Advertisement

ಕಚ್ಚಾ ಬಾಂಬ್‌ ಸ್ಫೋಟಿಸಿ ಪ್ರಾಣಿ ಹತ್ಯೆ

03:04 PM Dec 21, 2020 | Suhan S |

ಹನೂರು: ಜಾನುವಾರುಗಳಿಗೆ ಮೇವಿನ ಮಧ್ಯೆ ಕಚ್ಚಾಬಾಂಬ್‌ ಇಟ್ಟು ಸ್ಫೋಟಿಸುತ್ತಿರುವ ಹೀನ ಕೃತ್ಯಗಳು ಮಲೆ ಮಹದೇಶ್ವರ ಬೆಟ್ಟ ಸುತ್ತಮುತ್ತಲ ಗ್ರಾಮಗಳಲ್ಲಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

Advertisement

ಮಲೆ ಮಹದೇಶ್ವರಬೆಟ್ಟ ಸುತ್ತಮುತ್ತಲು ದಟ್ಟ ಅಡವಿ ಇದ್ದು, ಇಲ್ಲಿ ವಿವಿಧ ಬಗೆಯ ಅಪರೂಪದ ಕಾಡು ಪ್ರಾಣಿಗಳೂ ವಾಸಿಸುತ್ತಿವೆ. ಇಲ್ಲಿನ ಕೆಲ ನೀಚರು ಆ ಪ್ರಾಣಿಗಳನ್ನು ಬೇಟೆಯಾಡಲು ಅವುಗಳ ಮಾಂಸ ವನ್ನು ಭಕ್ಷಿಸಲು ಮತ್ತು ವನ್ಯಜೀವಿಗಳ ಚರ್ಮ, ಕೊಂಬು, ಉಗುರು ಇನ್ನಿತರ ಅಂಗಾಂಗಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣಗಳಿಸುವ ಆಸೆಯಿಂದ ಹಲವರು ಅಡ್ಡದಾರಿ ಹಿಡಿದಿದ್ದಾರೆ.

ಕಚ್ಚಾಬಾಂಬ್‌ ಬಳಕೆ: ಮಲೆ ಮಹದೇಶ್ವರ ಬೆಟ್ಟ ಸುತ್ತಮುತ್ತಲ ದಟ್ಟ ಅರಣ್ಯದಲ್ಲಿ ಹುಲಿ, ಚಿರತೆ,ಜಿಂಕೆ, ಕಡವೆ, ಮೊಲ, ಕಾಡುಹಂದಿಗಳಂತಹ ಜೀವಿ ಗಳನ್ನು ಬೇಟೆಯಾಡಲು ರಾಜ್ಯದ ಗಡಿಯಂಚಿನಗ್ರಾಮಗಳ ವೃತ್ತಿಪರ ಬೇಟೆಗಾರರು ಮತ್ತು ತಮಿಳು ನಾಡಿನ ಕೆಲ ಬೇಟೆಗಾರರು ಹಲವು ಮಾರ್ಗಗಳನ್ನುಕಂಡುಕೊಂಡಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ವನ್ಯಪ್ರಾಣಿಗಳು ಸೇವಿಸಬಹುದಾದಂತಹ ಆಹಾರದ ಜೊತೆ ಗನ್‌ಪೌಡರ್‌, ಸೈಕಲ್‌ ಬಾಲ್ಸ್‌,ಕಬ್ಬಿಣದ ಚೂರುಗಳ ಮಿಶ್ರಿತ ಕಚ್ಚಾಬಾಂಬ್‌ ಅನ್ನು ಇಟ್ಟು ಬೇಟೆಯಾಡುತ್ತಿದ್ದಾರೆ.

ಇದನ್ನೂ ಓದಿ : ಕೊಡವರು ಗೋಮಾಂಸ ಸೇವಿಸುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಖಂಡಿಸಿ ಪ್ರತಿಭಟನೆ

ಕಾಡುಹಂದಿ ಬೇಟೆಯಾಡಲು ಮಾಂಸ ಅಥವಾ ಚರ್ಮದ ಜೊತೆ ಕಚ್ಚಾಬಾಂಬ್‌ ಇಡಲಾಗುತ್ತಿದೆ. ಜಿಂಕೆ, ಕಡವೆ, ಮೊಲಗಳಂತಹ ಸಸ್ಯಾಹಾರಿಪ್ರಾಣಿಗಳನ್ನು ಬೇಟೆಯಾಡಲು ಅವುಗಳುಮೇಯುವಂತಹ ಹುಲ್ಲುಗಳ ಉಂಡೆಕಟ್ಟಿ ಅವುಗಳ ಮಧ್ಯೆ ಕಚ್ಚಾಬಾಂಬ್‌ಗಳನ್ನು ಇಟ್ಟು ಅವುಗಳನ್ನುತಿಂದಂತಹ ಪ್ರಾಣಿಗಳು ಬಾಂಬ್‌ ಸ್ಫೋಟಗೊಂಡ ತಕ್ಷಣ ನರಳಿ ನರಳಿ ಅಸುನೀಗುತ್ತವೆ. ಆದರೆ, ಅದೃಷ್ಟವಶಾತ್‌ ಇಲ್ಲಿಯವರೆಗೂ ಇಂತಹ ಕಚ್ಚಾ ಬಾಂಬ್‌ ದಾಳಿಗೆ ವನ್ಯಜೀವಿಗಳು ಮೃತಪಟ್ಟಿರುವ ಪ್ರಕರಣಗಳು ಬೆಳಕಿಗೆ ಬಂದಿಲ್ಲ.

