Advertisement

ಅಡಕೆ ಬೆಳೆಗೆ ಕೊಳೆರೋಗ

05:37 PM Aug 25, 2018 | |

ಯಲ್ಲಾಪುರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಗ್ರಾಮೀಣ ಭಾಗಗಳ ಅಡಕೆ ತೋಟದಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಅಡಕೆ ಮಿಡಿಗಳು ಉದುರುತ್ತಿರುವುದರಿಂದ ರೈತರು ಚಿಂತಿತರಾಗಿದ್ದಾರೆ. 

Advertisement

ಮಳೆಗಾಲದ ಪ್ರಾರಂಭದಲ್ಲಿ ಅಡಕೆಗೆ ತಿಗಣೆ ಕಾಟದಿಂದ ಅಡಕೆ ಮುಗುಡು ಹಾಗೂ ಮಿಳ್ಳೆಗಳು ರಾಶಿ ರಾಶಿಯಾಗಿ ಉದುರಿ, ಉದುರಿದ ಅಡಕೆಯ ಒಳಗಡೆ ಬಿಳಿ ಬಣ್ಣದ ಸಣ್ಣ ಕ್ರಿಮಿಗಳು ಕಂಡು ಬಂದು ರೈತರ ಚಿಂತೆಗೆ ಕಾರಣವಾಗಿತ್ತು. ನಿರಂತರ ಮಳೆಯ ಕಾರಣದಿಂದ ಆರಂಭದಲ್ಲಿ ಕೆಲವು ಭಾಗದಲ್ಲಿ ಮಾತ್ರ ಬಯೋಫೈಟ್‌ ಸಿಂಪಡಿಸಿದ್ದು ಬಿಟ್ಟರೆ ಬಹುತೇಕ ರೈತರಿಗೆ ಔಷಧಿ ಸಿಂಪಡಿಸಲು ಸಾಧ್ಯವಾಗಿಲ್ಲ. ಎಡಬಿಡದೇ ಮಳೆ ಸುರಿಯುತ್ತಿದ್ದು, ತೋಟದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಕೊಳೆರೋಗ ಕಾಣಿಸಿಕೊಂಡಿದೆ. ತಾಲೂಕಿನ ಬಾರೆ, ಮಲವಳ್ಳಿ, ಬೀಗಾರ, ಹೊನಗದ್ದೆ ಕಳಚೆ, ಮುಂತಾದ ಭಾಗಗಳಲ್ಲಿ ಕೊಳೆರೋಗ ವ್ಯಾಪಕವಾಗಿ ಹರಡಿದೆ. ಇದಕ್ಕೆ ಔಷಧಿ ಸಿಂಪಡಿಸಲೂ ಮಳೆ ತೊಡಕಾಗಿದೆ.

ತಾಲೂಕಿನ ಗ್ರಾಮೀಣ ಭಾಗದ ವಿವಿಧೆಡೆ ಅಡಕೆ ತೋಟಗಳಲ್ಲೆಲ್ಲಾ ಸಣ್ಣ ಅಡಕೆ ಮಿಳ್ಳೆಗಳು ರಾಶಿ ರಾಶಿಯಾಗಿ ಉದುರುತ್ತಿರುವುದು ಬೆಳೆಗಾರರ ಚಿಂತೆಗೆ ಕಾರಣವಾಗಿದೆ. ಗುರುವಾರದಿಂದ ಬಿಸಿಲು-ಮಳೆ ಮುಂದುವರಿದಿದ್ದು, ಕೊಳೆ ರೋಗ ಮತ್ತಷ್ಟು ವ್ಯಾಪಿಸಲು ಕಾರಣವಾಗುತ್ತಿದೆ.

ಕಳೆದ 2-3 ವರ್ಷಗಳಿಂದ ಅಡಿಕೆ ತೋಟಗಳಲ್ಲಿ ಬೆಳೆಯ ಏರು-ಪೇರು ರೈತರನ್ನು ಹೈರಾಣಾಗಿಸಿದೆ. ಬರಗಾಲದ ಪರಿಣಾಮವಾಗಿ ಎರಡು ವರ್ಷ ಅಡಕೆಯ ಸಿಂಗಾರ ಒಣಗಿ ಹೋಗಿ ರೈತರು ಬೆಳೆ ನಷ್ಟ ಅನುಭವಿಸಿದ್ದರು. ಕಳೆದ ಮೂರು ವರ್ಷಗಳಿಗೆ ಹೋಲಿಸಿದಾಗ ಈ ಬಾರಿ ಉತ್ತಮ ಬೆಳೆ ಬರಬಹುದೆಂಬ ನಿರೀಕ್ಷೆ ರೈತರಲ್ಲಿದ್ದರೂ ಕೂಡ ಕೊಳೆ ರೋಗದಿಂದಾಗಿ ನಿರೀಕ್ಷೆ ಹುಸಿಯಾಗಿದೆ.

ಈಗಾಗಲೇ ಶೇ.60 ರಷ್ಟು ಅಡಕೆ ಕೋಳೆ ರೋಗದಿಂದ ಹಾನಿಗೊಳಗಾಗಿದ್ದು, ಮುಂದಿನ ದಿನಗಳಲ್ಲಿ ಈ ಸಲದ ಬೆಳೆಯು ಸಂಪೂರ್ಣ ನಾಶವಾಗುವ ಮುನ್ಸೂಚನೆ ತೋರಿದೆ. ಕೊಳೆರೋಗಪಿಡಿತ ತಾಲೂಕೆಂದು ಪರಿಗಣಿಸಿ ತೋಟಿಗನಿಗೆ ನೇರವಾದ ಸಹಾಯಕ್ಕೆ ಸರಕಾರ ಮುಂದಾಗಬೇಕೆಂದು ಭಾರತೀಯ ಕಿಸಾನ್‌ ಸಂಘ ತಾಲೂಕ ಘಟಕ ಸರಕಾರವನ್ನು ಆಗ್ರಹಿಸಿದೆ. 

Advertisement

ಕೊಳೆ ರೋಗದಿಂದಾಗಿ ಅಡಕೆ ವ್ಯಾಪಕ ಪ್ರಮಾಣದಲ್ಲಿ ಉದುರುತ್ತಿದೆ. ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಕಾರಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಡಕೆ ಬೆಳೆಗಾರರ ನೆರವಿಗೆ ಧಾವಿಸಬೇಕು. ಕೊಳೆರೋಗದಿಂದ ನಷ್ಟ ಅನುಭವಿಸಿದ ಬೆಳೆಗಾರರಿಗೆ ಪರಿಹಾರ ನೀಡಬೇಕು.  
.ರಾಮಕೃಷ್ಣ ಭಟ್ಟ ಬಾರೆ ಕೃಷಿಕ

Advertisement

Udayavani is now on Telegram. Click here to join our channel and stay updated with the latest news.

Next