ಹಾವೇರಿ: ಕಿಸಾನ್ ಸಮ್ಮಾನ್ ಯೋಜನೆಯಡಿ ಸರ್ಕಾರ ಒಂದು ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ರಾಜ್ಯದ 50 ಲಕ್ಷ ರೈತರ ಖಾತೆಗೆ ಇಂದಿನಿಂದ ಹಣ ಜಮೆ ಆಗಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ತಾಲೂಕಿನ ಅಗಡಿ ಗ್ರಾಮದ ರೈತ ನಾಗಪ್ಪ ಬಸೇಗಣ್ಣಿ ಅವರ ಜಮೀನಿನಲ್ಲಿ ಬೆಳೆ ಸಮೀಕ್ಷೆ ಕಾರ್ಯಕ್ರಮ ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬೆಳೆ ಸಮೀಕ್ಷೆ ಉತ್ಸವ ರೈತರಿಗೆ ಸುವರ್ಣಾವಕಾಶವಾಗಿದೆ. ಭಾರತದಲ್ಲೇ ಪ್ರಪ್ರಥಮ ಬಾರಿಗೆ ರೈತರು ತಮ್ಮ ಬೆಳೆಯನ್ನು ತಾವೇ ಸಮೀಕ್ಷೆ ಮಾಡಿ ಫೋಟೋ ತೆಗೆದು ಮೊಬೈಲ್ ಆ್ಯಪ್ ಮೂಲಕ ಮಾಹಿತಿಯನ್ನು ಅಪ್‌ಲೋಡ್ ಮಾಡುವ ವಿನೂತನ ಯೋಜನೆಯನ್ನು ರಾಜ್ಯ ಸರ್ಕಾರ ಈ ವರ್ಷದಿಂದ ಜಾರಿಗೆ ತಂದಿದೆ. ರೈತರಿಗೆ ತಮ್ಮ ಬೆಳೆಯನ್ನು ತಾವೇ ದೃಢೀಕರಿಸಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂದರು.
ಮೊಬೈಲ್ ಮೂಲಕ ಬೆಳೆ ಸಮೀಕ್ಷೆ ಕಾರ್ಯ ಕಳೆದ ಮೂರು ವರ್ಷದಿಂದ ರಾಜ್ಯದಲ್ಲಿ ಜಾರಿಯಲ್ಲಿದ್ದರೂ ಪ್ರತಿ ವರ್ಷ ಪಿಆರ್ ಗಳ ಮೂಲಕ (ಖಾಸಗಿ ಪ್ರತಿನಿಧಿ ) ಸರ್ವೇ ನಂಬರ್ ಆಧಾರದಲ್ಲಿ ಬೆಳೆ ಸಮೀಕ್ಷೆಯನ್ನು ಮಾಡಲಾಗುತ್ತಿತ್ತು. ಇದರಿಂದ ಹಿಸ್ಸೆ ಪ್ಲಾಟ್ ಗಳ ರೈತರ ಬೆಳೆ ಸಮೀಕ್ಷೆಯಿಂದ ಕೈತಪ್ಪಿ ಹೋಗಿ ಪರಿಹಾರ ಪಡೆಯಲು ತೊಂದರೆಯಾಗುತ್ತಿತ್ತು. ಈ ಗೊಂದಲ, ತೊಂದರೆಯನ್ನು ನೂತನ ಬೆಳೆ ಸಮೀಕ್ಷೆ ಪದ್ಧತಿಯಿಂದ ನಿವಾರಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 2.10 ಕೋಟಿ ಖಾತೆಗಳ ಪೈಕಿ 1.50 ಕೋಟಿ ಖಾತೆಗಳು ಮಾತ್ರ ಹಿಸ್ಸಾ ಪೋಡಿಗಳಾಗಿವೆ. ಉಳಿದ ಖಾತೆಗಳ ಪೋಡಿಯಾಗದ ಕಾರಣ ಮಾಹಿತಿ ಲಭ್ಯವಾಗುತ್ತಿರಲಿಲ್ಲ. ಈ ಗೊಂದಲವನ್ನು ನಿವಾರಿಸಿ ಹೊಸ ಬೆಳೆ ಸಮೀಕ್ಷೆ ಜಾರಿಗೆ ತರಲಾಗಿದೆ. ಹಿಸ್ಸಾವಾರು ಅಣ್ಣ-ತಮ್ಮಂದಿರು ತಮ್ಮ ಭಾಗಕ್ಕೆ ಬಂದ ಜಮೀನಿನಲ್ಲಿ ಬೆಳೆದ ಬೆಳೆಯ ಫೋಟೋ ತೆಗೆದು ಮೊಬೈಲ್ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಆಂಡ್ರೆ„ಡ್ ಮೊಬೈಲ್ ಇಲ್ಲದ ರೈತರಿಗೆ ಖಾಸಗಿ ಪ್ರತಿನಿಧಿ ಗಳು ನೆರವು ನೀಡಲಿದ್ದಾರೆ. ಈ ಉದ್ದೇಶಕ್ಕಾಗಿ ಪಿಆರ್ ಒಗಳನ್ನು ನೇಮಕ ಮಾಡಲಾಗಿದೆ. ಕಂದಾಯ, ತೋಟಗಾರಿಕೆ, ರೇಷ್ಮೆ, ಕೃಷಿ ಇಲಾಖೆಗಳ ಸಹಭಾಗಿತ್ವದಲ್ಲಿ ಬೆಳೆ ವಿಮೆ ಸಮೀಕ್ಷೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
ಯೂರಿಯಾ ಗೊಬ್ಬರದ ಸಮಸ್ಯೆ ಕುರಿತಂತೆ ವಿವರಿಸಿದ ಸಚಿವರು, ಏಪ್ರಿಲ್‌ನಿಂದ ಜುಲೈ ವರೆಗೆ 72,200 ಸಾವಿರ ಮೆಟ್ರಿಕ್ ಟನ್, ಈವರೆಗೆ 82,856 ಮೆಟ್ರಿಕ್ ಟನ್ ಗೊಬ್ಬರ ಹಂಚಿಕೆ ಮಾಡಲಾಗಿದೆ. 10656 ಮೆಟ್ರಿಕ್ ಟನ್ ನಿಗದಿತ ಗುರಿಗಿಂತ ಹೆಚ್ಚುವರಿಯಾಗಿ ವಿತರಣೆ ಮಾಡಲಾಗಿದೆ. ಈಗಲೂ ಸಹ ಬೇಡಿಕೆಗೆ ತಕ್ಕಂತೆ ಗೊಬ್ಬರ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಕೃತಕ ಅಭಾವ ಸೃಷ್ಟಿಸುವವರ ಮೇಲೆ ಹಾಗೂ ಹೆಚ್ಚು ದರ ವಸೂಲಿ ಮಾಡುವವರ ಮೇಲೆ ಕೃಷಿ ಜಾಗೃತ ದಳ ನಿಗಾ ವಹಿಸಿದೆ ಎಂದರು.ಇದೇ ಸಂದರ್ಭದಲ್ಲಿ ಸಚಿವರು ಬೆಳೆ ಸಮೀಕ್ಷೆ ಪ್ರಚಾರ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿದರು ಹಾಗೂ ಬೆಳೆ ಸಮೀಕ್ಷೆ ವಾಹನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ನೆಹರು ಓಲೇಕಾರ, ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ, ಉಪನಿರ್ದೇಶಕರಾದ ಸ್ಫೂರ್ತಿ ಹಾಗೂ ಕರಿಯಲ್ಲಪ್ಪ, ರೈತ ಪ್ರತಿನಿಧಿಗಳು ಇದ್ದರು.