ಯಳಂದೂರು: ಮೊಬೈಲ್‌ಗಳಲ್ಲಿ ಬೆಳೆ ಸಮೀಕ್ಷೆ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಬಳಸಿದರೆ ಸುಲಭವಾಗಿ ಸರ್ಕಾರಿ ಸೌಲಭ್ಯಗಳು ಲಭ್ಯವಾಗಲಿವೆ ಎಂದು ಶಾಸಕ ಎನ್. ಮಹೇಶ್ ತಿಳಿಸಿದರು.
ಪಟ್ಟಣದ ಕೃಷಿ ಇಲಾಖೆಯ ಕಚೇರಿಯಲ್ಲಿ ಸೋಮವಾರ ರೈತ ಫಲಾನುಭವಿಗಳಿಗೆ ಟ್ರಿಲ್ಲರ್ ವಿತರಣೆ ಹಾಗೂ ಬೆಳೆ ಸಮೀಕ್ಷೆ ಆ್ಯಪ್ ಪ್ರಾತ್ಯಕ್ಷಿಕೆ ತೋರಿಸಿ ಅವರು ಮಾತನಾಡಿ, ರೈತರು ಆ್ಯಪ್‌ನಲ್ಲಿ ತಮ್ಮ ಜಮೀನಿನ ಆರ್‌ಟಿಸಿ ನಂಬರ್, ಬೆಳೆದಿರುವ ಬೆಳೆಗಳು, ಜಮೀನಿನ ಬೆಳೆಗಳನ್ನು ಫೋಟೋ ಸಮೇತ ಅಪ್‌ಲೋಡ್ ಮಾಡಬೇಕು. ಆಗ ಇದು ನೇರವಾಗಿ ಇಲಾಖೆಗೆ ತಲುಪುತ್ತದೆ. ಸರ್ಕಾರದ ಸವಲತ್ತು ಗಳನ್ನು ಪಡೆಯಲು ಸುಲಭವಾಗುತ್ತದೆ. ಈ ಹಿಂದೆ ಬೆಳೆ ವಿಮೆಯಲ್ಲಿ ಆಗಿರುವ ಲೋಪಗಳು ಹೊಸ ತಂತ್ರಜ್ಞಾನದಿಂದ ಸರಿಯಾಗಲಿದೆ ಎಂದರು.
ಎಲ್ಲರಿಗೂ ಟ್ರಿಲ್ಲರ್: ತಾಲೂಕಿನ ಸಾಮಾನ್ಯ ವರ್ಗದ 13 ರೈತರಿಗೆ ಟ್ರಿಲ್ಲರ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಇದರ ಮೂಲ ದರ 1.80 ಲಕ್ಷ ರೂ. ಆಗಿದ್ದು, ರೈತರಿಗೆ 72.500 ರೂ. ಸಬ್ಸಿಡಿ ದೊರೆಯಲಿದೆ. ಅರ್ಜಿ ಸಲ್ಲಿಸಿದ ಎಲ್ಲರಿಗೂ ಟ್ರಿಲ್ಲರ್ ವಿತರಣೆ ಮಾಡಲಾಗುವುದು ಎಂದರು.
ಟ್ರಿಲ್ಲರ್ ವಿತರಣೆ ವಿಳಂಬ, ಗೊಂದಲ: ನಾಟಿ ಕಾರ್ಯ ಈಗಾಗಲೇ ಆರಂಭವಾಗಿದೆ. ಇದಕ್ಕೂ ಮುಂಚೆ ಟ್ರಿಲ್ಲರ್‌ಗಳನ್ನು ಇಲಾಖೆ ನೀಡಬೇಕು. 13 ರೈತ ಫಲಾನುಭವಿಗಳು ಆಯ್ಕೆಯಾಗಿದ್ದರೂ ಕೇವಲ 6 ಟ್ರಿಲ್ಲರ್ ಗಳನ್ನು ಮಾತ್ರ ನೀಡಲಾಗಿದೆ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕೃಷಿಕ ಸಮಾಜದ ಅಧ್ಯಕ್ಷ ಕೆಸ್ತೂರು ಮಾದೇಶ್ ಆರೋಪಿಸಿದರು. ಕೆಲ ಕಾಲ ಇಲಾಖೆಯ ಅಧಿಕಾರಿಗಳೊಂದಿಗೆ ವಾಗ್ವಾದವೂ ನಡೆಯಿತು. ನಂತರ ಶಾಸಕರು ಸಮಾಧಾನಪಡಿಸಿ ಎಲ್ಲರಿಗೂ ಟ್ರಿಲ್ಲರ್‌ಗಳನ್ನು ವಿತರಿಸಲು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ನಂತರ ಗೊಂದಲಕ್ಕೆ ತೆರೆಬಿದ್ದಿತು.
ಜಿಪಂ ಸದಸ್ಯ ಜೆ.ಯೋಗೇಶ್, ತಾಪಂ ಅಧ್ಯಕ್ಷ ಸಿದ್ದರಾಜು, ಸದಸ್ಯರಾದ ವೈ.ಕೆ.ಮೋಳೆ ನಾಗರಾಜು, ಪುಟ್ಟು, ಸಹಾಯಕ ಕೃಷಿ ನಿರ್ದೇಶಕ ಎಸ್. ಕೃಷ್ಣ, ಕೃಷಿ ಅಧಿಕಾರಿ ವೆಂಕಟರಂಗಶೆಟ್ಟಿ, ಆತ್ಮ ಯೋಜನೆಯ ಮಹೇಂದ್ರ ಇದ್ದರು.