“ಕ್ರಿಟಿಕಲ್ ಕೀರ್ತನೆಗಳು’ – ಇಂಥದ್ದೊಂದು ಇಂಗ್ಲೀಷ್ ಮತ್ತು ಕನ್ನಡ ಕಾಂಬಿನೇಶನ್‌ನ ಕಂಗ್ಲಿಷ್ ಟೈಟಲ್‌ನ ಸಿನಿಮಾವೊಂದು ತೆರೆಗೆ ಬರುತ್ತಿರುವುದು ನಿಮಗೆ ಗೊತ್ತಿರಬಹುದು. ಈಗಾಗಲೇ ಸೆನ್ಸಾರ್‌ನಿಂದ “ಯು/ಎ’ ಸರ್ಟಿಫಿಕೆಟ್ ಪಡೆದುಕೊಂಡಿರುವ “ಕ್ರಿಟಿಕಲ್ ಕೀರ್ತನೆಗಳು’ ಇದೇ ಮೇ. 13ರಂದು ತೆರೆಗೆ ಬರುತ್ತಿದೆ.
ಈ ಹಿಂದೆ “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರವನ್ನು ನಿರ್ದೇಶಿಸಿದ್ದ ಕುಮಾರ್. ಎಲ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಕುಮಾರ್, “ಇದೊಂದು ಐಪಿಎಲ್ ಬೆಟ್ಟಿಂಗ್ ಕಥಾಹಂದರ ಹೊಂದಿರುವ ಒಂದಷ್ಟು, ನೈಜ ಘಟನೆ ಗಳನ್ನು ಆಧರಿಸಿ ಮಾಡಿರುವ ಸಿನಿಮಾ. ಇಡೀ ಸಿನಿಮಾದಲ್ಲಿ ಕಂಪ್ಲೀಟ್ ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಪ್ಯಾಕೇಜ್ ಇದೆ. ಕಾಮಿಡಿ, ಸೆಂಟಿಮೆಂಟ್, ಮೆಸೇಜ್ ಎಲ್ಲವನ್ನೂ ಸ್ಕ್ರೀನ್ ಮೇಲೆ ಕಾಣಬಹುದು’ ಎನ್ನುತ್ತಾರೆ.
ಈಗಾಗಲೇ ಬಿಡುಗಡೆಯಾಗಿರುವ “ಕ್ರಿಟಿಕಲ್ ಕೀರ್ತನೆಗಳು’ ಟ್ರೇಲರ್ ಸೋಶಿಯಲ್ ಮೀಡಿಯಾದಲ್ಲಿ 1.2 ಮಿಲಿಯನ್ಸ್‌ಗೂ ವೀವ್ಸ್ ಪಡೆದುಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೇಲರ್‌ಗೆ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇನ್ನು “ಕ್ರಿಟಿಕಲ್ ಕೀರ್ತನೆಗಳು’ ಐಪಿಎಲ್ ಕಥಾಹಂದರದ ಚಿತ್ರವಾಗಿರುವುದರಿಂದ, ಈ ಐಪಿಎಲ್ ಸೀಜನ್‌ನಲ್ಲಿ ಐಪಿಎಲ್ ಕುರಿತಾದ “ಐಪಿಎಲ್ ಎತ್ಕೊಂಡೆ ಕಾಲು… ‘ ಎಂಬ ನವೀನ್ ಸಜ್ಜು ಹಾಡಿರುವ ಗೀತೆಯನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಹಾಡಿಗೂ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ಇದೇ ಖುಷಿಯಲ್ಲಿರುವ ಚಿತ್ರತಂಡ, ಮೇ 13ಕ್ಕೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.
“ಕ್ರಿಟಿಕಲ್ ಕೀರ್ತನೆಗಳು’ ಚಿತ್ರದಲ್ಲಿ ತಬಲಾ ನಾಣಿ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ತರಂಗ ವಿಶ್ವ, ಅಪೂರ್ವ, ಅಪೂರ್ವ ಭಾರದ್ವಾಜ್, ಅರುಣಾ ಬಾಲರಾಜ್, ಧರ್ಮ, ದಿನೇಶ್ ಮಂಗಳೂರು, ರಘು ಪಾಂಡೇಶ್ವರ, ಯಶಸ್ ಅಭಿ, ದೀಪಾ, ಗುರುರಾಜ ಹೊಸಕೋಟೆ, ಮಾಸ್ಟರ್ ಮಹೇಂದ್ರ, ಮಾಸ್ಟರ್ ಪುಟ್ಟರಾಜು, ಯಶ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಕೇಸರಿ ಫಿಲಂಸ್ ಕ್ಯಾಪ್ಚರ್’ ಲಾಂಛನದಲ್ಲಿ ಕುಮಾರ್ ಮತ್ತು ಸ್ನೇಹಿತರು ಸೇರಿ ನಿರ್ಮಿಸಿರುವ “ಕ್ರಿಟಿಕಲ್ ಕೀರ್ತನೆಗಳು’ ಚಿತ್ರಕ್ಕೆ ಶಿವಸೇನ ಮತ್ತು ಶಿವಶಂಕರ್ ಛಾಯಾಗ್ರಹಣವಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಚಿತ್ರದ ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ, ಆರವ್ ರಿಶಿಕ್ ಹಿನ್ನೆಲೆ ಸಂಗೀತವಿದೆ. ಬೆಂಗಳೂರು, ಕುಂದಾಪುರ, ಮಂಡ್ಯ, ಬೆಳಗಾವಿ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.