Advertisement

ಸಿ.ಆರ್‌.ಝಡ್‌. ವಲಯ ಬದಲಾಯಿಸಲು ನಿರ್ಣಯ

02:06 PM Nov 01, 2017 | Team Udayavani |

ಮೂಲ್ಕಿ: ನಗರ ಪಂಚಾಯತ್‌ ವ್ಯಾಪ್ತಿಯ ಸಿ.ಆರ್‌.ಝಡ್‌. ವಲಯ 3ರ ವ್ಯಾಪ್ತಿಗೆ ಬರುವ ಪ್ರದೇಶಗಳನ್ನು (ಕರಾವಳಿ
ನಿಯಂತ್ರಣ ವಲಯ)ಸಿ.ಆರ್‌.ಝಡ್‌. ವಲಯ ಎರಡರ ವ್ಯಾಪ್ತಿಗೆ ಪರಿವರ್ತಿಸಿ ಆದೇಶಿಸುವಂತೆ ಸರಕಾರವನ್ನು
ಆಗ್ರಹಿಸಿ ನಗರ ಪಂಚಾಯತ್‌ನ ಮಾಸಿಕ ಸಭೆಯು ಒಕ್ಕೊರಲಿನಿಂದ ನಿರ್ಣಯ ಅಂಗೀಕರಿಸಿತು.

Advertisement

ಅಧ್ಯಕ್ಷ ಸುನೀಲ್‌ ಆಳ್ವ ಅಧ್ಯಕ್ಷತೆಯಲ್ಲಿ ಮಂಗಳವಾರ ಮಾಸಿಕ ಸಭೆ ಜರಗಿತು. ಕಾರ್ನಾಡು ಸದಾಶಿವ ರಾವ್‌ ನಗರದ ಬಾರ್‌ಗಳಿಗೆ ಸಂಬಂಧಿಸಿ ಒಂದು ತಿಂಗಳ ಒಳಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ತೀರ್ಮಾನಿಸಲಾಯಿತು. 

ಬಾರ್‌ಗಳಿಗೆ ನೀಡಿದ ಎನ್‌. ಒ.ಸಿ.ಯನ್ನು ಹಿಂಪಡೆಯಬೇಕು ಎಂದು ಸುಮಾರು ಒಂದು ತಾಸು ಕಾಲ ಸದಸ್ಯರು ಚರ್ಚೆ ನಡೆಸಿದರು. ಸದಸ್ಯರಾದ ವಿಮಲಾ ಪೂಜಾರಿ ಹಾಗೂ ಕಲಾವತಿ ಕಲ್ಲವ್ವ ಅವರು ಸಾರ್ವಜನಿಕರಿಗೆ ದರೆಯಾಗುವ ಬಾರ್‌ಗಳನ್ನು ತತ್‌ಕ್ಷಣ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

ಕಾನೂನು ತಜ್ಞರ ಸಲಹೆ
ಕಳೆದ ಸಭೆಯಲ್ಲಿ ಬಾರ್‌ ವಿಷಯವನ್ನು ಮುಂದಿಟ್ಟು ಸಭಾತ್ಯಾಗ ಮಾಡಿದ್ದ ವಿಪಕ್ಷ ಸದಸ್ಯರು ಮಂಗಳವಾರ ಮತ್ತೆ
ಬಾರ್‌ ತಕರಾರು ಆರಂಭಿಸಿದಾಗ ಪ್ರತಿಕ್ರಿಯಿಸಿದ ಅಧ್ಯಕ್ಷರು, ಬಾರ್‌ನಿಂದ ಜನರಿಗೆ ತೊಂದರೆ ಆಗುವುದಾದರೆ ಉಳಿಸಿಕೊಳ್ಳುವ ಆಸಕ್ತಿ ಮತ್ತು ಉದ್ದೇಶ ನಮಗಿಲ್ಲ. ಕೊಟ್ಟಿರುವ ನಿರಾಕ್ಷೇಪಣ ಪತ್ರವನ್ನು ಹಿಂಪಡೆಯಲು ಸಾಧ್ಯವೇ ಎಂದು ಕಾನೂನು ತಜ್ಞರೊಂದಿಗೆ ಚರ್ಚಿಸಲಾಗುವುದು ಎಂದರು.

