Advertisement

ಬೆಳೆ ಸಮೀಕ್ಷೆ: ಯುವಕರ ಕೈಸೇರದ ಸಂಭಾವನೆ

12:30 AM Jan 17, 2019 | Team Udayavani |

ಸುಬ್ರಹ್ಮಣ್ಯ: “ನಿರುದ್ಯೋಗಿ ಯುವಕರ ಸಂಪಾದನೆಗೆ ಸುವರ್ಣಾವಕಾಶ; ಮೊಬೈಲ್‌ನಲ್ಲಿ ಕಾಲಹರಣ ಮಾಡುವ ಬದಲು ಮುಂಗಾರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ ಹಣ ಗಳಿಸಿ’ ಎಂಬಿತ್ಯಾದಿ ಹೇಳಿಕೆಗಳ ಮೂಲಕ ನಿರುದ್ಯೋಗಿ ಯುವಕರಲ್ಲಿ ಆಸೆ ಹುಟ್ಟಿಸಿ ಮುಂಗಾರು ಬೆಳೆ ಸಮೀಕ್ಷೆ ಮಾಡಿಸಿಕೊಂಡಿದ್ದ ಸರಕಾರ ಇದೀಗ ಸಂಭಾವನೆ ನೀಡದೆ ಸತಾಯಿಸುತ್ತಿದೆ.

Advertisement

ಪ್ರಸಕ್ತ ಸಾಲಿನಲ್ಲಿ ಮುಂಗಾರು ಬೆಳೆ ಸಮೀಕ್ಷೆಯನ್ನು ಸರಕಾರಿ ಸಿಬಂದಿ ಜತೆ ಖಾಸಗಿ ನಿರುದ್ಯೋಗಿ ಯುವಕರ ಕೈಯಲ್ಲಿ ಮಾಡಿಸಲಾಗಿತ್ತು. ಸಮೀಕ್ಷೆ ಪೂರ್ಣಗೊಂಡು ಮೂರು ತಿಂಗಳಾ ದರೂ ಸಂಭಾವನೆ ಕೈಸೇರಿಲ್ಲ.

ಏಕೆ ಈ ಕ್ರಮ?
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೃಷಿಕರ ಮುಂಗಾರು ಪೂರ್ವ ಬೆಳೆ ಸಮೀಕ್ಷೆ ನಡೆಸಲು ರಾಜ್ಯ ಸರಕಾರ ನಿರ್ಧರಿಸಿತ್ತು. ಕಳೆದ ಬಾರಿ ಗ್ರಾಮ ಲೆಕ್ಕಿಗರ ಮೂಲಕ ಸಮೀಕ್ಷೆ ಕೈಗೊಂಡಿತ್ತು. ಇದರಿಂದ ಎರಡು ತಿಂಗಳ ಅವಧಿ ಅವರಿಗೆ ಬೇರೆ ಕರ್ತವ್ಯ ನಿರ್ವಹಿಸಲು ಅಡ್ಡಿಯಾಗುತ್ತದೆಂಬ ಕಾರಣಕ್ಕೆ ಈ ಬಾರಿ ಆಯಾ ಗ್ರಾಮದ ಖಾಸಗಿ ವ್ಯಕ್ತಿಗಳನ್ನು ಬೆಳೆ ಸಮೀಕ್ಷೆಗಾಗಿ ನಿಯೋಜಿಸಲಾಗಿತ್ತು.

422 ಗ್ರಾಮಗಳಲ್ಲಿ ಸಮೀಕ್ಷೆ 
ಪ್ರತಿ ಸರ್ವೆ ನಂಬರಿನ ಸಮೀಕ್ಷೆಗೆ ತಲಾ 10 ರೂ. ಸಂಭಾವನೆಯನ್ನು ನಿಗದಿ ಪಡಿಸಲಾಗಿತ್ತು. ದ.ಕ. ಜಿಲ್ಲೆಯ 422 ಗ್ರಾಮಗಳಲ್ಲಿ ಸಮೀಕ್ಷೆ ಮಾಡಲು 1,250 ಖಾಸಗಿ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.

