Advertisement

ಪರಿಷೆಗೆ ಹರಿದುಬಂದ ಜನಸಾಗರ

12:35 AM Nov 26, 2019 | Lakshmi GovindaRaj |

ಬೆಂಗಳೂರು: ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಸೋಮವಾರ ವಿದ್ಯುಕ್ತ ಚಾಲನೆ ದೊರೆತಿದ್ದು, ಜನಸಾಗರವೇ ಹರಿದು ಬಂದಿತ್ತು. ಕಾರ್ತೀಕ ಮಾಸದ ಕೊನೆಯ ಸೋಮವಾರ ದೊಡ್ಡ ಬಸವಣ್ಣನ ದೇವಸ್ಥಾನ ಹಾಗೂ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅತ್ಯಂತ ಸಂಭ್ರಮದಿಂದ ಕಡಲೆಕಾಯಿ ಪರಿಷೆ ನಡೆಯಿತು.

Advertisement

ಬಸವಣ್ಣನ ಮೂರ್ತಿ ಹಾಗೂ ದೊಡ್ಡ ಗಣಪತಿ ಮೂರ್ತಿಗೆ ಬೆಳಗ್ಗೆಯಿಂದಲೇ ಕಡಲೆಕಾಯಿ ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಭಕ್ತರಿಗೆ ಕಡಲೆಕಾಯಿ ಪ್ರಸಾದ ವಿತರಿಸಲಾಯಿತು. ಬಿಬಿಎಂಪಿ ಮೇಯರ್‌ ಎಂ.ಗೌತಮ್‌ ಕುಮಾರ್‌ ಬಸವಣ್ಣನ ಮೂರ್ತಿಗೆ ಕಡೆಲೆಕಾಯಿ ತುಲಾಭಾರ ಮಾಡುವ ಮೂಲಕ ಪರಿಷೆಗೆ ಚಾಲನೆ ನೀಡಿದರು. ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಹ್ಮಣ್ಯ, ವಿಧಾನ ಪರಿಷತ್‌ ಸದಸ್ಯ ಶರವಣ, ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣ ಸೇರಿ ಅನೇಕರು ಭಾಗವಹಿಸಿದ್ದರು.

ರಸ್ತೆ ಬದಿ ರಾಶಿ ರಾಶಿ ಕಡಲೆಕಾಯಿ: ಕಡಲೆಕಾಯಿ ಬೆಳೆಗಾರರು ಹಾಗೂ ಗ್ರಾಹಕರನ್ನು ಒಂದು ಗೂಡಿಸುವುದು ಪರಿಷೆಯ ವಿಶೇಷತೆ. ರಾಮಕೃಷ್ಣ ಆಶ್ರಮದಿಂದ ಆರಂಭವಾಗಿ ಎನ್‌.ಆರ್‌.ಕಾಲೋನಿವರೆಗಿನ ರಸ್ತೆ ಬದಿಯಲ್ಲಿ ಹರಡಿದ ರಾಶಿರಾಶಿ ಹಸಿ, ಹುರಿದ ಮತ್ತು ಬೇಯಿಸಿದ ಕಡಲೆಕಾಯಿ ಸಾರ್ವಜನಿಕರ ಆಕರ್ಷಣಿಯ ಕೇಂದ್ರವಾಗಿದೆ.

ಪರಿಷೆಯಲ್ಲಿ ಗಾಂಧಿ!: ಕಡಲೆಕಾಯಿ ಪರಿಷೆಯಲ್ಲಿ ಹೆಚ್ಚಿನ ಗಮನ ಸೆಳೆದಿದ್ದು ಗಾಂಧಿ ವೇಷಧಾರಿ. ಆಂಧ್ರ ಪ್ರದೇಶ ಮೂಲದ 55 ವರ್ಷದ ಕನ್ನಯ್ಯ ಸುಮಾರು 20 ವರ್ಷದಿಂದ ಗಾಂಧಿ ವೇಷ ಹಾಕುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕೃಷಿಮೇಳ, ಮಲ್ಲೇಶ್ವರ ಪರಿಷೆ, ಬೆಂಗಳೂರು ಕರಗ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಗಾಂಧಿ ವೇಷದಲ್ಲಿ ದಿನ ವಿಡೀ ನಿಲ್ಲುತ್ತಾರೆ. ಬಸವನಗುಡಿ ಪರಿ ಷೆಗೆ 6 ವರ್ಷ ದಿಂದ ಬರುತ್ತಿದ್ದು, ಇವರ ಜತೆ ಜನರು ಸೆಲ್ಫಿಗಾಗಿ ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿತ್ತು.

ದೊಡ್ಡಗಣಪತಿಗೆ ಬೆಣ್ಣೆ ಅಲಂಕಾರ: ದೊಡ್ಡಗಣಪತಿ ದೇವರಿಗೆ ಪರಿಷೆ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿಯಿಂದಲೇ ಬೆಣ್ಣೆ ಹಾಗೂ ಒಂದು ದೊಡ್ಡ ಮೂಟೆ ಕಡಲೆಕಾಯಿ ಬಳಸಿ ವಿಶೇಷವಾಗಿ ಅಲಂಕರಿಸಲಾಗಿತ್ತು. ಹೀಗಾಗಿ ಈ ಅಲಂಕಾರವನ್ನು ನೋಡಲು ಭಕ್ತರು ಸಾಲುಗಟ್ಟಿ ಬರುತ್ತಿದ್ದರು. ಈ ಬೆಣ್ಣೆ ಬುಧವಾರ ದವರೆಗೆ ದೇವರ ಮೇಲೆಯೇ ಇರುತ್ತದೆ ಎಂದು ದೇವಾಲಯದ ಪ್ರಧಾನ ಅರ್ಚಕರು ತಿಳಿಸಿದ್ದಾರೆ.