ಕಸ ವಿಲೇವಾರಿ ಬಗೆಗಿನ ಬಿ.ಎಂ. ಆಸೀಫ್‌ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು, ಗುತ್ತಿಗೆದಾರರು ಬದಲಾಗಲಿದ್ದಾರೆ. ಆಗ ಎಲ್ಲವೂ ಸರಿಯಾಗಲಿದೆ ಎಂದರು.

Advertisement

ಐದು ಬಸ್‌ ನಿಲ್ದಾಣ
ಮುಂದಿನ ಸಭೆಯೊಳಗೆ ನಗರ ಪಂಚಾಯತ್‌ ವ್ಯಾಪ್ತಿಯ ಹೆದ್ದಾರಿಯ ವಿವಿಧೆಡೆ ಕನಿಷ್ಠ ಐದು ಬಸ್ಸು ನಿಲ್ದಾಣಗಳನ್ನು ನಿರ್ಮಿಸಲು ಕ್ರಮ ಜರಗಿಸಲು ಅಧ್ಯಕ್ಷರು ಸೂಚನೆ ಇತ್ತರು. ನನ್ನ ವಾರ್ಡಿನಲ್ಲಿ ಮಂಜೂರಾಗಿರುವ ಕೆಲಸವಾಗದೆ ಜನರು ದೂರುತ್ತಿದ್ದಾರೆ ಎಂಬ ಸದಸ್ಯೆ ಕಲಾವತಿ ಆಕ್ಷೇಪಕ್ಕೆ ಸ್ಪಂದಿಸಿ, ತತ್‌ಕ್ಷಣ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಯಿತು.

ಮಡಿವಾಳ ಕೆರೆ
ಗಾಂಧಿ ಮೈದಾನ ಸಮೀಪದ ಮಡಿವಾಳ ಕೆರೆ ರಸ್ತೆಗೆ ಮಡಿವಾಳ ಕೆರೆ ರಸ್ತೆ ನಾಮಕರಣ ಮಾಡಲು ಸಭೆ ತೀರ್ಮಾನಿಸಿತು.

ಆಧಾರ್‌ ಕೇಂದ್ರ ತೆರೆಯಿರಿ
ತಹಶೀಲ್ದಾರ್‌ ಅವರು ನಗರ ಪಂಚಾಯತ್‌ನಲ್ಲಿ ಆಧಾರ್‌ ಕೇಂದ್ರ ತೆರೆಯುವಲ್ಲಿ ಅವಕಾಶ ಕಲ್ಪಿಸುವಂತೆ ತಿಳಿಸಿದ್ದರು. ಆದರೆ ಆಧಾರ್‌ ಕೇಂದ್ರ ಇನ್ನೂ ತೆರೆದಿಲ್ಲ. ಆದಷ್ಟು ಬೇಗ ಕೇಂದ್ರವನ್ನು ತೆರೆಯುವಂತೆ ಆಗ್ರಹ ಕೇಳಿ ಬಂತು.

ಸರಕಾರ ನಾಮ ನಿರ್ದೇಶನ ಮಾಡಿರುವ ಸದಸ್ಯರು ನಗರ ಪಂಚಾಯತ್‌ಗೆ ಆಗಬೇಕಾದ ಇಲಾಖೆಗಳ ಕೆಲಸಗಳನ್ನು ತುರ್ತಾಗಿ ನಡೆಸಲು ಸಹಕರಿಸಿದರೆ ಅನುಕೂಲವಾಗುತ್ತದೆ ಎಂದು ಅಧ್ಯಕ್ಷರು ಹೇಳಿದರು.

