ದೋಹಾ: ಫುಟ್ಬಾಲ್ ವಿಶ್ವಕಪ್ ನಲ್ಲಿ ಶನಿವಾರ ಮತ್ತೊಂದು ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಅಲ್ ಥುಮಾಮಾ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ನ ಕ್ವಾರ್ಟರ್ ಫೈನಲ್ ನಲ್ಲಿ ಮೊರಾಕ್ಕೊ ತಂಡವು ಬಲಿಷ್ಠ ಪೋರ್ಚುಗಲ್ ನ್ನು 1-0 ಅಂತರದಿಂದ ಸೋಲಿಸಿ ವಿಶ್ವಕಪ್ ಸೆಮಿಫೈನಲ್ ಗೆ ಅರ್ಹತೆ ಪಡೆದ ಮೊದಲ ಆಫ್ರಿಕನ್ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಪ್ರಿ ಕ್ವಾರ್ಟರ್ ಫೈನಲ್ ನಂತೆ ನಿನ್ನೆ ಕೂಡಾ ಪೋರ್ಚುಗಲ್ ರೊನಾಲ್ಡೊ ಇಲ್ಲದೆ ಪಂದ್ಯ ಆರಂಭಿಸಿತು. ಆದರೆ ಮೊರಾಕ್ಕೊ 42ನೇ ನಿಮಿಷದಲ್ಲಿ ಯೂಸೆಫ್ ಎಲ್-ನೆಸಿರಿ ಮೂಲಕ ಗೋಲು ಗಳಿಸಿತು.
ಗೋಲು ಸಮಗೊಳಿಸಲು ಯುರೋಪಿಯನ್ ದೇಶವು ಪಟ್ಟುಬಿಡದೆ ಪ್ರಯತ್ನ ಪಟ್ಟಿತ್ತು. ಆದರೆ ಪೋರ್ಚುಗೀಸ್ ದಾಳಿಯನ್ನು ತಡೆಯಲು ರಕ್ಷಣಾತ್ಮಕ ತಡೆಗೋಡೆಯಿಟ್ಟು ಆಡಿದ ಆಫ್ರಿಕನ್ ರಾಷ್ಟ್ರವು ಒಂದೇ ಒಂದು ಗೋಲು ಬಿಟ್ಟುಕೊಡದೆ ಆಡಿತು. ಈ ಕೂಟದಲ್ಲಿ ಮೊರಾಕ್ಕೊ ಇದುವರೆಗೂ ಎದುರಾಳಿಗೆ ಒಂದೇ ಒಂದು ಗೋಲು ಬಿಟ್ಟುಕೊಟ್ಟಿಲ್ಲ.
ಪೋರ್ಚುಗಲ್ ದೇಶವು ವಿಶ್ವಕಪ್ ಕೂಟದಿಂದ ಹೊರಬಿದ್ದ ನಂತರ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮೈದಾನದಲ್ಲಿ ಕಣ್ಣೀರಿಟ್ಟರು. ಇದು 37 ವರ್ಷ ವಯಸ್ಸಿನ ರೊನಾಲ್ಡೊ ಅವರ ಕೊನೆಯ ಫಿಫಾ ವಿಶ್ವಕಪ್ ಆಗಿದ್ದು, ಇನ್ನೆಂದೂ ಫುಟ್ಬಾಲ್ ವಿಶ್ವಕಪ್ ನಲ್ಲಿ ಕಾಣಸಿಗರು.