Advertisement

ಭಾರತೀಯರಿಗೆ ಖಾದ್ಯತೈಲ ಕಹಿ!

02:29 AM Jan 31, 2020 | mahesh |

ಉಡುಪಿ: ಇಂಡೋನೇಷ್ಯಾದಿಂದ ಕಚ್ಚಾ ಪಾಮೆಣ್ಣೆ ಆಮದಿನ ಮೇಲೆ ಸುಂಕ ಏರಿಕೆ ಮತ್ತು ಮಲೇಷ್ಯಾದಿಂದ ಆಮದು ಸ್ಥಗಿತಗೊಂಡಿರುವುದು ನಮ್ಮಲ್ಲೂ ಪಾಮೆಣ್ಣೆ ಸಹಿತ ಇತರ ಖಾದ್ಯ ತೈಲಗಳ ಬೆಲೆಯ ಮೇಲೆ ನೇರ ಪರಿಣಾಮ ಬೀರಿದೆ. ಎರಡು ತಿಂಗಳಲ್ಲಿ ಪಾಮೆಣ್ಣೆ ದರ ಲೀಟರ್‌ಗೆ 30 ರೂ.ನಷ್ಟು ಏರಿಕೆಯಾಗಿದೆ. ಪರಿಣಾಮವಾಗಿ ತೆಂಗಿನೆಣ್ಣೆ ಬಿಟ್ಟು ಇತರ ಎಣ್ಣೆಗಳ ಬೆಲೆಯೂ ಲೀಟರ್‌ಗೆ 15ರಿಂದ 20 ರೂ.ಗಳಷ್ಟು ಹೆಚ್ಚಳವಾಗಿದೆ.

Advertisement

ಭಾರತವು ಇಂಡೋನೇಷ್ಯಾ ಮತ್ತು ಮಲೇಷ್ಯಾಗಳಿಂದ ಕಚ್ಚಾ ಪಾಮೆಣ್ಣೆ ಆಮದು ಮಾಡಿಕೊಳ್ಳುತ್ತಿತ್ತು. ಈ ಬಾರಿ ನಮ್ಮಲ್ಲಿ ಮುಂಗಾರಿನಲ್ಲಿ ಅತಿವೃಷ್ಟಿಯಾಗಿ ಸೋಯಾಬೀನ್‌ ಬೆಳೆಗೆ ಹೆಚ್ಚು ಹಾನಿಯಾಗಿರುವುದರಿಂದ ಮತ್ತು ಈ ವರ್ಷ ಬಿತ್ತನೆ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಕಚ್ಚಾ ಪಾಮೆಣ್ಣೆ ಆಮದಿನ ಅವಲಂಬನೆ ಹೆಚ್ಚಿದೆ. ಈ ನಡುವೆ ತೆರಿಗೆ ಏರಿಕೆ ಇಂಡೋನೇಷ್ಯಾದಿಂದ ಆಮದಿಗೆ ಇಕ್ಕಟ್ಟಾಗಿ ಪರಿಣಮಿಸುತ್ತಿದೆ.

ಇಂಡೋನೇಷ್ಯಾದಿಂದ ಸರಬರಾಜು
ಭಾರತವು ವಾರ್ಷಿಕವಾಗಿ ಮಲೇಷ್ಯಾ, ಇಂಡೋ ನೇಷ್ಯಾಗಳಿಂದ 90 ಲಕ್ಷ ಟನ್‌ಗಳಷ್ಟು ಕಚ್ಚಾ ಪಾಮೆಣ್ಣೆ ಆಮದು ಮಾಡಿಕೊಳ್ಳುತ್ತದೆ. ಮಲೇಷ್ಯಾದಿಂದ ರಫ್ತಾಗುವ ಒಟ್ಟು ತಾಳೆ ಎಣ್ಣೆಯಲ್ಲಿ ಶೇ.24ನ್ನು ನಾವೇ ಆಮದು ಮಾಡಿಕೊಳ್ಳುತ್ತೇವೆ. ಮಲೇಷ್ಯಾದ ಪ್ರಮುಖ ರಫ್ತು ಉತ್ಪನ್ನಗಳಲ್ಲಿ ತಾಳೆ ಎಣ್ಣೆಯೂ ಒಂದಾಗಿದ್ದು, ಭಾರತದ ನಿರ್ಬಂಧ ಅಲ್ಲಿನ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಪ್ರಸ್ತುತ ಕಚ್ಚಾ ಪಾಮೆಣ್ಣೆಗಾಗಿ ನಾವು ಇಂಡೋನೇಷ್ಯಾವನ್ನು ಅವಲಂಬಿಸಿದ್ದೇವೆ.

