Advertisement

ಬೆಳೆ ಸಮೀಕ್ಷೆ: ಪ್ರಥಮ ಬಾರಿಗೆ ಡ್ರೋಣ್‌ ಬಳಕೆ

06:00 AM Aug 02, 2018 | |

ಹಾವೇರಿ: ಯಾವ ಕ್ಷೇತ್ರದಲ್ಲಿ ಯಾವ ಬೆಳೆ ಇದೆ? ಯಾವ ಪ್ರಮಾಣದಲ್ಲಿದೆ? ಅವುಗಳ ಆರೋಗ್ಯ ಹೇಗಿದೆ? ಬೆಳೆ ವಿಸ್ತೀರ್ಣವೆಷ್ಟು? ಹೀಗೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಕಲೆ ಹಾಕಲು ಸರ್ಕಾರ ಅತ್ಯಾಧುನಿಕ ತಂತ್ರಜ್ಞಾನದ ಡ್ರೋಣ್‌ ಬಳಸಿ ಸಮೀಕ್ಷೆ ಮಾಡಲು ನಿರ್ಧರಿಸಿದೆ.

Advertisement

ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಕೃಷಿ ಕ್ಷೇತ್ರದಲ್ಲಿ ಮಾನವ ರಹಿತ ವೈಮಾನಿಕ ಸಮೀಕ್ಷೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಡ್ರೋಣ್‌ ತಂತ್ರಜ್ಞಾನ ಬಳಸುತ್ತಿದೆ. ಜಿಲ್ಲೆಯಲ್ಲಿ ಬೆಳೆಗಳ ಬಗ್ಗೆ ಅಸ್ಪಷ್ಟ ಮಾಹಿತಿ, ಅಂಕಿ-ಅಂಶಗಳ ಕೊರತೆ, ಬೆಳೆ ವಿಮೆ ವಿತರಣೆಯಲ್ಲಿನ ಗೊಂದಲ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಪ್ರಾಯೋಗಿಕ ವೈಮಾನಿಕ ಮಾನವ ರಹಿತ ಸಮೀಕ್ಷೆಗೆ ಹಾವೇರಿ ತಾಲೂಕನ್ನು ಆಯ್ದುಕೊಂಡಿದೆ. ಈ ವೈಮಾನಿಕ ಸಮೀಕ್ಷೆಗೆ ಆ.2ರಂದು ಚಾಲನೆ ಸಿಗಲಿದೆ.

ಹಾವೇರಿ ತಾಲೂಕಿನ ಕಸಬಾ ಹೋಬಳಿಯಲ್ಲಿನ 200 ಚದರ ಕಿ.ಮೀ. ಪ್ರದೇಶದಲ್ಲಿನ ಬೆಳೆಗಳ ವಿಧ, ಅವುಗಳ ಪ್ರದೇಶ ವಿಸ್ತೀರ್ಣ, ಬೆಳೆ ಆರೋಗ್ಯ ಹಾಗೂ ಇಳುವರಿಯ ಪ್ರಾಥಮಿಕ ವರದಿ ಬಗ್ಗೆ 3 ತಿಂಗಳ ಕಾಲ ಮುಂಗಾರು ಋತುವಿನಲ್ಲಿ ಡ್ರೋಣ್‌ ಕಾರ್ಯಾಚರಣೆ ಮೂಲಕ ಸಮೀಕ್ಷೆ ನಡೆಯಲಿದೆ. ಇದು ಆರಂಭದಿಂದ ಬೆಳೆ ಕಟಾವಿನ ತನಕ 3 ಹಂತದಲ್ಲಿ ಸಮೀಕ್ಷೆ ನಡೆಸಲಿದೆ. ಸಮೀಕ್ಷೆಯಲ್ಲಿ ತ್ರಿಡಿ ಚಿತ್ರಗಳನ್ನು ಸೆಳೆಯುವ ಮೂಲಕ ಬೆಳೆಗಳ ಸ್ಥಿತಿಗತಿ, ನೆರೆ, ಬರ, ಕೀಟಬಾಧೆ ಹೀಗೆ ಇನ್ನಿತರ ಸಮಗ್ರ ಮಾಹಿತಿ ದಾಖಲಾಗಿ ಬೆಳೆ ನಷ್ಟ ಪರಿಹಾರ, ಬೆಳೆವಿಮೆ ಹೀಗೆ ಇನ್ನಿತರ ಸೌಲಭ್ಯ ನೀಡಲು ಅನುಕೂಲವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಮೂರು ವಿಭಾಗ: ಈ ರೀತಿಯ ತಂತ್ರಜ್ಞಾನ ಬಳಸಿಕೊಂಡು ಸಮೀಕ್ಷೆ ಮಾಡಲು ಕೃಷಿ, ನಗರಾಭಿವೃದ್ಧಿ ಹಾಗೂ ಪೊಲೀಸ್‌ ನಾಗರಿಕ ಕಾರ್ಯಾಚರಣೆ ವಿಭಾಗ ಆಯ್ದುಕೊಂಡಿದೆ. ಕೃಷಿಗಾಗಿ ಹಾವೇರಿ ಜಿಲ್ಲೆಯಲ್ಲಿ ಆಯ್ದುಕೊಂಡರೆ, ನಗರಾಭಿವೃದ್ಧಿ ಸಮೀಕ್ಷೆಗಾಗಿ ಬಂಟ್ವಾಳ ಪಟ್ಟಣ, ಪೊಲೀಸ್‌ ನಾಗರಿಕ ಕಾರ್ಯಾಚರಣೆಗಾಗಿ ಬೆಂಗಳೂರು ನಗರವನ್ನು ಆಯ್ದುಕೊಂಡಿದೆ.

