ಶಿರಸಿ: ಹಿಂದಿನ ಸರಕಾರ ಘೋಷಣೆ ಮಾಡಿದ್ದ ರೈತರ ಒಂದು ಲಕ್ಷ ರೂ. ಬೆಳೆಸಾಲ ಮನ್ನಾಕ್ಕೆ ಹಲವು ನಿಯಮಗಳು ಸೇರ್ಪಡೆಗೊಂಡು ರೈತರ ಖಾತೆಗೆ ಒಂದಿಷ್ಟು ಹಣ ಬಿಡುಗಡೆಯಾಗಿದೆ. ಆದರೂ ಇನ್ನೂಳಿದ ರೈತರ ಸಾಲ ಮನ್ನಾಕ್ಕೆ ಇನ್ನೂ 50 ಕೋಟಿ ರೂ. ಬರಬೇಕಿದೆ.
ಹಿಂದಿನ ಸಮ್ಮಿಶ್ರ ಸರಕಾರ ಬಜೆಟ್‌ನಲ್ಲಿ 2018-19ರಲ್ಲಿ ಘೋಷಣೆ ಮಾಡಿದ್ದ ಸಾಲ ಮನ್ನಾ ಹಣ ಒಂದಷ್ಟು ರೈತರಿಗೆ ಕಳೆದ ಡಿಸೆಂಬರ್ ಒಳಗೇ ಬಂದಿದ್ದರೆ, ಇನ್ನು ಕೆಲವಷ್ಟು ರೈತರಿಗೆ ಅನೇಕ ತಗಾದೆಯ ಕಾರಣ ಮಂಜೂರಾತಿ ಆಗಿರಲಿಲ್ಲ. ಕುಟುಂಬದಲ್ಲಿ ಐಟಿ ಪಾವತಿದಾರರು ಇದ್ದರೆ, ರೇಶನ್ ಕಾರ್ಡ್‌ನಲ್ಲಿ ಹೆಸರು ಸರಿ ಇರದೇ ಇದ್ದರೆ, ಸಾಲ ಪಡೆದವರು ಬೇರೆ ಇದ್ದರೂ ರೇಶನ್ ಕಾರ್ಡ್ ಒಂದೇ ಆಗಿದ್ದರೆ ಬೆಳೆಸಾಲ ಮನ್ನಾ ಆಗಿರಲಿಲ್ಲ. ಇದರಿಂದ ಅನೇಕ ಅರ್ಹ ರೈತರಿಗೂ ಅನ್ಯಾಯ ಆಗಿತ್ತು.
2019ರ ಸಾಲಮನ್ನಾ ಯೋಜನೆಯಡಿಯಲ್ಲಿ ಇಂತಹ ಅನೇಕ ತಾಂತ್ರಿಕ ಕಾರಣಗಳಿಂದ ಬಹಳಷ್ಟು ಜನ ರೈತರ ಸಾಲ ಮನ್ನಾ ಆಗದೆ ತೊಂದರೆ ಅನುಭವಿಸಿದ್ದಾರೆ ಎಂದು ಅನೇಕ ರೈತರು ಸರಕಾರದ ಗಮನಕ್ಕೆ ತಂದಿದ್ದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್ ಕೂಡ ಸಿಎಂ ಗಮನಕ್ಕೆ ತಂದಿದ್ದರು. ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಘೋಕ್ಲೃಕರ್ ಹಣ ಬಿಡುಗಡೆಗೆ ಆಗ್ರಹಿಸಿದ್ದರು.
ಕೆಡಿಸಿಸಿ ಬ್ಯಾಂಕ್ ಮೂಲಕ 86 ಸಾವಿರದಷ್ಟು ರೈತರು ಬೆಳೆಸಾಲ ಪಡೆದಿದ್ದರು. ಈ ಪೈಕಿ 77 ಸಾವಿರದಷ್ಟು ರೈತರಿಗೆ ಸಾಲಮನ್ನಾ ಲಕ್ಷ ರೂ. ತನಕ ಆಗಿತ್ತು. ಆದರೆ, ಐಟಿ ಪಾವತಿದಾರರು ರೈತನ ಕುಟುಂಬದಲ್ಲಿ ಇದ್ದರೆ, ರೇಶನ್ ಕಾರ್ಡ್ ಒಂದೇ ಆಗಿದ್ದರೆ ಇಂತಹ ಕಾರಣ ಇಟ್ಟು ಮಂಜೂರಾತಿ ಆಗದೇ ಇದ್ದವರಲ್ಲಿ ಇದೀಗ ಸರಕಾರ ಜಿಲ್ಲೆಗೆ 7 ಕೋಟಿ ರೂ. ಬಿಡುಗಡೆಗೊಳಿಸಿದೆ. 1100 ರೈತರಿಗೆ ಇದರಿಂದ ಅಂತೂ ಬಂತು ಎಂಬಂತಾದರೂ ಉಳಿದ ಎಂಟೊಂಬತ್ತು ಸಾವಿರ ರೈತರ ಖಾತೆಗೆ 50 ಕೋಟಿ ರೂ. ಹಣ ಬರಬೇಕಿದೆ.
ಈ ಮಧ್ಯೆ ಕೆಡಿಸಿಸಿ ಬ್ಯಾಂಕ್‌ಗೂ ಸಾಲ ಮನ್ನಾ ಹಣ ವಿಳಂಬವಾಗಿ ಬರುವುದರಿಂದ 11 ಕೋಟಿ ರೂ.ಗಳಷ್ಟು ಬಡ್ಡಿ ಹಾನಿಯೂ ಆಗಿದೆ. ರೈತರು ಕೋವಿಡ್ ಕಷ್ಟದಲ್ಲಿ ಇರುವ ಕಾರಣ ತಕ್ಷಣ ಇಂಥ ವಿಷಯದಲ್ಲಿ ಸ್ಪಂದಿಸಬೇಕು ಎಂಬ ಆಗ್ರಹ ಕೂಡ ವ್ಯಕ್ತವಾಗಿದೆ.
ಬಿಟ್ಟು ಹೋಗಿರುವ ರೈತರ ಸಾಲಮನ್ನಾ ಹಣವನ್ನೂ ಬಿಡುಗಡೆಗೊಳಿಸಬೇಕು. ಅನ್ಯಾಯಕ್ಕೊಳಗಾದ ರೈತರಿಗೆ ನ್ಯಾಯ ಕೊಡಬೇಕು. –
ಜಿ.ಆರ್. ಹೆಗಡೆ ಬೆಳ್ಳೇಕೇರಿ, ಅಧ್ಯಕ್ಷರು, ಕಾನಗೋಡ ಗ್ರೂಪ್ ವಿವಿಧೋದ್ದೇಶಗಳ ಸಹಕಾರಿ ಸಂಘ ಯಡಳ್ಳಿ
-ರಾಘವೇಂದ್ರ ಬೆಟ್ಟಕೊಪ್ಪ