Advertisement

ವರುಣಾರ್ಭಟಕ್ಕೆ ಹೈರಾಣಾದ ಜನ

03:18 PM May 20, 2022 | Team Udayavani |

ದಾವಣಗೆರೆ: ಕಳೆದ ಮೂರ್‍ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಹೈರಣಾಗುತ್ತಿದೆ. ಬುಧವಾರ ರಾತ್ರಿ ಸುರಿದ ಮಳೆಯಿಂದ 1.83 ಕೋಟಿ ಮೌಲ್ಯದ ಆಸ್ತಿ, ಬೆಳೆ ಹಾನಿ ಆಗಿದೆ. ಮೋಡವೇ ಕವಚಿ ಬೀಳುತ್ತಿದೆಯೇನೋ ಎನ್ನುವಂತೆ ಧಾರಾಕಾರವಾಗಿ ಸುರಿಯುವ ಮಳೆಯಿಂದಾಗುತ್ತಿರುವ ಬೆಳೆ ಹಾನಿ, ಮನೆಗಳ ಕುಸಿತದಿಂದ ಜನರು ಕಂಗಾಲಾಗಿದ್ದಾರೆ.

Advertisement

ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಬುಧವಾರ ಮಧ್ಯರಾತ್ರಿ ಒಂದೇ ಸಮನೆ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶ ಗಳಲ್ಲಿನ ಜನರು ತೊಂದರೆ ಅನುಭವಿಸುವಂತಾಯಿತು. ರೈಲ್ವೆ ಕೆಳ ಸೇತುವೆಯಲ್ಲಿ ಸಂಚಾರಕ್ಕೆ ಭಾರೀ ಅಡಚಣೆ ಉಂಟಾಯಿತು. ಬೆಳಗ್ಗೆಯವರೆಗೆ ಬಂದ ಮಳೆಯಿಂದ ಜನರು ಸಂಕಷ್ಟ ಅನುಭವಿಸುವಂತಾಯಿತು. ರಾಜೀವಗಾಂಧಿ ಬಡಾವಣೆ, ಎಸ್‌.ಎಂ. ಕೃಷ್ಣ ನಗರ, ಎಸ್.ಎಸ್. ಮಲ್ಲಿಕಾರ್ಜುನ ನಗರ, ಚೌಡೇಶ್ವರಿ ನಗರ, ಶಿವ ನಗರ, ರಾಮಕೃಷ್ಣ ಹೆಗಡೆ ನಗರ ಮುಂತಾದ ಕಡೆ ಮಳೆ ನೀರು ನಿಂತ ಪರಿಣಾಮ ಜನರು ತೊಂದರೆ ಅನುಭವಿಸಿದರು.

ದಾವಣಗೆರೆ-ಹರಪನಹಳ್ಳಿ ಸಂಪರ್ಕ ಕಲ್ಪಿಸುವ ಮಾಗಾನಹಳ್ಳಿ ಸಮೀಪದ ಸೇತುವೆ ಮೇಲೆ 4 ಅಡಿಯಷ್ಟು ನೀರು ಹರಿಯುತ್ತಿರುವ ಪರಿಣಾಮ ವಾಹನ ಸವಾರರು ಸೇತುವೆ ದಾಟಲು ಹರಸಾಹಸ ಪಡಬೇಕಾಯಿತು. ಪ್ರತಿ ಬಾರಿಯೂ ಮಳೆಯಾದಾಗ ಸೇತುವೆ ಮೇಲೆ ನೀರು ಹರಿಯುವುದು ಸಾಮಾನ್ಯ ಎನ್ನುವಂತಾಗಿದೆ. ಗುರುವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ನಂತರ ಭಾರೀ ಮಳೆ ಸುರಿಯಿತು.

1.83 ಕೋಟಿ ರೂ. ಹಾನಿ

ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಜಿಲ್ಲೆಯಾದ್ಯಂತ 1.83 ಕೋಟಿ ರೂಪಾಯಿ ಮೌಲ್ಯದ ಬೆಳೆ, ಆಸ್ತಿ ಹಾನಿ ಆಗಿದೆ. ಸರಾಸರಿ 48 ಮಿಲಿ ಮೀಟರ್‌ ದಾಖಲೆ ಮಳೆ ಸುರಿದಿದೆ. ದಾವಣಗೆರೆ ತಾಲೂಕಿನಲ್ಲಿ ಅತಿ ಹೆಚ್ಚು 63 ಮಿಲಿ ಮೀಟರ್‌ ಮಳೆಯಾಗಿದೆ.

