌ ಗಾಯಕ್ವಾಡ್‌ ರನೌಟ್‌ ಆಗಿ ನಿರ್ಗಮಿಸಿದರು. ಮುಂದಿನೆರಡು ಓವರ್‌ಗಳಲ್ಲಿ ಆವೇಶ್‌ ಮತ್ತು ಟೈ ಚೆನ್ನಾಗಿ ದಂಡಿಸಿಕೊಂಡರು. ಉತ್ತಪ್ಪ-ಮೊಯಿನ್‌ ಅಲಿ ಸೇರಿಕೊಂಡು 29 ರನ್‌ ಸೂರೆಗೈದರು. ಕೃಣಾಲ್‌ ಪಾಂಡ್ಯ ಪಾಲಾದ 6ನೇ ಓವರ್‌ ಕೂಡ ದುಬಾರಿಯಾಯಿತು. ಇದರಲ್ಲಿ 16 ರನ್‌ ಸೋರಿ ಹೋಯಿತು.

ಪವರ್‌ ಪ್ಲೇ ಮುಕ್ತಾಯಕ್ಕೆ ಚೆನ್ನೈ ಒಂದಕ್ಕೆ 73 ರನ್‌ ಗಳಿಸಿ ದೊಡ್ಡ ಮೊತ್ತದ ಸೂಚನೆ ನೀಡಿತು. ಇದು ಪವರ್‌ ಪ್ಲೇಯಲ್ಲಿ ಚೆನ್ನೈ ಪೇರಿಸಿದ 4ನೇ ಬೃಹತ್‌ ಮೊತ್ತ. 2014ರಲ್ಲಿ ಪಂಜಾಬ್‌ ವಿರುದ್ಧ 2ಕ್ಕೆ 100 ರನ್‌ ಗಳಿಸಿದ್ದು ದಾಖಲೆ.

ಬ್ರೇಕ್‌ ಒದಗಿಸಿದ ಬಿಷ್ಣೋಯಿ : 

ರಾಬಿನ್‌ ಉತ್ತಪ್ಪ ಆಟಕ್ಕೆ ಬ್ರೇಕ್‌ ಹಾಕಲು ಸ್ಪಿನ್ನರ್‌ ರವಿ ಬಿಷ್ಣೋಯಿ ಬರಬೇಕಾಯಿತು. 25 ಎಸೆತಗಳಿಂದ ಅರ್ಧ ಶತಕ ಪೂರೈಸಿ ಮುನ್ನುಗ್ಗುತ್ತಿದ್ದ ಉತ್ತಪ್ಪ ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು. ಒಟ್ಟು 27 ಎಸೆತ ಎದುರಿಸಿದ ಉತ್ತಪ್ಪ 8 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಸಿ ಮೆರೆದರು.

ಅನಂತರ ಕ್ರೀಸ್‌ ಇಳಿದ ಶಿವಂ ದುಬೆ ಕೂಡ ಬೀಸುವಲ್ಲಿ ಹಿಂದುಳಿಯಲಿಲ್ಲ. ಚಮೀರ ಅವರ ಒಂದೇ ಓವರ್‌ನಲ್ಲಿ 3 ಬೌಂಡರಿ ಚಚ್ಚಿದರು. 9.1 ಓವರ್‌ಗಳಲ್ಲೇ ಚೆನ್ನೈ ನೂರರ ಗಡಿ ಮುಟ್ಟಿತು. ಮೊದಲ 10 ಓವರ್‌ಗಳಲ್ಲಿ ಚೆನ್ನೈ 18 ಬೌಂಡರಿ ಸಿಡಿಸಿ ಅಬ್ಬರಿಸಿತು.

ಅರ್ಧ ಹಾದಿ ಕ್ರಮಿಸಿದ ಸ್ವಲ್ಪ ಹೊತ್ತಿನಲ್ಲೇ ಮೊಯಿನ್‌ ಅಲಿ ವಿಕೆಟ್‌ ಉರುಳಿತು. ಆವೇಶ್‌ ಖಾನ್‌ ವಿಕೆಟ್‌ ಟೇಕರ್‌. 22 ಎಸೆತ ಎದುರಿಸಿದ ಮೊಯಿನ್‌ 4 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 35 ರನ್‌ ಹೊಡೆದರು.

ಡೆತ್‌ ಓವರ್‌ಗಳಲ್ಲಿ ಬಿರುಸಿನ ಆಟ : 

ಶಿವಂ ದುಬೆ-ಅಂಬಾಟಿ ರಾಯುಡು ಜೋಡಿ ಹೊಡಿಬಡಿ ಆಟವನ್ನು ಮುಂದುವರಿಸಿತು. 15 ಓವರ್‌ ಮುಕ್ತಾಯಕ್ಕೆ ತಂಡದ ಮೊತ್ತ 4 ವಿಕೆಟಿಗೆ 147ಕ್ಕೆ ಏರಿತ್ತು. ಡೆತ್‌ ಓವರ್‌ಗಳಲ್ಲಿ ಚೆನ್ನೈ ಬ್ಯಾಟಿಂಗ್‌ ಇನ್ನಷ್ಟು ಬಿರುಸುಗೊಂಡಿತು. ಕೊನೆಯ 5 ಓವರ್‌ಗಳಲ್ಲಿ 63 ರನ್‌ ಒಟ್ಟುಗೂಡಿತು.

ಈ ಅವಧಿಯಲ್ಲಿ ಲಕ್ನೋದ 5 ಮಂದಿ ದಾಳಿಗಿಳಿದರು. ಎಲ್ಲರೂ ಚೆನ್ನಾಗಿ ದಂಡಿಸಿಕೊಂಡರು. ಶಿವಂ ದುಬೆ ಒಂದು ರನ್ನಿನಿಂದ ಅರ್ಧ ಶತಕ ತಪ್ಪಿಸಿಕೊಂಡರು. 30 ಎಸೆತ ನಿಭಾಯಿಸಿದ ಅವರು 5 ಬೌಂಡರಿ, 2 ಸಿಕ್ಸರ್‌ ಸಿಡಿಸಿದರು. ಅಂಬಾಟಿ ರಾಯುಡು ಗಳಿಕೆ 20 ಎಸೆತಗಳಿಂದ 27 ರನ್‌ (2 ಬೌಂಡರಿ, 2 ಸಿಕ್ಸರ್‌). ನಾಯಕ ರವೀಂದ್ರ ಜಡೇಜ ಮತ್ತು ಮಾಜಿ ನಾಯಕ ಧೋನಿ ಮಿಂಚಿನ ಆಟವಾಡಿದರು. ಜಡೇಜ 9 ಎಸೆತಗಳಿಂದ 17 ರನ್‌, ಧೋನಿ ಕೇವಲ 6 ಎಸೆತಗಳಿಂದ ಅಜೇಯ 16 ರನ್‌ ಹೊಡೆದರು (2 ಬೌಂಡರಿ, 1 ಸಿಕ್ಸರ್‌).

 

Advertisement

Udayavani is now on Telegram. Click here to join our channel and stay updated with the latest news.

Next