Advertisement

ರೈತರ ಸಮಸ್ಯೆಗಳಿಗೆ ಬೆಳೆ ಸಮೀಕ್ಷೆ ಆ್ಯಪ್‌ ಪರಿಹಾರ

05:03 PM Aug 21, 2021 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಮುಂಗಾರು ಬೆಳೆ ಸಮೀಕ್ಷೆ-2021 ಮೊಬೈಲ್‌ ಆ್ಯಪ್‌ ಅಧಿಕೃತವಾಗಿ ಆರಂಭಗೊಂಡಿದ್ದು, ರೈತರು ತಮ್ಮ ಬೆಳೆಗಳನ್ನು ಅಪ್‌ಲೋಡ್‌ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಬಾರಿ ಶೇ.100 ಅಪ್‌ಲೋಡ್‌ ಮಾಡುವ ಗುರಿ ಹೊಂದಲಾಗಿದೆ.

Advertisement

ಬೆಳೆ ಸಮೀಕ್ಷೆ ಆ್ಯಪ್‌: ನನ್ನ ಬೆಳೆ ನನ್ನ ಹಕ್ಕು ಇದು ರೈತರೇ ಸ್ವತಃ ತಾನು ಬೆಳೆದ ಬೆಳೆಯ ಸಮೀಕ್ಷೆ ಮಾಡುವುದು. ತಾನು ಬೆಳೆದ ಬೆಳೆಯನ್ನು ಸಮೀಕ್ಷೆ ಮಾಡಿ ಬೆಳೆಯ ಮಾಹಿತಿ ವಿವರವನ್ನು ಸರ್ಕಾರಕ್ಕೆ ವರದಿ ನೀಡುವ ನಿಟ್ಟಿನಲ್ಲಿ ಬೆಳೆ ಸಮೀಕ್ಷೆ ಮೊಬೈಲ್‌ ಆ್ಯಪ್‌ ಅಭಿವೃದ್ಧಿ ಪಡಿಸಲಾಗಿದೆ. ರೈತರಿಂದಲೇ ಬೆಳೆ ಸಮೀಕ್ಷೆ ಕಾರ್ಯ ಮಾಡಿಸಬೇಕು ಎಂಬ ಉದ್ದೇಶದಿಂದ ಬೆಳೆ ಸಮೀಕ್ಷೆ ಕಾರ್ಯ ಪ್ರಾರಂಭ ಮಾಡಲಾಗಿದೆ. ಈ ಬಾರಿ 1,28,096 ತಾಲೂಕುಗಳನ್ನು ಬೆಳೆ ಸಮೀಕ್ಷೆಗೆ ಒಳಪಡಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಳೆ ಸಮೀಕ್ಷೆ ಮಹತ್ವ: ಕೃಷಿ,ತೋಟಗಾರಿಕೆ, ರೇಷ್ಮೆ ಇಲಾಖೆಗಳಿಂದ ರೈತರಿಗೆ ಯಾವುದೆ ಸೌಲಭ್ಯ ನೀಡಲು ಪಹಣಿಯಲ್ಲಿ ಯಾವ ಬೆಳೆ ದಾಖಲಾಗಿದೆ ಎನ್ನುವುದರ ಆಧಾರದ ಮೇಲೆ ನೀಡುವ ವಿಧಾನ ಇಷ್ಟು ದಿನಗಳ ಕಾಲ ಇತ್ತು. ಅತಿವೃಷ್ಟಿಯಿಂದ ಬೆಳೆ ಹಾಳಾದರೆ, ಬರ
ಪರಿಹಾರ, ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳ ಖರೀದಿಸಲು ಪಹಣಿಯಲ್ಲಿ ಬೆಳೆ ನಮೂದಿಸುವುದು ಕಡ್ಡಾಯವಾಗಿತ್ತು. ಆದರೆ ಸರಿಯಾದ ಸಮಯಕ್ಕೆ ಪಹಣಿಯಲ್ಲಿ ಬೆಳೆ ನಮೂದಾಗದೆ ಸರ್ಕಾರಿ ಸೌಲಭ್ಯ ಪಡೆಯುವಲ್ಲಿ ರೈತರು ವಂಚಿತರಾಗುತ್ತಿದ್ದರು. ಇದನ್ನು ತಪ್ಪಿಸಲು ಬೆಳೆ ಸಮೀಕ್ಷೆ ಆಪ್‌ ಸಹಾಯಕವಾಗಿದೆ.