ಕಾರ್ನಾಡು ಕೈಗಾರಿಕ ಪ್ರದೇಶದ ದಾರಿ ದೀಪದ ವ್ಯವಸ್ಥೆಗೆ 50 ಲ.ರೂ. ಮಿಕ್ಕಿ ವೆಚ್ಚ ಮಾಡಿದ್ದರೂ ನಿರ್ವಹಣೆ ಕೊರತೆಯಿಂದ ಜನರು ಕತ್ತಲಲ್ಲಿ ನಡೆದಾಡುವಂತಾಗಿದ್ದು, ಕೂಡಲೇ ಸರಿಪಡಿಸಬೇಕು ಎಂಬ ಆಗ್ರಹ ಕೇಳಿ ಬಂತು. ಕಾರ್ನಾಡಿನ ರಿಕ್ಷಾ ಪಾರ್ಕಿನಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣವಾಗುವ ಮೇಲ್ಛಾವಣಿಗೆ ಒಪ್ಪಿಗೆ ನೀಡಲಾಯಿತು.

ಮುಖ್ಯಾಧಿಕಾರಿ ಇಂದೂ ಎಂ.ಸ್ವಾಗತಿಸಿ, ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್‌ ವಂದಿಸಿದರು. ನಗರ ಯೋಜನೆ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷರಾಜ್‌ ಶೆಟ್ಟಿ ಜಿ.ಎಂ. ಉಪಸ್ಥಿತರಿದ್ದರು. ಸದಸ್ಯರಾದ ಪುತ್ತು ಬಾವಾ, ಯೋಗೀಶ್‌ ಕೋಟ್ಯಾನ್‌ , ಸಂದೀಪ್‌ ಕೋಟ್ಯಾನ್‌, ಅಶೋಕ್‌ ಪೂಜಾರ, ಹಸನ್‌ ಬಶೀರ್‌ ಕುಳಾಯಿ, ಶೈಲೇಶ್‌ ಕುಮಾರ್‌, ವಸಂತಿ ಭಂಡಾರಿ, ವೀಣಾ ಶೆಟ್ಟಿ, ಕುಸುಮಾ ಕೋಟ್ಯಾನ್‌, ಜುಬೇದಾ ಇಬ್ರಾಹಿಂ, ಉಮೇಶ್‌ ಮಾನಂಪಾಡಿ, ಪುರುಷೋತ್ತಮ ರಾವ್‌, ಮೀನಾಕ್ಷಿ ಬಂಗೇರ, ಶಂಕರವ್ವ ಮುಂತಾದವರಿದ್ದರು.

ಬಸ್‌ ನಿಲ್ದಾಣ ಏನಾಯಿತು
ಬಸ್ಸು ನಿಲ್ದಾಣಕ್ಕಾಗಿ 3 ಕೋ. ರೂ. ಮೊತ್ತವನ್ನು ಸರಕಾರ ನಗರ ಪಂಚಾಯತ್‌ಗೆ ಒದಗಿಸಿದ್ದರೂ ಅದರ ಸ್ಥಿತಿಗತಿ ಏನಾಗಿದೆ ಎಂಬ ಸದಸ್ಯ ಬಿ.ಎಂ. ಆಸೀಫ್‌ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು, ಪ್ರಸ್ತಾವನೆ ಜಿಲ್ಲಾಧಿಕಾರಿಗಳ ಅಂಗಳದಲ್ಲಿದೆ. ಗುರುತಿಸಲಾದ ನಿವೇಶನ ಖರೀದಿಗೆ ಕಾನೂನಿನ ತಾಂತ್ರಿಕ ತೊಡಕಿದೆ ಎಂದರು. ಆಗ ಭೂ
ಸ್ವಾಧೀನ ನಿಯಮದಲ್ಲಿ ಜಾಗ ವಶಪಡಿಸುವುದು ಉತ್ತಮ ಎಂಬ ಸಲಹೆ ಕೇಳಿ ಬಂತು.

Advertisement

Udayavani is now on Telegram. Click here to join our channel and stay updated with the latest news.

Next