ಸೆಪ್ಟಂಬರ್‌ನಲ್ಲಿ ಸಮೀಕ್ಷೆಗೆ ಬಳಸಿ ಕೊಂಡಿದ್ದು, ಎರಡು ಬಾರಿ ತರಬೇತಿ ನೀಡಲಾಗಿತ್ತು. ಬಳಿಕ ಯುವಕರು ರೈತರ ಮನೆ, ಕೃಷಿ ಭೂಮಿಗಳಿಗೆೆ ತೆರಳಿ ಮೊಬೈಲ್‌ನಲ್ಲಿ ಆ್ಯಪ್‌ ಮೂಲಕ ಮಾಹಿತಿ ಪಡೆದುಕೊಂಡು ಹಿಂದಿರುಗಿದ್ದರು. ಇದರಿಂದ ರೈತರಿಗೆ ವಿಮ ಪರಿಹಾರ ನೀಡಲು ಸರಕಾರಕ್ಕೆ ಅನುಕೂಲವಾಗಿತ್ತು.

Advertisement

ಬಣ್ಣದ ಭರವಸೆ!
ಸಮೀಕ್ಷೆ ಪೂರ್ಣವಾದ ತತ್‌ಕ್ಷಣದಲ್ಲಿ ಹಣ ನಿಮ್ಮ ಖಾತೆಗೆ ಸಂದಾಯವಾಗುತ್ತದೆ ಎಂದು ಯುವಕರ ಕೈಯಿಂದ ಆಧಾರ್‌ ಕಾರ್ಡ್‌, ಬ್ಯಾಂಕು ಖಾತೆ ವಿವರಗಳನ್ನು ಅಧಿಕಾರಿಗಳು ಕಲೆಹಾಕಿದ್ದರು. ಉತ್ತಮ ನಿರ್ವಹಣೆ ತೋರಿದ ಯುವಕರಿಗೆ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ತಾತ್ಕಾಲಿಕವಾಗಿ ಅವಕಾಶ ನೀಡುವುದಾಗಿಯೂ ಅಧಿಕಾರಿಗಳು ಭರವಸೆ ನೀಡಿದ್ದರು. ಅದೂ ಈಡೇರಿಲ್ಲ ಎಂದು ಯುವಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಮಾಹಿತಿ ಕೇಳುತ್ತೇವೆ
ಸಮೀಕ್ಷೆಯಲ್ಲಿ ಭಾಗವಹಿಸಿದ ಯುವಕರಿಗೆ ಸರಕಾರದಿಂದ ನೀಡಬೇಕಿರುವ ಸಂಭಾವನೆ ವಿಳಂಬ ವಿಚಾರವಾಗಿ ತಾಲೂಕು ದಂಡಾಧಿಕಾರಿಗಳ ಬಳಿಯಿಂದ ಮಾಹಿತಿ ಪಡೆಯಲಾಗುವುದು.
– ಎಚ್‌.ಕೆ. ಕೃಷ್ಣ ಮೂರ್ತಿ, ಸ. ಆಯುಕ್ತರು, ಪುತ್ತೂರು

ಹಣ ಬಂದಿಲ್ಲ
ಸಮೀಕ್ಷೆ ವೇಳೆ ಪಹಣಿ ಪತ್ರವೊಂದಕ್ಕೆ ತಲಾ 10 ರೂ.ನಂತೆ ಸಂಭಾವನೆ ನೀಡಲಾಗುವುದು ಎಂದಿದ್ದರು. ಆದರೆ ಇಂದಿನ ವರೆಗೆ ಹಣ ನಮಗೆ ದೊರಕಿಲ್ಲ.
– ಆದರ್ಶ, ಸಮೀಕ್ಷೆಯಲ್ಲಿ ಪಾಲ್ಗೊಂಡ ಯುವಕ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next