ಜಮ್ಮು-ಕಾಶ್ಮೀರ: ಭಾರತೀಯ ಸೇನೆಯ ಯೋಧರನೋರ್ವ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಾಹನ ಚಾಲಕನ ಪ್ರಾಣ ಉಳಿಸಿದ್ದಾರೆ. ಆತನನ್ನು ಬೆನ್ನು ಮೇಲೆ ಹೊತ್ತು ಗಿರಿಕಂದಕಗಳನ್ನು ದಾಟಿ ಆಸ್ಪತ್ರೆಗೆ ಸೇರಿಸಿದ್ದಾನೆ.
ಬುಧವಾರ ರಾಂಬಾನ್ ಜಿಲ್ಲೆಯ ಬನಿಲಾಲ್ ಎಂಬಲ್ಲಿ ವಾಹನವೊಂದು ಅಪಘಾತಕ್ಕಿಡಾಗಿತ್ತು. ಚಾಲಕನ ನಿಯಂತ್ರಣ ಕಳೆದುಕೊಂಡಿದ್ದ ವಾಹನವೊಂದು ಕಂದಕಕ್ಕೆ ಉರುಳಿತ್ತು. ಈ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಭಾರತೀಯ ಸೇನೆಯ ಯೋಧರು ರಕ್ಷಣಾ ಕಾರ್ಯ ಕೈಗೊಂಡರು.
ಸಿಆರ್ ಪಿಎಫ್ ಯೋಧ ವಿರೇಂದ್ರ ಸಿಂಗ್, ವಾಹನ ಚಾಲಕ ನರೇಶ್ ಕುಮಾರ್ ಅವರನ್ನು ತನ್ನ ಬೆನ್ನು ಮೇಲೆ ಹೊತ್ತುಕೊಂಡು, ಕಲ್ಲು-ಬಂಡೆಗಳಿಂದ ಕೂಡಿದ್ದ ಗಿರಿಕಂದಕವನ್ನು ದಾಟಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಮೂಲಕ ಒಂದು ಜೀವ ಉಳಿಸಿದ್ದಾರೆ.
ಕಟುವಾ ಜಿಲ್ಲೆಯ ನರೇಶ್ ಕುಮಾರ್ ಜಮ್ಮುವಿನಿಂದ ಶ್ರೀನಗರಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಈತನನ್ನು ಯೋಧರು, ಭಾರತೀಯ ಸೇನೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಇನ್ನು ಚಾಲಕ ನರೇಶ್ ಕುಮಾರ್ ಅವರನ್ನು ಹೊತ್ತುಕೊಂಡು ಗುಡ್ಡ ಏರುತ್ತಿದ್ದ ಸೈನಿಕನ ವಿಡಿಯೋ ಹಾಗೂ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಯೋಧನ ಈ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತದೆ.