ಕೊಪ್ಪಳ: ರೈತರ ಜಮೀನಿನಲ್ಲಿ ಆಗುತ್ತಿರುವ ಬೆಳೆ ಸರ್ವೇಯಲ್ಲಿನ ಎಡವಟ್ಟು ತಪ್ಪಿಸಲು ಕೃಷಿ ಇಲಾಖೆ ಹೊಸ ಆ್ಯಪ್ ಜಾರಿ ತರಲು ಸಿದ್ಧತೆ ನಡೆಸುತ್ತಿದೆ. ರೈತನೇ ತನ್ನ ಜಮೀನಿನಲ್ಲಿ ಯಾವ ಬೆಳೆಯಿದೆ ಎನ್ನುವುದನ್ನು ಆ್ಯಪ್‌ನ ಮೂಲಕ ಫೋಟೋ ಅಪ್ ಲೋಡ್ ಮಾಡಿ ಬೆಳೆ ಘೋಷಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡುತ್ತಿದೆ.
ಇಷ್ಟು ದಿನಗಳ ಕಾಲ ಕೃಷಿ ಇಲಾಖೆ ಸಿಬ್ಬಂದಿ,ಅನುವುಗಾರರು, ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಪಿಡಿಒಗಳಿಗೆ ರಾಜ್ಯ ಸರ್ಕಾರವು ಬೆಳೆ ಸರ್ವೇಯ ಹೊಣೆ ನೀಡುತ್ತಿತ್ತು. ಕೆಲವು ಹೋಬಳಿಯಲ್ಲಿ ಸರ್ವೇ ಕಾರ್ಯ ಉತ್ತಮ ರೀತಿಯಲ್ಲಿ ನಡೆದರೆ, ಹಲವು ಹೋಬಳಿಯಲ್ಲಿ ಸರ್ವೇ ಕಾಟಾಚಾರಕ್ಕೆ ಮಾಡುವುದರಿಂದ ರೈತರಿಗೆ ರಾಜ್ಯ ಸರ್ಕಾರದಿಂದ ಯಾವುದೇ ಸೌಲಭ್ಯಗಳು ದೊರೆಯದಂತಾಗುತ್ತಿದ್ದವು.
ಅದರಲ್ಲೂ 2014-15ರಿಂದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಘೋಷಣೆಯಾದ ಬಳಿಕ ರಾಜ್ಯಾದ್ಯಂತ ಲಕ್ಷಾಂತರ ರೈತರು ಬೆಳೆಗೆ ವಿಮೆ ಪಾವತಿ ಮಾಡುತ್ತಿದ್ದಾರೆ. ಆದರೆ ವಿಮೆ ಮೊತ್ತ ಪಾವತಿಯಲ್ಲಿ ತುಂಬ ತೊಂದರೆ ಎದುರಾಗುತ್ತಿವೆ. ಇನ್ನೂ ಸರ್ಕಾರವು ಪ್ರತಿ ವರ್ಷವೂ ಖಾಸಗಿ ಪಿಆರ್ ಗಳ ಮೂಲಕ ಬೆಳೆ ಸರ್ವೇ ಮಾಡಿಸುತ್ತಿದ್ದು, ಪಿಆರ್ ಗಳು ರೈತರ ಜಮೀನಿಗೆ ಸರಿಯಾಗಿ ತೆರಳದೆ ಒಂದೇ ಜಮೀನಿನಲ್ಲಿ ನಾಲ್ಕೈದು ಆಯಾಮದಲ್ಲಿ ಫೋಟೋ ತೆಗೆದುಕೊಂಡು ಅಪ್‌ಲೋಡ್ ಮಾಡುತ್ತಿದ್ದರು. ಪಿಆರ್‌ಗಳು ಮಾಡುವ ಒಂದು ಸಣ್ಣ ಎಡವಟ್ಟಿನಿಂದ ರೈತರಿಗೆ ವಿಮೆ ಮೊತ್ತ ಸೇರಿದಂತೆ ಯಾವುದೇ ಪರಿಹಾರವೂ ಬಾರದಂತಾಗುತ್ತಿದೆ. ಇದೆಲ್ಲವನ್ನೂ ಅರಿತಿರುವ ಕೃಷಿ ಇಲಾಖೆಯು ರೈತನು ತನ್ನ ಜಮೀನಿನಲ್ಲಿ ಯಾವ ಬೆಳೆ ಬೆಳೆಯುತ್ತಿದ್ದಾರೆ. ಅದು ಮುಂಗಾರು ಪೂರ್ವ ಬೆಳೆಯೋ? ಮುಂಗಾರು ಬೆಳೆಯೋ? ಹಿಂಗಾರು ಬೆಳೆಯೋ? ಬೇಸಿಗೆ ಬೆಳೆಯೋ ಎನ್ನುವ ಕುರಿತು ತಾನೇ ಸ್ವಯಂ ಘೋಷಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲು ಮುಂದಾಗಿದೆ.
ಇಲಾಖೆಯಿಂದ ಹೊಸ ತಂತ್ರಜ್ಞಾನದ ಆ್ಯಪ್ ವೊಂದನ್ನು ಸಿದ್ಧಪಡಿಸುತ್ತಿದೆ. ಆ್ಯಪ್‌ನ ಮೂಲಕ ರೈತನು ತನ್ನ ಜಮೀನಿನಲ್ಲಿ ನಿಂತು ಜಮೀನು ಸರ್ವೇ ನಂಬರ್, ಸೀಮಾ ನಮೂದು ಮಾಡಿ ಬೆಳೆಯ ಫೋಟೋ ತೆಗೆದು ಆ್ಯಪ್‌ನಲ್ಲಿ ಅಪ್ ಲೋಡ್ ಮಾಡಬೇಕು. ರೈತನ ಈ ಫೋಟೋಗಳು ಸಾಪ್ಟ್ವೇರ್‌ನಲ್ಲಿ ದಾಖಲಾಗುತ್ತವೆ. ಇದರಿಂದ ರಾಜ್ಯ ಕೃಷಿ ಇಲಾಖೆಗೆ ಬೆಳೆಗಳ ನಿಖರ ಮಾಹಿತಿಯೂ ದೊರೆತಂತಾಗಲಿದೆ ಎನ್ನುವುದನ್ನು ಅರಿತು ಆ್ಯಪ್ ವೊಂದನ್ನು ಸಿದ್ಧಪಡಿಸುತ್ತಿದೆ.
ರೈತನೇ ತನ್ನ ಬೆಳೆ ಘೋಷಣೆ ಮಾಡಿಕೊಳ್ಳುವುದರಿಂದ ಇಲ್ಲಿ ಬೆಳೆಗಳ ಮಿಸ್ ಮ್ಯಾಚ್ ಆಗುವುದು ತುಂಬ ಕಡಿಮೆ. ಇದರಿಂದ ರೈತರು ಕೃಷಿ ಇಲಾಖೆಗೆ ಬೆಳೆವಿಮೆ ಸೇರಿ ಇತರೆ ಯಾವುದೇ ತೊಂದರೆಗೂ ಅಲೆದಾಡುವುದನ್ನ ತಪ್ಪಿಸಲು ಈ ಪ್ರಯತ್ನಕ್ಕೆ ಮುಂದಾಗಿದೆ. ಸರ್ಕಾರದ ಪ್ರತಿಯೊಂದು ಕೆಲಸಕ್ಕೂ ಬೆಳೆ ಸರ್ವೇಯನ್ನೇ ಪರಿಗಣನೆ ಮಾಡಲಾಗುತ್ತಿದೆ. ಖಾಸಗಿ ವ್ಯಕ್ತಿಗಳು ಮಾಡುವ ಎಡವಟ್ಟು ತಪ್ಪಿಸಲು ಕೃಷಿ ಇಲಾಖೆಯ ಹೊಸ ತಾಂತ್ರಿಕತೆಗೆ ಮುಂದಾಗಿದೆ.
ಇನ್ನೂ ಹಲವು ರೈತರಲ್ಲಿ ಸ್ಮಾರ್ಟ್ ಫೋನ್ ಇರುವುದಿಲ್ಲ. ಅಂತಹ ಸರ್ವೇ ನಂಬರ್‌ಗಳನ್ನು ಕೃಷಿ ಇಲಾಖೆ ಪತ್ತೆ ಮಾಡಿ ಇಲಾಖೆಯ ಸಿಬ್ಬಂದಿ ಹಾಗೂ ಅನುವುಗಾರರ ಮೂಲಕ ಬಾಕಿ ಉಳಿದ ಬೆಳೆಗಳ ಸರ್ವೇ ನಡೆಸಲು ಚಿಂತನೆ ನಡೆಸಿರುವ ಮಾಹಿತಿಯೂ ಲಭ್ಯವಾಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ರೈತರ ಬೆಳೆ ಸರ್ವೇಯಲ್ಲಿನ ಮಿಸ್‌ಮ್ಯಾಚ್ ಆಗುತ್ತಿರುವುದನ್ನು ತಪ್ಪಿಸಲು ಇಲಾಖೆಯಿಂದ ಹೊಸದೊಂದು ಆ್ಯಪ್ ಸಿದ್ಧಪಡಿಸಲಾಗುತ್ತಿದೆ. ರೈತನೇ ತನ್ನ ಜಮೀನಿನಲ್ಲಿ ನಿಂತು ತಾನು ಬೆಳೆದ ಬೆಳೆ ಫೋಟೋ ತೆಗೆದು ಅಪ್‌ಲೋಡ್ ಮಾಡಬೇಕು. ಇದರಿಂದ ಇಲಾಖೆಗೂ ನಿಖರ ಮಾಹಿತಿ ದೊರೆಯಲಿದೆ. ರೈತನಿಗೂ ಪರಿಹಾರ, ವಿಮೆಯಿಂದ ವಂಚಿತನಾಗುವುದು ತಪ್ಪಲಿದೆ. –
ಬಿ.ಸಿ.ಪಾಟೀಲ್, ಕೃಷಿ ಸಚಿವ
–ದತ್ತು ಕಮ್ಮಾರ