ಮೈಸೂರು: ನಗರದ ಸಿಎಸ್‌ಐಆರ್- ಸಿಎಫ್ಟಿಆರ್‌ಐ ಸಂಸ್ಥೆಯು ಜೆಎಸ್‌ಎಸ್ ವಿಜ್ಞಾನ ಹಾಗೂ ತಂತ್ರಜ್ಞಾನ ವಿಶ್ವವಿದ್ಯಾಲಯದೊಂದಿಗೆ ಸಂಶೋಧನೆ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಂಡಿದೆ.
ಸುತ್ತೂರು ಮಠಾಧೀಶರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಕುಲಪತಿ ಡಾ.ಬಿ.ಜಿ. ಸಂಗಮೇಶ್ವರ ಮತ್ತು ಸಿಎಫ್ಟಿಆರ್‌ಐ ನಿರ್ದೇಶಕ ಡಾ. ರಾಘವೇಂದ್ರರಾವ್ ಅವರು ಒಪ್ಪಂದಕ್ಕೆ ಸಹಿ ಹಾಕಿ, ಒಡಂಬಡಿಕೆಗಳನ್ನು ವಿನಿಮಯ ಮಾಡಿಕೊಂಡರು.
ಆರೋಗ್ಯ ರಕ್ಷಣೆಗೆ ಪೂರಕವಾದ ಆಹಾರ ತಯಾರಿಕೆ, ನ್ಯೂಟ್ರಸ್ಪುಟಿಕಲ್ ತಯಾರಿಕೆ ಇವುಗಳ ಮೇಲೆ ಮಿಷನ್ ಲರ್ನಿಂಗ್ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್‌ನ ಪ್ರಭಾವ- ಈ ವಿಷಯಗಳ ಮೇಲೆ ಸಂಶೋಧನೆ ಮಾಡಲು ಹಾಗೂ ಜಂಟಿ ಕಾರ್ಯ ಯೋಜನೆಗಳು, ಕಾರ್ಯಾಗಾರಗಳು, ಅಧ್ಯಾಪಕರು ಬೋಧನಾಭಿವೃದ್ಧಿ ಕಾರ್ಯಕ್ರಮಗಳ ಆಯೋಜನೆಗೆ ಈ ಒಡಂಬಡಿಕೆ ನೆರವಾಗಲಿದೆ.
ಜಾಗತಿಕ ಸ್ಥಾನ: ಈ ಸಂದರ್ಭದಲ್ಲಿ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಕುಲಪತಿ ಡಾ.ಬಿ.ಜಿ. ಸಂಗಮೇಶ್ವರ ಮಾತನಾಡಿ, ಆವಿಷ್ಕಾರ ಮತ್ತು ಸಂಶೋಧನಾ ಪ್ರಗತಿ ಈ ಒಡಂಬಡಿಕೆಯಿಂದ ಸಾಧ್ಯ. ಎಐಸಿಟಿ ಮತ್ತು ಯುಜಿಸಿ ಸಲಹೆಯಂತೆ ಭಾರತದ ವಿಶ್ವವಿದ್ಯಾಲಯಗಳು ಸಂಶೋಧನಾ ಕೇಂದ್ರಗಳಾಗಿ ಮಾರ್ಪಾಡಾಗುವುದರಿಂದ ಜಾಗತಿಕ ಮಟ್ಟದಲ್ಲಿ ಸ್ಥಾನ ಗಳಿಸಲು ಸಹಕಾರಿ ಆಗಲಿದೆ ಎಂದು ತಿಳಿಸಿದರು.
ಲಾಭದಾಯಕ: ಸಿಎಫ್ಟಿಆರ್‌ಐ ನಿರ್ದೇಶಕ ಡಾ. ರಾಘವೇಂದ್ರರಾವ್ ಮಾತನಾಡಿ, ಸಿಎಫ್ಟಿಆರ್‌ಐ ಮತ್ತು ಜೆಎಸ್‌ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿವಿ ಒಡಂಬಡಿಕೆಯಿಂದ ಉತ್ತಮ ಸಂಶೋಧನಾ ಅವಕಾಶಗಳಿಗೆ ನೆರವಾಗಲಿದೆ. ಈ ಸಹಯೋಗವು ನೂತನ ಕೈಗಾರಿಕೆಗಳ ಅಗತ್ಯತೆ ಮತ್ತು ಸಮಾಜಕ್ಕೆ ಲಾಭದಾಯಕವಾಗಿರುತ್ತದೆ ಎಂದು ಹೇಳಿದರು.
ಈ ವೇಳೆ ಸಿಎಫ್ಟಿಆರ್‌ಐ ವಿಜ್ಞಾನಿಗಳಾದ ಡಾ. ಕೇಶವಪ್ರಕಾಶ್, ಡಾ. ಚೌಹಾನ್, ಡಾ. ಸತ್ಯೇಂದ್ರ ರಾವ್, ಮಣಿಲಾಲ್, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ಜೆಎಸ್‌ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿವಿ ಕುಲಸಚಿವ ಡಾ.ಕೆ.ಎಸ್.ಲೋಕೇಶ್, ಮಲ್ಲಿಕಾರ್ಜುನ ಆರಾಧ್ಯ, ಎಸ್‌ಜೆಸಿಇ ಪ್ರಾಂಶುಪಾಲ ಡಾ.ಟಿ.ಎನ್. ನಾಗಭೂಷಣ್, ಡಾ.ಪಿ. ನಾಗೇಶ್, ಡಾ.ಎನ್. ಹರಪ್ರಸಾದ್, ಡಾ.ಎಂ. ಪ್ರದೀಪ್ ಇತರರು ಉಪಸ್ಥಿತರಿದ್ದರು.