ಬೆಂಗಳೂರು: ಬೇಸಿಗೆ ಶಕೆ ಎಂದು ಮನೆಯ ಮುಖ್ಯ ಬಾಗಿಲು ತೆರೆದು ಮಲಗಿದ್ದ ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ದಾಳಿ ನಡೆದಿರುವ ಘಟನೆ ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಯೊಬ್ಬ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ದುರ್ಘಟನೆಯಲ್ಲಿ ನಂದಿನಿಲೇಔಟ್‌ನ ಗಣೇಶ ಬ್ಲಾಕ್ ನಿವಾಸಿ ದೇವಿ (51) ಎಂಬ ಮಹಿಳೆಗೆ ಸುಟ್ಟ ಗಾಯಗಳಾಗಿದ್ದು, ಕೃತ್ಯ ಎಸಗಿದ ಆರೋಪದ ಮೇಲೆ ನಟನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ದೇವಿ ಅವರಿಗೆ ಶೇ.20ರಷ್ಟು ಸುಟ್ಟ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.
ಈ ಹಿಂದೆ ಬಿಎಂಟಿಸಿಯಲ್ಲಿ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದ ದೇವಿ, ಅನಾರೋಗ್ಯ ಕಾರಣದಿಂದ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಸದ್ಯ ಡ್ರಾಮಾ ಆರ್ಟಿಸ್ಟ್ ಆಗಿದ್ದಾರೆ. ನಂದಿನಿ ಲೇಔಟ್ ಗಣೇಶ ಬ್ಲಾಕ್‌ನಲ್ಲಿ ಇಬ್ಬರು ಪುತ್ರರೊಂದಿಗೆ ವಾಸವಾಗಿದ್ದಾರೆ. ಮಾ.17ರಂದು ರಾತ್ರಿ ಶಕೆ ಹಿನ್ನೆಲೆಯಲ್ಲಿ ಮನೆಯ ಬಾಗಿಲು ಹಾಕದೆ ಮೂವರು ಮಲಗಿದ್ದರು. ಮುಂಜಾನೆ 4.30ರ ಸುಮಾರಿಗೆ ಯಾರೋ ಅಪರಿಚಿತ ವ್ಯಕ್ತಿ ಆ್ಯಸಿಡ್ ಮಾದರಿಯ ದ್ರಾವಣವನ್ನು ದೇವಿ ಅವರ ಮುಖ ಮತ್ತು ಬೆನ್ನಿನ ಮೇಲೆ ಬಾಟಲಿಯನ್ನು ಎಸೆದಿದ್ದಾನೆ. ಅದರಿಂದ ದೇಹದಲ್ಲಿ ಉರಿ ಕಾಣಿಸಿಕೊಂಡಿದ್ದು, ಕೂಡಲೇ ಕೆ.ಸಿ.ಜನರಲ್ ಆಸ್ಪತ್ರೆಗೆ ಹೋಗಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಪೊಲೀಸರಿಗೂ ಸೆಡ್ಡು ಹೊಡೆದು ಹೆದ್ದಾರಿಯಲ್ಲಿ ಯುವಕರ ವ್ಹೀಲಿಂಗ್
ನಾಟಕ ಕಂಪನಿಯಲ್ಲಿ ಇಬ್ಬರೂ ಕೆಲಸ: ಬಂಧಿತ ಆರೋಪಿ ಹಾಗೂ ದೇವಿ ಅವರು ಒಂದೇ ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಗಲಾಟೆ ಉಂಟಾಗಿ, ಅದರಿಂದ ಆಕ್ರೋಶಗೊಂಡ ಆರೋಪಿ ಕೃತ್ಯ ಎಸಗಿದ್ದಾನೆ ಎಂಬ ಮಾಹಿತಿ ಇದೆ. ಅಲ್ಲದೆ, ಅದು ಆಸಿಡ್ ಅಲ್ಲ, ಆಸಿಡ್ ಮಾದರಿಯಲ್ಲಿರುವ ವಸ್ತು ಎಂದು ಹೇಳಲಾಗುತ್ತಿದೆ. ದ್ರಾವಣವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಸ್ಪಷ್ಟತೆ ತಿಳಿಯಲಿದೆ ಎಂದು ಪೊಲೀಸರು ಹೇಳಿದರು.