Advertisement

ವಾಹನಗಳ ಸಂಚಾರ: ಪರಿಷೆ ಉದ್ಘಾಟನೆ ದಿನ ರಾಮಕೃಷ್ಣ ಆಶ್ರಮದ ಬಳಿಯಿಂದಲೇ ವಾಹನಗಳ ಸಂಚಾರ ನಿಷೇಧಿಸಲಾಗುತ್ತದೆ. ಆದರೆ ಬುಲ್‌ಟೆಂಪಲ್‌ ರಸ್ತೆಯಲ್ಲಿ ಪರಿಷೆಗೆ ತುಂಬಿದ್ದ ಜನರ ನಡುವೆಯೂ ಬಿಎಂಟಿಸಿ ಬಸ್‌ಗಳು ಸೇರಿದಂತೆ ಎಲ್ಲಾ ವಾಹನಗಳು ಕೆ.ಶ್ಯಾಮರಾಜ ಅಯ್ಯಂಗಾರ್‌ ರಸ್ತೆ ತಿರುವಿನವರೆಗೆ ಓಡಾಡುತ್ತಿದ್ದವು. ಇದರಿಂದ ಪರಿಷೆಗೆ ಬಂದ ಸಾರ್ವಜನಿಕರಿಗೆ ಕಿರಿಕಿರಿಯಾಯಿತು.

ಕಳೆದ ವರ್ಷಕ್ಕೆ ಹೋಲಿಸಿದರೆ ಕಡಲೆಕಾಯಿ ಬೆಲೆ ಜಾಸ್ತಿ ಇದೆ. ಕುಟುಂಬದ ಜತೆ ಬಂದಿದ್ದು, 4 ಸೇರು ಕಡಲೆಕಾಯಿ ಕೊಂಡಿ ದ್ದೇನೆ. ವಾಹನಗಳ ಸಂಚಾರ ದಿಂದ ಕಿರಿಕಿರಿಯಾಗುತ್ತಿದೆ.
-ಮಾದೇಗೌಡ, ಸ್ಥಳೀಯ ನಿವಾಸಿ

ಈ ಬಾರಿ ಪರಿಷೆಗೆ 50 ಮೂಟೆ ಕಡಲೆಕಾಯಿ ತಂದಿದ್ದೇವೆ. ಈಗಾಗಲೇ ಅರ್ಧ ದಷ್ಟು ಖಾಲಿಯಾಗಿದೆ. ವ್ಯಾಪಾರ ಉತ್ತಮವಾಗಿದ್ದು, ಸಣ್ಣ ಸೇರಿಗೆ 25 ರೂ. ದೊಡ್ಡ ಸೇರಿಗೆ 40 ರೂ. ಬೆಲೆ ಇದೆ. ಪೇಪರ್‌ ಚೀಲ ಬಳಸುತ್ತಿದ್ದೇವೆ.
-ಪಳನಿಯಮ್ಮ, ಕಡಲೆಕಾಯಿ ವ್ಯಾಪಾರಿ

ಹತ್ತು ವರ್ಷದಿಂದ ತಮಿಳುನಾಡಿನಿಂದ ಪರಿಷೆಗೆ ಬರುತ್ತಿದ್ದೇವೆ. ಕಡಲೆಕಾಯಿ ವ್ಯಾಪಾರ ಚೆನ್ನಾಗಿದೆ. 8 ಮೂಟೆ ತಂದಿದ್ದು, ಈಗಾಗಲೇ 5 ಮೂಟೆ ಖಾಲಿಯಾಗಿದೆ. ಹಸಿ, ಒಣ, ಹುರಿದ ಕಡಲೆಕಾಯಿಯನ್ನು ಮಾರಾಟ ಮಾಡಲಾಗುತ್ತಿದೆ.
-ಗೋವಿಂದ, ತಮಿಳುನಾಡು ವ್ಯಾಪಾರಿ

ನಾಡಪ್ರಭು ಕೆಂಪೇಗೌಡರ ಕಾಲದಿಂದಲೂ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ವಿಜೃಂಭಣೆಯಿಂದ ನಡೆಯುತ್ತಿದೆ. ಗ್ರಾಮೀಣ ಸಂಸ್ಕೃತಿಯನ್ನು ಪರಿಷೆ ಬಿಂಬಿಸುತ್ತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಬೇಕು.
-ತೇಜಸ್ವಿಸೂರ್ಯ, ಸಂಸದ

ಬಸವನಗುಡಿಯ ಕಡಲೆಕಾಯಿ ಪರಿಷೆಯಂತಹ ಕಾರ್ಯಕ್ರಮಗಳು ಬೆಂಗಳೂರಿನ ವಿವಿಧ ಕಡೆ ನಡೆಯಬೇಕು. ನಮ್ಮ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಪರಿಷೆಯಂತಹ ಕಾರ್ಯಕ್ರಮಗಳು ಪೂರಕವಾಗಿವೆ.
-ಎಂ. ಗೌತಮ್‌ ಕುಮಾರ್‌, ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next