Advertisement

ದಾವಣಗೆರೆ ತಾಲೂಕಿನ ವ್ಯಾಪ್ತಿಯಲ್ಲಿ 10 ಕಚ್ಚಾಮನೆ ಭಾಗಶಃ ಹಾನಿಯಾಗಿದ್ದು, 3.30 ಲಕ್ಷ ನಷ್ಟವಾಗಿದೆ. 446 ಎಕರೆ ಭತ್ತ, 1.20 ಎಕರೆ ಅಡಕೆ, 2 ಎಕರೆ ಕೋಸು, 10 ಗುಂಟೆ ತೆಂಗು ಬೆಳೆ ಹಾನಿಗೀಡಾಗಿ 6.60 ಲಕ್ಷ ಸೇರಿದಂತೆ ಒಟ್ಟು 9.90 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ಹರಿಹರ ತಾಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ಭಾಗಶಃ ಹಾನಿಯಿಂದಾಗಿ 2 ಲಕ್ಷ, 2 ಕಚ್ಚಾ ಮನೆ ಭಾಗಶಃ ಹಾನಿ ಯಾಗಿ 60 ಸಾವಿರ, 1118 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, 72.36 ಲಕ್ಷ ರೂ. ಸೇರಿ ಒಟ್ಟು ರೂ.74.96 ಲಕ್ಷ ನಷ್ಟು ಸಂಭವಿಸಿದೆ. ಹೊನ್ನಾಳಿ ತಾಲೂಕು ವ್ಯಾಪ್ತಿಯಲ್ಲಿ 1 ಕಚ್ಚಾ ಮನೆ ತೀವ್ರ ಹಾನಿಯಾಗಿದ್ದು, 40 ಸಾವಿರ, 257. 29 ಎಕರೆ ಭತ್ತದ ಬೆಳೆ ಹಾನಿಯಾಗಿರುವುದರಿಂದ 77.60 ಲಕ್ಷ ಸೇರಿದಂತೆ ಒಟ್ಟು78 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.

ನ್ಯಾಮತಿ ತಾಲೂಕು ವ್ಯಾಪ್ತಿಯಲ್ಲಿ 6 ಪಕ್ಕಾ ಮನೆ ತೀವ್ರ ಹಾನಿಯಾಗಿದ್ದು, 3 ಲಕ್ಷ, 2 ಪಕ್ಕಾ ಮನೆ ಭಾಗಶ: ಹಾನಿ ಯಾಗಿ 60 ಸಾವಿರ, 2. 27 ಎಕರೆ ಮೆಕ್ಕೆ ಜೋಳದ ಬೆಳೆ ಹಾನಿಯಾಗಿ 90 ಸಾವಿರ ಒಟ್ಟು 4.50 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಚನ್ನಗಿರಿ ತಾಲೂಕು ವ್ಯಾಪ್ತಿಯಲ್ಲಿ 5 ಪಕ್ಕಾ ಮನೆ ಭಾಗಶ: ಹಾನಿಯಾಗಿದ್ದು, 3.20 ಲಕ್ಷ 3 ಕಚ್ಚಾ ಮನೆ ತೀವ್ರ ಹಾನಿಯಾಗಿದ್ದು, 2.10 ಲಕ್ಷ 35. ಎಕರೆ ಭತ್ತದ ಬೆಳೆ ಹಾನಿಯಾಗಿರುವುದರಿಂದ 3.25 ಲಕ್ಷ ಸೇರಿ ಒಟ್ಟು 8.55 ಲಕ್ಷ ಅಂದಾಜು ನಷ್ಟವಾಗಿದೆ.

ಜಗಳೂರು ತಾಲೂಕು ವ್ಯಾಪ್ತಿಯಲ್ಲಿ 14 ಕಚ್ಚಾ ಮನೆ ಭಾಗಶ: ಹಾನಿಯಾಗಿದ್ದು, 8 ಲಕ್ಷ ಅಂದಾಜು ನಷ್ಟ ಹಾನಿಯಾಗಿದೆ. ಜಿಲ್ಲೆಯಲ್ಲಿ ಗುರುವಾರ ಸರಾಸರಿ 48 ಮಿಮೀ ಸರಾಸರಿ ಮಳೆಯಾಗಿದೆ. ಚನ್ನಗಿರಿಯಲ್ಲಿ 40, ದಾವಣಗೆರೆ ತಾಲೂಕಿನಲ್ಲಿ 63, ಹರಿಹರದಲ್ಲಿ 44, ಹೊನ್ನಾಳಿ 42 ಜಗಳೂರು 45, ನ್ಯಾಮತಿಯಲ್ಲಿ 59 ಮಿಲಿ ಮೀಟರ್‌ ಮಳೆಯಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 183.91 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿರುತ್ತದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next