ಮೈಸೂರು: ವಾರದಿಂದ ಕಾವೇರಿ ಮತ್ತು ಕಬಿನಿ ಜಲಾನಯನ ಪ್ರದೇಶದಲ್ಲಿ ಎಡಬಿಡದೆ ಮಳೆಯಿಂದಾಗಿ ಜಿಲ್ಲೆಯಲ್ಲಿ 1226 ಎಕರೆ ಪ್ರದೇಶದಲ್ಲಿ ಬೆಳೆ ನಷ್ಟವಾಗಿದ್ದು, 818 ಮನೆಗಲಿಗೆ ಹಾನಿ ಸಂಭವಿಸಿದೆ. 2064 ಮಂದಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಮೈಸೂರು ಡೀಸಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಈ ಮಧ್ಯೆ, ಕಪಿಲೆಯ ಪ್ರವಾಹ ಅರ್ಧಚಂದ್ರಾಕಾರವಾಗಿ ನಂಜನಗೂಡು ನಗರವನ್ನು ಸುತ್ತುವರಿದಿದ್ದು, ನಂಜನಗೂಡಿನಿಂದ ಟಿ.ನರಸಿಪುರ, ಚಾಮರಾಜನಗರ, ಮೈಸೂರು, ಹೆಗ್ಗಡದೇವನ ಕೋಟೆಗಳಿಗೆ ಸಂಪರ್ಕ ಕಡಿತಗೊಂಡಿದೆ. ಶ್ರೀಕಂಠೇಶ್ವರ ದೇವಾಲಯದ ಪಕ್ಕದ ಕಲ್ಯಾಣಿ ಪ್ರವಾಹದಿಂದ ಕಾಣೆಯಾಗಿದೆ.
ಹುಣಸೂರು ತಾಲೂಕು ಹನಗೋಡಿಗೆ ಸಮೀಪದ ಕಾಮಗೌಡನಹಳ್ಳಿಯ ಪರಿಹಾರ ಕೇಂದ್ರದಲ್ಲಿದ್ದ ಗರ್ಭಿಣಿ ಮನು ಎಂಬುವರು ಭಾನುವಾರ ಅಸ್ವಸ್ಥರಾಗಿದ್ದು, ಮಾಜಿ ಶಾಸಕ ಮಂಜುನಾಥ್ ಅವರು ತಮ್ಮ ಕಾರಿನಲ್ಲೇ ಅವರನ್ನು ಕರೆದುಕೊಂಡು ಹೋಗಿ ಹನಗೋಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಬ್ಬೂರಿನಲ್ಲಿ ಮನೆಯೊಳಗೆ ನೀರು ತುಂಬಿ ಆಘಾತಕ್ಕೊಳಗಾಗಿ ಅಸ್ವಸ್ಥಗೊಂಡಿದ್ದ ಕುಮಾರಿ ಎಂಬುವರನ್ನು ಹನಗೋಡು ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿ, ಮನೆಗೆ ಕಳುಹಿಸಲಾಗಿದೆ.
ಸತತ ಮಳೆಯಿಂದ ಈ ಭಾಗದಲ್ಲಿ ಮನೆಗಳು ಬೀಳುತ್ತಲೇ ಇವೆ. ವಿದ್ಯುತ್ ಸಂಪರ್ಕ ಇಲ್ಲದೆ ಜನ ರಾತ್ರಿ ವೇಳೆ ಹೆದರಿಕೆಯಿಂದ ಬಾಳುವಂತಾಗಿದೆ. ಹುಣಸೂರು ತಾಲೂಕಿನ ಹನಗೋಡು ಬಳಿಯ ಅಬ್ಬೂರು, ಶಿಂಡೇನಹಳ್ಳಿ ಗ್ರಾಮಸ್ಥರು ಈಗಲೂ ಬೋಟ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಕಿರಂಗೂರು ಗ್ರಾಮ ಜಲದಿಗ್ಬಂಧನಕ್ಕೊಳಗಾಗಿದೆ.
ಪಿರಿಯಾಪಟ್ಟಣ ತಾಲೂಕಿನ ಗಿರುಗೂರು ಬಳಿ 25ಕ್ಕೂ ಹೆಚ್ಚು ಕುಟುಂಬಗಳು ಜಲಾವೃತಗೊಂಡು ಸಂಕಷ್ಟದಲ್ಲಿವೆ. ಕುಶಾಲನಗರ ಮತ್ತು ಪಿರಿಯಾಪಟ್ಟಣ ನಡುವಿನ ಹೆದ್ದಾರಿಯಲ್ಲಿ ಕೊಪ್ಪ ಬಳಿ ಕಾವೇರಿ ನದಿಗೆ ನಿರ್ಮಿಸಿರುವ ಸೇತುವೆ ಮೇಲೆ ನೀರು ಹರಿಯುತ್ತಿರುವ ಕಾರಣ ಈ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿದೆ.