Advertisement

ಶಿಲುಬೆ ತೆರವು: ಹುಡಗಿ ಗ್ರಾಪಂಗೆ ಮುತ್ತಿಗೆ

12:11 PM Feb 23, 2018 | |

ಹುಮನಾಬಾದ: ಹುಡಗಿ ಗ್ರಾಮದಲ್ಲಿ ಪ್ರತಿಷ್ಟಾಪಿಸಿದ್ದ ಶಿಲುಬೆಯನ್ನು ಬುಧವಾರ ತೆರವುಗೊಳಿಸಿರುವುದನ್ನು ಖಂಡಿಸಿ ಗ್ರಾಮದ ಕ್ರೈಸ್ತ ಸಮುದಾಯದ ಜನರು ಗುರುವಾರ ಹುಡಗಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

ಅನೇಕ ವರ್ಷಗಳಿಂದ ಅಲ್ಲಿ ಶಿಲುಬೆ ಸ್ಥಾಪಿಸಲಾಗಿದೆ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ತೆರವುಗೊಳಿಸಿದ್ದಾರೆ. ಅದೇ ದಲಿತ ಬಡಾವಣೆಯಲ್ಲಿ ಕಳೆದ ಕೆಲ ವರ್ಷಗಳ ಹಿಂದೆ ಮರಗ್ಯಮ್ಮ ದೇವಸ್ಥಾನವನ್ನು ರಸ್ತೆಮೇಲೆ ಸ್ಥಾಪಿಸಿದರೂ ಕೂಡ ಧಾರ್ಮಿಕ ವಿಷಯವೆಂದು ಯಾರೂ ಆಕ್ಷೇಪಣೆ ಸಲ್ಲಿಸಿಲ್ಲ. ಇದೀಗ ಶಿಲುಬೆ ಸ್ಥಾಪನೆ ವಿಷಯದಲ್ಲಿ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿ ಮಾಡಿ ಎರಡು ಗುಂಪುಗಳ ಮಧ್ಯೆ ಜಗಳ ಹಚ್ಚುವ ಹುನ್ನಾರು ನಡೆಯುತ್ತಿವೆ ಎಂದು ಸಮುದಾಯದ ಜನರು ಆರೋಪಿಸಿದರು. ಶಿಲುಬೆ ಸ್ಥಾಪಿಸಿರುವುದು ಅನಧಿಕೃತವಾಗಿದ್ದರೆ ರಸ್ತೆಯಲ್ಲಿನ ದೇವಸ್ಥಾನಗಳು, ವೃತ್ತಗಳನ್ನು ಕೂಡ ತೆರವುಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಆಗ್ರಹಿಸಿದರು.

ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಯಾರೂ ಮಾಡಬಾರದು. ಸ್ಥಳೀಯ ಪಿಡಿಒ ಕೆಲ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಪೊಲೀಸ್‌ ಠಾಣೆಗೆ ದೂರುನೀಡಿ ಶಿಲುಬೆ ತೆರವಿಗೆ ಮುಂದಾಗಿದ್ದಾರೆ. ಕಾರಣ ಕೂಡಲೆ ಪಿಡಿಒ ವರ್ಗಾವಣೆಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮರಗ್ಯಮ್ಮ ದೇವಸ್ಥಾನ ತೆರವುಗೊಳಿಸಬೇಕು. ಈ ಘಟನೆ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ಅವರ ವಿರುದ್ಧ ಕೂಡ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಪಂಚಾಯತ ಹಾಗೂ ಕಂದಾಯ ಅಧಿಕಾರಿಗಳಿಗೆ ದೂರು ಸಲ್ಲಿಸಿದರು.

ಪ್ರತಿಭಟನಾಕಾರರು ಗ್ರಾಮ ಪಂಚಾಯಿತಿಗೆ ಬಂದಾಗ ಪಿಡಿಒ ಇಲ್ಲದನ್ನು ಗಮನಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಹೊತ್ತು ಗ್ರಾಮದಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು. ಜನರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿದ ಪೊಲೀಸ್‌ ಅಧಿಕಾರಿಗಳು ಹೆಚ್ಚಿನ ಬಂದೊ ಬಸ್ತ್ಗಾಗಿ ಬೇರೆ ಠಾಣೆಯ ಸಿಬ್ಬಂದಿಯನ್ನು ಕರೆಸಿಕೊಂಡರು.

ಸಿಪಿಐ ಜೆ. ನ್ಯಾಮೆಗೌಡರ್‌ ಅವರು ಉದ್ರಿಕ್ತರ ಮನವೊಲಿಸುವ ಕೆಲಸ ಮಾಡಿದರು. ಕಾನೂನು ಪ್ರಕಾರ ಪರವಾನಗಿ ಪಡೆದು ಶಿಲುಬೆ ಸ್ಥಾಪಿಸಿಕೊಳ್ಳಿ. ಅಲ್ಲದೇ ಬೇರೆ ಯಾವುದೇ ಸಮಸ್ಯೆಗಳು ಇದ್ದರೂ ಕೂಡ ಲಿಖೀತ ರೂಪದಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ದೂರು ಸಲ್ಲಿಸಿ. ನಾವುಗಳು ಕೂಡ ಬಂದೋಬಸ್ತ್ ಮಾಡುತ್ತೇವೆ ಎಂದರು.

Advertisement

ಕ್ರೈಸ್ತ ಸಮುದಾಯದ ಮುಖಂಡರಾದ ಶಂಕರಾವ್‌ ಲಕಲಕ, ಕ್ರಿಸ್ತಾನಂದ ಚಿಟಗುಪ್ಪಾ, ಸಿಮಾನ ಸೂನಿ, ಸಂಪತಕುಮಾರ
ದರ್ಗೆ, ಶಾಮವಿಲ್‌ ಸೂನಿ, ಮೋಹನ್‌ ಬಸನಳ್ಳಿ, ಅರುಣ ಕೊಟೆ, ಬಾಬುರಾವ್‌ ಕೊಟೆ, ಅರ್ಜುನ, ರಾಜು ಬಿರನಳ್ಳಿ, ಶ್ರೀಮಂತ, ಅಶೋಕ ಭಿಮನ್‌, ಬಸವರಾಜ ಕನಾ, ಸಂಜು, ಸಂತೋಷ ಖನ್ನ, ಪ್ರಕಾಶ ಚಳಕಪುರ, ಸುಂದರ, ಶ್ರೀದೇವಿ ಮೇತ್ರಿ, ಜಗದೇವಿ ಕಾಲನಾಯಕ, ಜೇಮ್ಸ್‌, ಅನಿತಾ, ಸಂಗೀತಾ ವಿನೊಂದ, ರೀನಾ ಎಸ್‌., ಕಮಲಮ್ಮಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next