Advertisement

Crime News ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

11:10 PM Sep 15, 2023 | Team Udayavani |

ಬಾವಿಯಲ್ಲಿ ತಾಯಿ, ಮಗಳ ಶವ ಪತ್ತೆ
ಕಾಸರಗೋಡು: ಬಾವಿಯಲ್ಲಿ ತಾಯಿ ಮತ್ತು ಮಗಳ ಶವ ಪತ್ತೆಯಾಗಿದೆ. ಉದುಮ ಅರಮಂಗಾನದ ಅಬ್ದುಲ್‌ ರಹಿಮಾನ್‌ ಅವರ ಪುತ್ರಿ, ಕೀಯೂರಿನ ತಾಜುದ್ದೀನ್‌ ಅವರ ಪತ್ನಿ ರುಬಿನಾ (30) ಹಾಗೂ ಪುತ್ರಿ ಹನಾನ್‌ ಮರಿಯಾ (5) ಅವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ.

Advertisement

ತಾಯಿ ಮತ್ತು ಮಗಳು ಕಾಣದಿದ್ದಾಗ ಮನೆಯವರು ಹುಡುಕಾಡಿದಾಗ ಮಧ್ಯಾಹ್ನ ಬಾವಿ ಬಳಿಯಲ್ಲಿ ಪಾದರಕ್ಷೆ ಕಂಡುಬಂದ ಹಿನ್ನೆಲೆಯಲ್ಲಿ ಬಾವಿಯಲ್ಲಿ ನೋಡಿದಾಗ ಮೃತದೇಹ ಪತ್ತೆಯಾಗಿದೆ. ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಪೊಲೀಸರಿಗೆ ಹಲ್ಲೆ : ಕೊಲ್ಲಿಗೆ ಪರಾರಿಯಾದ ಆರೋಪಿ ವಿರುದ್ಧ ಲುಕೌಟ್‌ ನೋಟೀಸು
ಮಂಜೇಶ್ವರ: ಎಸ್‌.ಐ. ಮತ್ತು ಪೊಲೀಸ್‌ಗೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಶರಣಾದ ಆರೋಪಿಗಳಾದ ಉಪ್ಪಳ ಪತ್ವಾಡಿಯ ನೂರ್‌ ಅಲಿ(42), ಹಿದಾಯತ್‌ನಗರದ ಅಫ್ಸಲ್‌(38) ಮತ್ತು ಕೆ.ಎಸ್‌.ಸತ್ತಾರ್‌(27)ಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಈ ಪೈಕಿ ನೂರ್‌ ಅಲಿ ಗೂಂಡಾ ತಂಡದ ನೇತಾರನಾಗಿದ್ದ ಖಾಲಿಯಾ ರಫೀಕ್‌ನನ್ನು ಗುಂಡಿಕ್ಕಿ ಕೊಲೆಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಕೊಲ್ಲಿಗೆ ಪರಾರಿಯಾಗಿರುವ ಆರೋಪಿ ರಾಶಿದ್‌ ವಿರುದ್ದ ಲುಕೌಟ್‌ ನೋಟೀಸು ಬಿಡುಗಡೆಗೊಳಿಸಿದೆ.

ರ‍್ಯಾಗಿಂಗ್ : ಮೊಗ್ರಾಲ್‌ನಲ್ಲಿ ವಿದ್ಯಾರ್ಥಿ ತಂಡಗಳ ಮಧ್ಯೆ ಘರ್ಷಣೆ
ಕುಂಬಳೆ: ಮೊಗ್ರಾಲ್‌ ವೊಕೇಶನಲ್‌ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ರ‍್ಯಾಗಿಂಗ್ ಹೆಸರಿನಲ್ಲಿ ಹೈಯರ್‌ ಸೆಕೆಂಡರಿ, ವಿಎಚ್‌ಎಸ್‌ಇ ಜೂನಿಯರ್‌ ಸೀನಿಯರ್‌ ವಿದ್ಯಾರ್ಥಿಗಳ ಮಧ್ಯೆ ಗುಂಪು ಸೇರಿ ಸತತ ಘರ್ಷಣೆ ನಡೆಯುತ್ತಿರುವುದರಿಂದ ಸ್ಥಳೀಯರಿಗೆ ಆತಂಕ ತಂದೊಡ್ಡಿದೆ. ಗುರುವಾರ ಮಧ್ಯಾಹ್ನ ಶಾಲಾ ಮೈದಾನದಲ್ಲಿ ಗುಂಪು ಹೊಡೆದಾಟ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಧಾವಿಸಿ ವಿದ್ಯಾರ್ಥಿಗಳನ್ನು ಚದುರಿಸಿದರು. ದೂರು ನೀಡದ ಹಿನ್ನೆಲೆಯಲ್ಲಿ ಪೊಲೀಸರಿಗೆ ಏನೂ ಮಾಡಲಾಗದ ಸ್ಥಿತಿ ಉಂಟಾಗಿದೆ.