ಎನ್‌ಡಿಆರ್‌ಎಫ್‌,ಎಸ್‌ಡಿಆರ್‌ಎಫ್‌ ಯೋಜನೆಗಳಡಿ ಇನ್‌ಪುಟ್‌ ಸಬ್ಸಿಡಿ ಯೋಜನೆಯಲ್ಲಿ ಫಲಾನುಭವಿಗಳ ಪಟ್ಟಿ ತಯಾರಿಸುವುದು, ತೊಗರಿ ಮತ್ತು ಇತರೆ ಬೆಳೆಗಳಿಗೆ ಕೊಡುವ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸಲು, ಬೆಳೆ ವಿಮೆ ಯೋಜನೆಯಲ್ಲಿ ರೈತರಿಂದ ವಿಮೆ ಮಾಡಲ್ಪಟ್ಟ ತಾಕುಗಳ ಬೆಳೆಗೆ ವಿರುದ್ಧವಾಗಿ ಬೆಳೆದ ತಾಕುಗಳ ಪರಿಶೀಲನೆ ಮಾಡಲು ಬಳಸಿಕೊಳ್ಳುವುದು. ಬ್ಯಾಂಕುಗಳಲ್ಲಿ ರೈತರಿಗೆ ಬೆಳೆ ಸಾಲವನ್ನು ಬೆಳೆ ಸಮೀಕ್ಷೆ ಆಧಾರಿತ ದತ್ತಾಂಶ ಪರಿಗಣಿಸಿ ಬೆಳೆ ಸಾಲಮಂಜೂರಿಗೆ ಸಹಾಯಕವಾಗುತ್ತದೆ. ಫಲಾನುಭವಿಗಳಿಗೆ ಸಕಾಲದಲ್ಲಿ ಬೆಳೆ ವಿಮೆ ಪಾವತಿಸಲು ಸಹಕಾರಿ ಎಂದು ಕೃಷಿ ಅಧಿಕಾರಿ ಹರೀಶ್‌ ತಿಳಿಸಿದರು.

ಫ್ರೂಟ್ಸ್‌ ಐಡಿಯಲ್ಲಿ ಮಾಹಿತಿ ಸಂಗ್ರಹ: ರೈತರು ಬೆಳೆ ಸಮೀಕ್ಷೆ ಆ್ಯಪ್‌ ಮೂಲಕ ಬೆಳೆಯ ಚಿತ್ರ ಸಮೇತ ಮಾಹಿತಿಯನ್ನು ದಾಖಲಿಸುತ್ತಿದ್ದಂತೆ ಫ್ರೂಟ್ಸ್‌ ಐಡಿಯಲ್ಲಿ ಮಾಹಿತಿ ಸಂಗ್ರಹವಾಗುತ್ತದೆ. ರೈತರು ಕೃಷಿ ಇಲಾಖೆ, ತೋಟಗಾರಿಕೆ, ರೇಷ್ಮೆ ಇಲಾಖೆ ಸೇರಿದಂತೆ ಯಾವುದಾದರು ಇಲಾಖೆಯಲ್ಲಿ ಪಹಣಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪುಸ್ತಕದ ನಕಲು ಪ್ರತಿಗಳನ್ನು ಸಲ್ಲಿಸಿ ಕಾಯಂ ಫ್ರೂಟ್ಸ್‌ ಐಡಿ ಪಡೆಯಬಹುದಾಗಿದೆ.

Advertisement

ಅತಿವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲಿ ಬೆಳೆ ನಷ್ಟದ ಪರಿಹಾರ ಪಡೆಯಲು ಬೆಳೆ ಸಮೀಕ್ಷೆ ನೆರವಾಗಲಿದೆ. ಬೆಳೆ ಸಮೀಕ್ಷೆ ಆ್ಯಪ್‌ ಮೂಲಕ ರೈತರು ದಾಖಲಿಸಿರುವ ಮಾಹಿತಿ ಬೆಳೆ ದರ್ಶಕ್‌ ಮೂಲಕ ತಾವೇ ಮೊಬೈಲ್‌ನಲ್ಲಿ ಪರಿಶೀಲನೆ ಮಾಡಿಕೊಳ್ಳಲು ಅವಕಾಶವಿದೆ.
-ಎನ್‌.ಸುಶೀಲಮ್ಮ, ತಾಲೂಕು ಸಹಾಯಕ
ಕೃಷಿ ನಿರ್ದೇಶಕಿ

Advertisement

Udayavani is now on Telegram. Click here to join our channel and stay updated with the latest news.

Next