ಮಲೇಷ್ಯಾಕ್ಕೆ ಏಕೆ ನಿರ್ಬಂಧ?
ಇತ್ತೀಚೆಗೆ ಕಾಶ್ಮೀರದ ಬೆಳವಣಿಗೆಗಳು ಮತ್ತು ಸಿಎಎ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಲೇಷ್ಯಾದ ಪ್ರಧಾನಿ, ಪಾಕ್‌ ಪರ ನಿಲುವು ವ್ಯಕ್ತಪಡಿಸಿದ್ದರು. ಸಿಎಎ ಜಾರಿಯಿಂದ ಭಾರತದಲ್ಲಿ ಸಾಮಾಜಿಕ ಸಾಮರಸ್ಯ ಕದಡಲಿದ್ದು, ಹೊರದೇಶಗಳ ಮೇಲೂ ಪರಿಣಾಮ ಬೀರಬಹುದು ಎಂದು ಅಭಿಪ್ರಾಯಪಟ್ಟಿದ್ದರು. ಇದು ಈಗ ಎರಡು ದೇಶಗಳ ನಡುವಿನ ಮಾರುಕಟ್ಟೆ ಸಮರಕ್ಕೆ ಕಾರಣವಾಗಿದೆ. ಪರ್ಯಾಯವಾಗಿ ಇಂಡೋನೇಷ್ಯಾದಿಂದ ಶೇ.70ರಷ್ಟು ಕಚ್ಚಾ ಪಾಮೆಣ್ಣೆ ಆಮದು ಒಪ್ಪಂದ ಮಾಡುವ ನಿರ್ಧಾರವನ್ನು ಭಾರತ ತೆಗೆದುಕೊಂಡಿದೆ. ದರ ಇಳಿಕೆ ನಿರ್ಧಾರವೂ ಇದರ ವ್ಯಾಪ್ತಿಗೆ ಒಳಪಟ್ಟಿದ್ದು, ಇದು ಎಲ್ಲ ರಾಜ್ಯಗಳಿಗೆ ಅನ್ವಯಿಸಲಿದೆ.

15 ದಿನಗಳಿಂದ ತಾಳೆಎಣ್ಣೆ ಸಹಿತ ಪ್ರತಿಯೊಂದು ಅಡುಗೆ ಎಣ್ಣೆಗಳ ದರದಲ್ಲಿ ಹೆಚ್ಚಳವಾಗಿದೆ. ತೆಂಗಿನ ಎಣ್ಣೆ ಬೆಲೆ ಮಾತ್ರ ಸ್ಥಿರವಾಗಿದೆ. ಮುಖ್ಯವಾಗಿ ಮಲೇಷ್ಯಾದಿಂದ ಆಮದಾಗುತ್ತಿದ್ದ ಕಚ್ಚಾ ಪಾಮ್‌ ಆಯಿಲ್‌ ಸ್ಥಗಿತವಾಗಿರುವುದೇ ಬೆಲೆಏರಿಕೆಗೆ ಕಾರಣ ಎನ್ನಲಾಗುತ್ತಿದೆ.
– ಶ್ರೀಪತಿ ಕಾಮತ್‌, ವ್ಯಾಪಾರಸ್ಥರು, ಉಡುಪಿ ಜಿಲ್ಲೆ

Advertisement

ಮಲೇಷ್ಯಾದಿಂದ ಕಚ್ಚಾ ಪಾಮೆಣ್ಣೆ ಆಮದು ನಿರ್ಬಂಧಿಸಲಾಗಿದೆ. ಇದು ವಿದೇಶಾಂಗ ಸಚಿವಾಲಯದ ಆಂತರಿಕ ನಿರ್ಧಾರ. 15 ದಿನಗಳ ಹಿಂದೆ ಈ ಎಲ್ಲ ಪ್ರಕ್ರಿಯೆಗಳು ನಡೆದಿವೆ. ಸಹಜವಾಗಿಯೇ ಇದರಿಂದ ಖಾದ್ಯ ತೈಲಗಳ ಬೆಲೆ ಹೆಚ್ಚಿದೆ. ಬೆಲೆ ಇಳಿಕೆಗೆ ಕ್ರಮಗಳನ್ನು ಕೈಗೊಳ್ಳುವುದು ಕೇಂದ್ರ ಸರಕಾರಕ್ಕೆ ಬಿಟ್ಟ ವಿಚಾರ.
– ಡಾ| ಪ್ರಕಾಶ್‌ ಸೊಬ್ರಾದ್‌
ಅಪರ ನಿರ್ದೇಶಕರು,  ತೋಟಗಾರಿಕೆ ಇಲಾಖೆ ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next