ಕಾರಿನಲ್ಲಿ ಸಾಗಿಸುತ್ತಿದ್ದ ತಂಬಾಕು ಉತ್ಪನ್ನ ವಶಕ್ಕೆ : ಇಬ್ಬರ ಬಂಧನ
ಮಂಜೇಶ್ವರ: ಕಾರಿನಲ್ಲಿ ಸಾಗಿಸುತ್ತಿದ್ದ 240 ಕಿಲೋ ತಂಬಾಕು ಉತ್ಪನ್ನಗಳನ್ನು ಮಂಜೇಶ್ವರ ಅಬಕಾರಿ ಅಧಿಕಾರಿಗಳು ಮಂಜೇಶ್ವರದಿಂದ ವಶಪಡಿಸಿಕೊಂಡಿದ್ದು, ಈ ಸಂಬಂಧ ಮಧೂರು ಗ್ರಾಮದ ಉಳಿಯ ಅಡ್ಕದ ರೈಫ್‌ ಮಂಜಿಲ್‌ನ ಅನ್ವರ್‌ ಅಲಿ ಕೆ(40) ಮತ್ತು ಚೆರ್ಕಳ ಗ್ರಾಮದ ಪಳ್ಳತ್ತಡ್ಕ ನಿವಾಸಿ ಮೊದು ಬಿ(42)ನನ್ನು ಬಂಧಿಸಿದ್ದಾರೆ. ವಶಪಡಿಸಿಕೊಂಡ ತಂಬಾಕು ಉತ್ಪನ್ನಗಳಿಗೆ ಸುಮಾರು 2 ಲಕ್ಷ ರೂ. ಮೌಲ್ಯ ಅಂದಾಜಿಸಲಾಗಿದೆ. ಕಾರನ್ನು ವಶಪಡಿಸಿದ್ದಾರೆ.

Advertisement

ರಿಯಾಸ್‌ ಮೌಲವಿ ಕೊಲೆ ಪ್ರಕರಣ : ಅಂತಿಮ ಹಂತದ ವಿಚಾರಣೆ ಆರಂಭ
ಕಾಸರಗೋಡು: ಹಳೇ ಸೂರ್ಲಿನ ಮದ್ರಸಾ ಅಧ್ಯಾಪಕ, ಮೂಲತ: ಮಡಿಕೇರಿ ನಿವಾಸಿ ಮೊಹಮ್ಮದ್‌ ರಿಯಾಸ್‌ ಮೌಲವಿ(27) ಅವರನ್ನು ಕೊಲೆಗೈದ ಪ್ರಕರಣದ ಅಂತಿಮ ಹಂತದ ವಿಚಾರಣೆ ಕಾಸರಗೋಡು ಪ್ರಿನ್ಸಿಪಲ್‌ ಜಿಲ್ಲಾ ಸೆಶನ್ಸ್‌ ನ್ಯಾಯಾಲಯದಲ್ಲಿ ಪುನರಾರಂಭಗೊಂಡಿದೆ.

2017 ಮಾರ್ಚ್‌ 20 ರಂದು ಮುಂಜಾನೆ ಹಳೇ ಸೂರ್ಲಿನ ಮಸೀದಿ ಬಳಿಯ ಮದ್ರಸಾದ ಬಳಿ ವಾಸಿಸುತ್ತಿದ್ದ ರಿಯಾಸ್‌ ಮೌಲವಿ ಅವರನ್ನು ಅವರು ವಾಸಿಸುತ್ತಿದ್ದ ಕೊಠಡಿಯೊಳಗೆ ಇರಿದು ಕೊಲೆಗೈಯ್ಯಲಾಗಿತ್ತು. ಈ ಪ್ರಕರಣದ ಮೂವರು ಆರೋಪಿಗಳು ಜಾಮೀನು ಲಭಿಸದೆ ಕಣ್ಣೂರು ಸೆಂಟ್ರಲ್‌ ಜೈಲಿನಲ್ಲಿದ್ದಾರೆ.

ಮಹಿಳೆ ಪರಾರಿ
ಕುಂಬಳೆ: ಆರು ತಿಂಗಳ ಹಿಂದೆ ಪುತ್ರನನ್ನು ಕರೆದುಕೊಂಡು ಪತಿಯ ವಾಸ ಸ್ಥಳಕ್ಕೆ ಬಂದಿದ್ದ ಮಹಿಳೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಕಾರ್ಮಿಕನೊಂದಿಗೆ ಪರಾರಿಯಾದ ಘಟನೆ ನಡೆದಿದೆ. ಶಿರಿಯ ದೇವಸ್ಥಾನ ಸಮೀಪದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಕೊಲ್ಲಂ ಕರುನಾಗಪಳ್ಳಿ ನಿವಾಸಿ ಸೂರಜ್‌ ಅವರ ಪತ್ನಿ ಶೈನಿ (39) ಪರಾರಿಯಾಗಿರುವುದಾಗಿ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಸೆ.11ರಂದು ಕೊಲ್ಲಂನ ಮನೆಗೆ ಹೋಗುವುದಾಗಿ ತಿಳಿಸಿ ಹೋದ ಶೈನಿ ಅಲ್ಲಿಗೆ ತಲುಪಲಿಲ್ಲ. ಈ ಹಿನ್ನೆಲೆಯಲ್ಲಿ ನಡೆಸಿದ ತನಿಖೆಯಲ್ಲಿ ರಾ.ಹೆದ್ದಾರಿ ನಿರ್ಮಾಣಕ್ಕಾಗಿ ಬಂದಿದ್ದ ವಡಗರ ನಿವಾಸಿಯಾದ ಉಮೇಶ್‌ನೊಂದಿಗೆ ಪರಾರಿಯಾಗಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಸಹಕಾರಿ ಸಂಘದ ಹೆಸರಿನಲ್ಲಿ ವಂಚನೆ : ಕೇಸು ದಾಖಲು
ಕಾಸರಗೋಡು: ನಗರದ ಹೊಸ ಬಸ್‌ ನಿಲ್ದಾಣ ಪರಿಸರದಲ್ಲಿ ಕಾರ್ಯಾಚರಿಸುವ ಪೀಪಲ್ಸ್‌ ವೆಲ್ಫೆàರ್‌ ಕೋ-ಆಪರೇಟಿವ್‌ ಸೊಸೈಟಿಯಲ್ಲಿ ಚಿಟ್ಟಿಯ ಮರೆಯಲ್ಲಿ ವಂಚನೆ ನಡೆದಿದೆ ಎಂದು ಮಾಹಿನ್‌ ಬಾದಿಶ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಸೊಸೈಟಿಯ ಆಡಳಿತ ಸಮಿತಿ ಅಧ್ಯಕ್ಷ ಶ್ಯಾಂ(60), ಕಾರ್ಯದರ್ಶಿ ಸುನಿಲ್‌(40) ಮತ್ತು ಸಂಘದ ಕ್ಯಾಶಿಯರ್‌ ರಂಜಿತ್‌(38) ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. 2019 ರಲ್ಲಿ ಮಾಹಿನ್‌ ಬಾದಿಶ ಚಿಟ್ಟಿಗೆ ಸೇರಿದ್ದರೆಂದೂ, ಕ್ಯಾಶಿಯರ್‌ ರಂಜಿತ್‌ ಅವರ ಖಾತೆಗೆ ಮಾಹಿನ್‌ ಬಾದಿಶ ಹಣ ಪಾವತಿಸಿದ್ದರು. ಆದರೆ ಹಣವನ್ನು ಸೊಸೈಟಿಗೆ ಪಾವತಿಸದೆ ಕಾರ್ಯದರ್ಶಿ ಹಾಗು ಅಧ್ಯಕ್ಷನ ಸಹಾಯದಿಂದ ನಕಲಿ ರಶೀದಿ ನೀಡಿ ವಂಚಿಸಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದರು.

ಮನೆಯಿಂದ ಕಳವಿಗೆ ಯತ್ನ
ಕಾಸರಗೋಡು: ಮೊಗ್ರಾಲ್‌ಪುತ್ತೂರು ಕಡವತ್‌ನ ಮೈಮೂನಾ ಪಿ.ಎಂ. ಅವರ ಮನೆಯ ಬೀಗ ಮುರಿದು ಮನೆಯೊಳಗೆ ನುಗ್ಗಿ ಕಳವು ಗೈಯ್ಯಲು ಯತ್ನಿಸಿದ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಆನ್‌ಲೈನ್‌ ರಮ್ಮಿಯಲ್ಲಿ ನಷ್ಟ
ನೇಣು ಬಿಗಿದು ಯುವಕ ಆತ್ಮಹತ್ಯೆ
ಕಾಸರಗೋಡು: ಆನ್‌ಲೈನ್‌ ರಮ್ಮಿ ಆಟದಲ್ಲಿ ತೊಡಗಿದ್ದ ರೆಸೋರ್ಟ್‌ ಸಿಬ್ಬಂದಿಯಾದ ವೆಳ್ಳರಿಕುಂಡು ರಾಣಿಪುರಂ ಪಾರಯಕ್ಕಲ್‌ನ ರೆಜಿ ಅವರ ಪುತ್ರ ಪಿ.ಕೆ.ರೋಷ್‌(23) ಹಣ ಕಳೆದುಕೊಂಡಿರುವುದರಿಂದ ರೆಸೋರ್ಟ್‌ ಬಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಾನ್‌ ಮಸಾಲೆ ಸಹಿತ ಬಂಧನ
ಕುಂಬಳೆ: ಪಾನ್‌ ಬೀಡ ಅಂಗಡಿಯ ಮರೆಯಲ್ಲಿ ಪಾನ್‌ ಮಸಾಲೆ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ನಿವಾಸಿ ಮೌನೇಶ್‌ ಸೋಂಕಾರ್‌ (38)ನನ್ನು ಬಂಧಿಸಿದ ಕುಂಬಳೆ ಪೊಲೀಸರು 176 ಪ್ಯಾಕೆಟ್‌ ಪಾನ್‌ ಮಸಾಲೆ ವಶಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next