Advertisement

ಜಾನುವಾರುಗಳ ಬಲಿ: ವನ್ಯಜೀವಿಗಳನ್ನು ಬೇಟೆಯಾಡಲು ಅರಣ್ಯ ಪ್ರವೇಶಿಸಿದಲ್ಲಿ ಅರಣ್ಯದೊಳಗೆಇಲಾಖೆ ವತಿಯಿಂದ ಅಳವಡಿಸಲಾಗಿರುವ ಸಿಸಿ ಕ್ಯಾಮರಾ ಅಥವಾಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿ ಕೈಗೆ ಸಿಕ್ಕಿಬೀಳುವ ಭಯದಿಂದ ಬೇಟೆಗಾರರು ಅರಣ್ಯ ಮತ್ತು ಪಟ್ಟಾ ಜಮೀನಿನ ಅಂಚಿನಲ್ಲಿ ಇಂತಹ ಸ್ಫೋಟಕಗಳನ್ನು ಇಡುತ್ತಿದ್ದಾರೆ. ಇದರಪರಿಣಾಮ ವನ್ಯಜೀವಿಗಳಿಗಿಂತ ಹೆಚ್ಚಾಗಿ ಹಸು, ಎಮ್ಮೆಗಳಂತಹ ಜಾನುವಾರುಗಳು ಬಲಿಯಾಗುತ್ತಿವೆ. ಇದಕ್ಕೆ ಪೂರಕವೆಂಬಂತೆ ವಡಕೆಹಳ್ಳ ಗ್ರಾಮದ ಕೆಂಪಮಾದಮ್ಮ ಎಂಬುವರಿಗೆ ಸೇರಿದ ಎಮ್ಮೆಯೊಂದು ಎಲಚಿಕೆರೆ ಅರಣ್ಯ ಪ್ರದೇಶದಲ್ಲಿ ಮೇವು ಮೇಯುತ್ತಿದ್ದಾಗ ಇಂತಹದೇ ದುರ್ಘ‌ಟನೆ ಸಂಭವಿಸಿದ್ದು, ಕಚ್ಚಾಬಾಂಬ್‌ ಮಿಶ್ರಿತ ಮೇವು ಸೇವಿಸಿದ ತಕ್ಷಣ ಅದರ ಬಾಯಿ ಸೀಳಿಬಂದಿದೆ.

ಬಳಿಕ ವಾಪಸ್‌ ಮನೆಗೆ ಬಂದು 2 ದಿನಗಳ ಕಾಲ ನರಳಿ ಜೀವನ್ಮರಣದ ಮಧ್ಯೆ ಹೋರಾಡಿ ಮೃತಪಟ್ಟಿದೆ. ತೋಕೆರೆ ಗ್ರಾಮದಲ್ಲಿಯೂ ಇಂತಹ ಕೃತ್ಯ ಜರುಗಿದ್ದು ಗ್ರಾಮದ ಮಾದಯ್ಯ ಎಂಬುವವರಿಗೆ ಸೇರಿದ ಬರಗೂರು ದೇಶಿ ತಳಿಯ ಹಸು ವೊಂದು ಕಚ್ಚಾಬಾಂಬ್‌ ಮಿಶ್ರಿತ ಮೇವು ಸೇವಿಸಿ ತಲೆ ಮತ್ತು ಕುತ್ತಿಗೆಯ ಅರ್ಧಭಾಗ ಸೀಳಿದ್ದು, ಬಳಿಕ ಗ್ರಾಮದತ್ತ ವಾಪಸ್ಸಾಗಿ ಮೃತಪಟ್ಟಿದೆ.ಇಂತಹ ಹತ್ತು ಹಲವು ಪ್ರಕರಣಗಳು ಜರುಗಿದ್ದು ಬೆಳಕಿಗೆ ಬಂದಿರುವಂಥದ್ದು ಬೆರಳೆಣಿಕೆಯಷ್ಟು ಮಾತ್ರ.

