ಹೊಸದಿಲ್ಲಿ: ಪ್ರಧಾನಿ ಮೋದಿ ಅವರ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಗ್ನರಾಗಿದ್ದ ಎನ್‌ಡಿಎ ನಾಯಕರು, ಉಗ್ರರ ವಿರುದ್ಧದ ಹೋರಾಟದಲ್ಲಿ ಮಡಿದ ವೀರಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸದೇ ಅಗೌರವ ತೋರಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಜಮ್ಮು ಕಾಶ್ಮೀರದ ಕುಪ್ವಾರಾದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಬಿಹಾರದ ಸಿಆರ್‌ಪಿಎಫ್ ಯೋಧ ಪಿಂಟು ಕುಮಾರ್ ಸಿಂಗ್ ಅವರ ಪ್ರಾರ್ಥಿವ ಶರೀರವನ್ನು ಪಾಟ್ನಾ ವಿಮಾನ ನಿಲ್ದಾಣಕ್ಕೆ ರವಿವಾರ ಬೆಳಗ್ಗೆ ತರಲಾಗಿತ್ತು. ಈ ವೇಳೆ ಸಿಎಂ ನಿತೀಶ್‌ಕುಮಾರ್ ಸೇರಿದಂತೆ ಸಂಪುಟದ ಒಬ್ಬ ಸಹೋದ್ಯೋಗಿಯೂ ಮೃತದೇಹ ಸ್ವೀಕರಿಸಲು ಆಗಮಿಸಲಿಲ್ಲ.
ಎನ್‌ಡಿಎಯ ಎಲ್ಲ ನಾಯಕರೂ ಪ್ರಧಾನಿ ಮೋದಿ ಅವರ ಸಂಕಲ್ಪ ಯಾತ್ರೆಯಲ್ಲಿ ಮಗ್ನರಾಗಿದ್ದ ಕಾರಣ, ಇತ್ತ ತಲೆಹಾಕಲೇ ಇಲ್ಲ. ಜಿಲ್ಲಾಧಿಕಾರಿ ಕುಮಾರ್ ರವಿ, ಹಿರಿಯ ಪೊಲೀಸ್ ಅಧಿಕಾರಿ ಗರೀಮಾ, ಬಿಹಾರ ಕಾಂಗ್ರೆಸ್ ಅಧ್ಯಕ್ಷ ಮದನ್‌ಮೋಹನ್ ಜಾ ಹಾಗೂ ಎಲ್‌ಜೆಪಿ ಸಂಸದ ಚೌಧರಿ ಮೆಹಬೂಬ್ ಅಲಿ ಸಹಿತ ಕೆಲ ನಾಯಕರು ನಿಲ್ದಾಣಕ್ಕೆ ಬಂದು ಹುತಾತ್ಮನಿಗೆ ಅಂತಿಮ ನಮನ ಸಲ್ಲಿಸಿದರು. ಯೋಧನಿಗೆ ಗೌರವ ಸಲ್ಲಿಸುವುದಕ್ಕಿಂತ ರಾಜಕೀಯ ಕಾರ್ಯಕ್ರಮವೇ ಮುಖ್ಯವಾಯಿತೇ ಎಂಬ ಮಾತು ಸ್ಥಳೀಯವಾಗಿ ಕೇಳಿಬಂದಿದೆ.
ವಾಯುಪಡೆ ನಡೆಸಿದ ದಾಳಿ ಬಗ್ಗೆ ವಿಪಕ್ಷಗಳು ಅನುಮಾನ ವ್ಯಕ್ತಪಡಿಸಿದವು, ಇದನ್ನು ನೋಡಿ ಪಾಕಿಸ್ಥಾನದ ಮೊಗದಲ್ಲಿ ನಗು ಮೂಡಿತು. ಪ್ರಧಾನಿ ಮೋದಿ ಅವರ ಸಾಧನೆಯನ್ನು ಹೊಗಳದಿದ್ದರೂ ಪರವಾಗಿಲ್ಲ, ವಿಪಕ್ಷಗಳು ಬಾಯಿ ಮುಚ್ಚಿ ಕುಳಿತರೆ ಸಾಕಿತ್ತು.
– ಅಮಿತ್ ಶಾ, ಬಿಜೆಪಿ ಅಧ್ಯಕ್ಷ