ಚೇಳೂರು: ತಾಲೂಕಿನ ನಾರೇಮದ್ದೇಪಲ್ಲಿ ಗ್ರಾಪಂನ ಶಿವಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಸಂಜೆ ಬಿರುಗಾಳಿ ಸಹಿತ ಮಳೆಗೆ ಮನೆಗಳ ಮುಂದೆ ಹಾಕಲಾಗಿದ್ದ ಶೀಟುಗಳು ಹಾರಿ ಹೋಗಿ, ಮರಗಳು ಧರೆಗುರುಳಿವೆ.
ಶುಕ್ರವಾರ ಸಂಜೆ ಪ್ರಾರಂಭವಾದ ಮಳೆ 6 ಗಂಟೆಯವರೆವಿಗೂ ಮುಂದುವರೆದಿತ್ತು, ಶಿವಪುರ ಮಲ್ಲೇಪಲ್ಲಿ ವಂಡಮಾನ್ ಅರಣ್ಯ ಪ್ರದೇಶ ಗ್ಯಾದಿವಾಂಡ್ಲಪಲ್ಲಿ ಕುರುಬರಪಲ್ಲಿ ದೊಡ್ಡಿವಾರಿಪಲ್ಲಿಮತ್ತಿತರ ಗ್ರಾಮಗಳ ಸುತ್ತಮುತ್ತ ಮಳೆಯರಾಯನಆರ್ಭಟ ಜೋರಾಗಿತ್ತು. ಹವಾಮಾನ ಇಲಾಖೆ ಪ್ರಕಾರ 110 ಮಿ. ಮೀ ಮಳೆಯಾಗಿದೆ.
ಚಿನಗಾನಪಲ್ಲಿ ಗ್ರಾಮದ ಬಳಿ ಸುರಿದ ಜೋರು ಮಳೆಗೆ ರೈತರ ಭತ್ತದ ಬೆಳೆ, ಟೊಮೆಟೋ ತೋಟ ಮತ್ತು ಕೊತ್ತಂಬರಿ ಬೆಳೆ ನೆಲಕಚ್ಚಿದೆ ಪ್ರಸ್ತುತ ಬಂಗಾರದ ಬೆಲೆಯಂತಿರುವ ಟೊಮೆಟೋ ಬೆಳೆ ನಷ್ಟವಾಗಿದೆ. ಕಟಾವಿಗೆ ಬಂದಿರುವ ಬತ್ತ ಭೂಮಿಯಲ್ಲಿ ಉದುರಿ ಹೋಗಿದೆ. ಟೊಮೆಟೋ ಬಿತ್ತನೆ ಸಸಿಗಳೂ ನೆಲಕಚ್ಚಿವೆ. ವಂಡಮಾನ್ ಜಲಾಶಯಕ್ಕೆ ಹೆಚ್ಚಿನನೀರು ಹರಿದುಹೋಗುತ್ತಿದೆ.
ಮೇ ತಿಂಗಳೆಂದರೆ ಗಡಿನಾಡಿನ ಜನತೆ ಉರಿಬಿಸಿಲಿರುತ್ತದೆ. ಈ ವೇಳೆ ಸುರಿದ ಮಳೆಯಿಂದ ವಾತಾವರಣ ತಂಪಾಗಿದೆ.
ಬೇಸಿಗೆ ಕಾಲದಲ್ಲಿ ಇಂತಹ ಮಳೆ ರೈತರನ್ನು ಹೆಚ್ಚು ನಷ್ಟಕ್ಕೀಡು ಮಾಡುತ್ತದೆ. ಟೊಮೆಟೋ, ಭತ್ತ ಹಾಗೂ ಕೊತ್ತಂಬರಿ ಬೆಳೆ ಮಳೆಗೆ ಹಾಳಾಗಿದೆ. ಇಷ್ಟು ಜೋರು ಮಳೆಇತ್ತಿಚೆಗೆ ಕಂಡಿರಲಿಲ್ಲ. ನೋಡನೋಡುತ್ತಿದ್ದಂತೆ ಮರಗಳು ಉರುಳಿದವು, ಶೀಟುಗಳು ಹಾರಿಹೋದವು, ಹಳ್ಳಗಳೂ ಹರಿದವು.
-ಸಿ.ಎಸ್.ಶ್ರೀನಿವಾಸರೆಡ್ಡಿ, ಚಿನಗಾನಪಲ್ಲಿ ರೈತ
ಶಿವಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಸಂಜೆ ಸುಮಾರು ಎರಡು ಗಂಟೆಗೂ ಹೆಚ್ಚಿನ ಸಮಯ ಬಿರುಗಾಳಿ ಸಹಿತ ಮಳೆಯಾಗಿದ್ದು ರೈತರ ತೋಟಗಾರಿಕೆ ಬೆಳೆಗಳು ನಷ್ಟವಾಗಿರುವುದು ತಿಳಿದುಬಂದಿದೆ. ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ.
– ವೈ.ರವಿ ತಹಶೀಲ್ದಾರ್ ಬಾಗೇಪಲ್ಲಿ.