ಮಾಂಸ ದಂಧೆಕೋರರ ಕೈವಾಡ ಶಂಕೆ: ಇಂತಹ ದುಷ್ಕೃತ್ಯದಲ್ಲಿ ಬೇಟೆಗಾರರ ಮೇಲಿನ ಸಂಶಯ ಒಂದೆಡೆಯಾದರೆ ಮತ್ತೂಂದೆಡೆ ಮಾಂಸ ದಂಧೆ ಕೋರರ ಕೈವಾಡ ಶಂಕೆ ವ್ಯಕ್ತವಾಗಿದೆ. ಇತ್ತೀಚೆಗೆ ಜಾನು ವಾರುಗಳನ್ನು ಮಾಂಸಾಹಾರಕ್ಕಾಗಿ ಕೊಲ್ಲುವುದು ಅಥವಾ ನೆರೆಯ ತಮಿಳುನಾಡು ಅಥವಾ ಕೇರಳ ರಾಜ್ಯಕ್ಕೆ ಸಾಗಿಸುವುದು ಕಾನೂನಿನ ಚೌಕಟ್ಟಿನಡಿ ಕಷ್ಟಕರವಾಗಿದೆ.ಈ ನಿಟ್ಟಿನಲ್ಲಿ ಇಂತಹ ದುಷ್ಕೃತ್ಯ ನಡೆಸಿ ಜಾನುವಾರುಗಳನ್ನು ಕೊಂದರೆ ಕಡಿಮೆ ಬೆಲೆಗೂ ಮಾಂಸ ದೊರೆಯುತ್ತದೆ ಮತ್ತು ಮೃತಪಟ್ಟಿರುವ ಜಾನುವಾರನ್ನು ಬೇರೆಡೆಗೆ ಸಾಗಿಸುವುದೂ ಕೂಡ ಸುಲಭದ ಕೆಲಸವಾಗುತ್ತದೆ ಎಂಬುದನ್ನು ಅರಿತ ಕೆಲ ಮಾಂಸದಂಧೆಕೋರರು ಇಂತಹ ಕೃತ್ಯಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ.

ಇದಕ್ಕೆ ಉದಾಹರಣೆ ಎಂಬಂತೆ ವಡಕೆಹಳ್ಳ ಘಟನೆಯಿಂದಾಗಿ ಮೃತಪಟ್ಟ ಎಮ್ಮೆಯು 30-35 ಸಾವಿರ ಬೆಲೆಬಾಳುವಂತಹದ್ದಾಗಿದ್ದು, ಈ ದುಷ್ಕೃತ್ಯ ನಡೆದ ಹಿನ್ನೆಲೆ ಕೇವಲ3ಸಾವಿರಕ್ಕೆ ಮಾರಾಟವಾಯಿತು. ಇನ್ನು ತೊಕೆರೆ ಗ್ರಾಮದ ಹಸು 40 ಸಾವಿರ ಬೆಲೆಬಾಳುವಂತಹದ್ದಾಗಿದ್ದು ಕೇವಲ 4 ಸಾವಿರಕ್ಕೆ ಮಾರಾಟವಾಗಿದೆ. ಒಟ್ಟಾರೆ ಮಾಂಸದಾಸೆಗೋ ಅಥವಾ ಹೆಚ್ಚು ಲಾಭಗಳಿಸುವ ಆಸೆಗೋ ಇಂತಹ ಹೀನ ಕೃತ್ಯ ನಡೆಸುತ್ತಿರುವ ತಂಡವನ್ನು ಕೂಡಲೇ ಪತ್ತೆಹಚ್ಚಬೇಕಿದೆ. ವನ್ಯಜೀವಿಗಳು ಹಾಗೂ ಜಾನುವಾರುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅರಣ್ಯಾಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕೆಂಬುದು ಪ್ರಾಣಿಪ್ರಿಯರು ಹಾಗೂ ಸಾರ್ವಜನಿಕರ ಒತ್ತಾಯವಾಗಿದೆ.

ಇಂತಹ ದುಷ್ಕೃತ್ಯ ನಡೆಯುತ್ತಿರುವುದು ಇತ್ತೀಚೆಗೆ ನಮ್ಮ ಗಮನಕ್ಕೆ ಬಂದಿದೆ. ಈ ಕೃತ್ಯ ಅರಣ್ಯದ ಅಂಚಿನಲ್ಲಿ ಜರುಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಬಗ್ಗೆ ತನಿಖೆ ಆರಂಭವಾಗಿದ್ದು ಒಂದೆರೆಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು. ಏಡುಕೊಂಡಲು, ಡಿಸಿಎಫ್, ಮ.ಮ.ವನ್ಯಜೀವಿ ವಲಯ

ಸರ್ಕಾರ ಇತ್ತೀಚೆಗೆ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೊಳಿಸಿದ್ದರೂ ಸಹ ಇಂತಹಕೃತ್ಯಗಳು ನಡೆಯುತ್ತಿವೆ. ಇಂತಹ ಪ್ರಕರಣಗಳಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನುಕೂಡಲೇ ಪತ್ತೆಹಚ್ಚಿ ಬಂಧನಕ್ಕೊಳಪಡಿಸಬೇಕು. ಕೆ.ಪಿ.ಶಿವ ಕುಮಾರ್‌ ಸ್ವಾಮಿ, ಸರ್ವೋದಯ ಜನಜಾಗೃತಿ ವೇದಿಕೆ ಅಧ್ಯಕ್ಷ

 

-ವಿನೋದ್‌ ಎನ್‌.ಗೌಡ

Advertisement

Udayavani is now on Telegram. Click here to join our channel and stay updated with the latest news.

Next