ನಗರಾಭಿವೃದ್ಧಿ ವಿಭಾಗದಲ್ಲಿ ಡ್ರೋಣ್‌ ತಂತ್ರಜ್ಞಾನವನ್ನು ಪಟ್ಟಣದ ವಿಸ್ತ್ರತ ನಕ್ಷೆ, ಆಸ್ತಿ ತೆರಿಗೆ ಸೇರಿದಂತೆ ಇನ್ನಿತರ ಮಾಹಿತಿ ಕಲೆ ಹಾಕಲು ಬಳಸಲಾಗುತ್ತಿದೆ. ಇನ್ನು ಪೊಲೀಸ್‌ ನಾಗರೀಕ ಕಾರ್ಯಾಚರಣೆಯಲ್ಲಿ ಜನದಟ್ಟಣೆ ಸ್ಥಳ, ಕಾರ್ಯಕ್ರಮ, ಸೂಕ್ಷ್ಮಪ್ರದೇಶಗಳಲ್ಲಿನ ಚಲನವಲನ ನಿಗಾ ವಹಿಸಲು ಬಳಸಲು ನಿರ್ಧರಿಸಲಾಗಿದೆ.

Advertisement

ಇತ್ತೀಚಿನ ದಿನಗಳಲ್ಲಿ ಮಾನವರಹಿತ ವೈಮಾನಿಕ ವ್ಯವಸ್ಥೆ ಅಥವಾ ಡ್ರೋಣ್‌ ತಂತ್ರಜ್ಞಾನ ಹೆಚ್ಚು ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ, ಡಾ|ಕೆ. ಕಸ್ತೂರಿರಂಗನ್‌ ಅಧ್ಯಕ್ಷತೆಯಲ್ಲಿ ಸ್ಥಾಪಿಸಿರುವ ಕರ್ನಾಟಕ ಜ್ಞಾನ ಆಯೋಗದ ಶಿಫಾರಸಿನನ್ವಯ ಈ ಯೋಜನೆ ಅನುಷ್ಠಾನಗೊಳಿಸುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯು ಸಂಬಂಧಿ ತ ಇಲಾಖೆಗಳ ಸಹಯೋಗದೊಂದಿಗೆ ಈ ನವೀನ ಡ್ರೋಣ್‌ ಆಧಾರಿತ ಯೋಜನೆ ಕೈಗೊಂಡಿದೆ. ದೆಹಲಿಯ ಡ್ರೋಣ್‌ ಕಂಪನಿ ಆಮ್ನಿಪ್ರಸೆಂಟ್‌ ರೊಬೋಟ್‌ ಟೆಕ್ನಾಲಜಿಸ್‌ ಮೂಲಕ ಇದನ್ನು ಅನುಷ್ಠಾನಗೊಳಿಸಲಾಗುತ್ತಿದ್ದು,ಇದಕ್ಕಾಗಿ ಸರ್ಕಾರ 2.50 ಕೋಟಿ ರೂ. ಅನುದಾನ ನೀಡಿದೆ.

ಬೆಳೆಯ ಸಮಗ್ರ ಮಾಹಿತಿ ಸಮೀಕ್ಷೆ ಮೂಲಕ ದಾಖಲಾಗಿ, ಬೆಳೆ ಪರಿಹಾರ, ವಿಮೆ ಸಮರ್ಪಕ ವಿತರಣೆ ಹಾಗೂ ಇನ್ನಿತರ ಅಗತ್ಯ ಸೌಲಭ್ಯ ಪಡೆಯಲು ಸಮೀಕ್ಷೆ ಸಹಕಾರಿಯಾಗಲಿದೆ.
– ಸದಾಶಿವ,ಜಂಟಿ ನಿರ್ದೇಶಕರು,ಕೃಷಿ ಇಲಾಖೆ.

ಇಂದು ಚಾಲನೆ
ಮಾನವರಹಿತ ವೈಮಾನಿಕ ವ್ಯವಸ್ಥೆ ಪ್ರಾಯೋಗಿಕ ಯೋಜನೆ ಉದ್ಘಾಟನಾ ಸಮಾರಂಭ ಆ. 2ರಂದು ಬೆಳಿಗ್ಗೆ 11 ಗಂಟೆಗೆ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆಯಲಿದೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

– ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next